ಗದಗ, ಜು. 17: ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣ, ಕಾನೂನು ಸುವ್ಯವಸ್ಥೆ ಹಾಗೂ ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬೇರೆ ಎಲ್ಲ ಕೆಲಸಗಳನ್ನು ಬದಿಗಿಟ್ಟು ಮೊದಲು ಬರ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆ-ಕಾಲೇಜುಗಳಿಂದ ಹಿಡಿದು ಜೈಲುಗಳವರೆಗೂ ಡ್ರಗ್ಸ್ ಮಾರಾಟ ಜಾಲ ವ್ಯಾಪಿಸಿದೆ ಎಂದು ಆರೋಪಿಸಿದರು.
“ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚುತ್ತಿದ್ದಾರೆ. ಆದರೆ ಸ್ಥಳೀಯ ಪೊಲೀಸರಿಗೆ ಅದು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಯವರೇ ಕರ್ನಾಟಕ ಡ್ರಗ್ಸ್ ಉತ್ಪಾದನೆಯ ಕೇಂದ್ರವಾಗುತ್ತಿದೆ ಎಂದು ಹೇಳಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ” ಎಂದು ಹೇಳಿದರು.
ಪೊಲೀಸ್ ಇಲಾಖೆಗೆ ಡ್ರಗ್ಸ್ ಪೆಡ್ಲರ್ಗಳು ಹಾಗೂ ಸಪ್ಲೈಯರ್ಗಳ ಬಗ್ಗೆ ಮಾಹಿತಿ ಇದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, “ಇದರಿಂದ ಕೆಲವರು ಈ ಜಾಲದಲ್ಲಿ ಶಾಮೀಲಾಗಿರುವ ಅನುಮಾನ ಮೂಡುತ್ತದೆ” ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಗ್ಯಾಂಗ್ರೇಪ್ ಹಾಗೂ ಡ್ರಗ್ಸ್ ಸಂಬಂಧಿತ ಅಪರಾಧಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ ಬೊಮ್ಮಾಯಿ, “ಹಗಲಲ್ಲೇ ಕೊಲೆಗಳು ನಡೆಯುತ್ತಿವೆ. ಕಾನೂನಿನ ಭಯವೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರದ ಮೊದಲ ಕರ್ತವ್ಯ ಕಾನೂನು ಸುವ್ಯವಸ್ಥೆ ಕಾಪಾಡುವುದು. ಅದರಲ್ಲಿ ಸರ್ಕಾರ ವಿಫಲವಾದರೆ ಜನರು ತಕ್ಕ ಉತ್ತರ ನೀಡುತ್ತಾರೆ” ಎಂದು ಎಚ್ಚರಿಸಿದರು.
‘ಸಿಎಂಗೆ ಎರಡು ಕೆಲಸ ಮಾತ್ರ ಮುಖ್ಯ’
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಕ್ಷಣ ಎರಡು ವಿಷಯಗಳಿಗೆ ಆದ್ಯತೆ ನೀಡಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.
- ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಬೇಕು.
- ಕಾನೂನು ಸುವ್ಯವಸ್ಥೆ ಹಾಗೂ ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಬಿಡದಿ ಟೌನ್ಶಿಪ್ ವಿಚಾರದಲ್ಲಿ ಸಿಎಂ ವಿರುದ್ಧ ವಾಗ್ದಾಳಿ
ಬಿಡದಿ ಟೌನ್ಶಿಪ್ ಯೋಜನೆ ಕುರಿತು ಮಾತನಾಡಿದ ಬೊಮ್ಮಾಯಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಅವರು ಈ ವಿಚಾರವನ್ನು ವೈಯಕ್ತಿಕ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
“ಈ ಯೋಜನೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆ ಆಗಿದ್ದರೆ, ಅದನ್ನು ನನಸು ಮಾಡಲು ಡಿ.ಕೆ. ಶಿವಕುಮಾರ್ ಅವರಿಗೆ ಇಷ್ಟೊಂದು ಆಸಕ್ತಿ ಯಾಕೆ? ಕುಮಾರಸ್ವಾಮಿ ಅವರ ಕನಸನ್ನು ನನಸು ಮಾಡುವ ಮೂಲಕ ಯಾರನ್ನು ಖುಷಿಪಡಿಸಲು ಹೊರಟಿದ್ದಾರೆ?” ಎಂದು ಪ್ರಶ್ನಿಸಿದರು.
“ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು. ಈಗಲೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಅವರ ಆ ಕನಸನ್ನೂ ಈ ಸರ್ಕಾರ ಈಡೇರಿಸುತ್ತದೆಯೇ? ಇಲ್ಲವೇ ಕೇವಲ ಟೌನ್ಶಿಪ್ ಯೋಜನೆಗೆ ಮಾತ್ರ ಆಸಕ್ತಿ ತೋರಿಸುತ್ತಿದೆಯೇ?” ಎಂದು ವ್ಯಂಗ್ಯವಾಡಿದರು.
“ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಕನಸಿನೊಳಗೆ ಹೋಗಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಯೋಜನೆಯ ಹಿಂದೆ ಇರುವ ನಿಜವಾದ ಉದ್ದೇಶವೇನು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು” ಎಂದು ಬೊಮ್ಮಾಯಿ ಆಗ್ರಹಿಸಿದರು.
ಬಿಜೆಪಿ ಹೋರಾಟ ಕ್ಕೆಬೆಂಬಲ
ಬಿಡದಿ ಟೌನ್ಶಿಪ್ ವಿರುದ್ಧ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ತಾವು ಪೂರ್ವನಿಗದಿತ ಕಾರ್ಯಕ್ರಮದ ಕಾರಣ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಬೊಮ್ಮಾಯಿ, ಪಕ್ಷದ ಎಲ್ಲಾ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಸೋನಂ ವಾಂಗ್ಚುಕ್ ಕುರಿತು
ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಅವರ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಿದೆ. ಅವರು ಶೀಘ್ರದಲ್ಲೇ ಉಪವಾಸ ಅಂತ್ಯಗೊಳಿಸಲಿ ಎಂಬುದು ಎಲ್ಲರ ಆಶಯ ಎಂದು ಹೇಳಿದರು.
.

