Table of Contents
ಧಾರವಾಡ, ಜು.16 : ಧಾರವಾಡ ನಗರ ಬುಧವಾರ ರಾತ್ರಿ ಕಂಡ ಭೀಕರ ದೃಶ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸಮಾಜದಲ್ಲಿ ಗೌರವಾನ್ವಿತ ವೈದ್ಯರಾಗಿದ್ದ ಪತಿಯನ್ನೇ ಪತ್ನಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಅಷ್ಟಕ್ಕೇ ನಿಲ್ಲದೆ ತನ್ನದೇ ಎಂಟು ವರ್ಷದ ಮಗನ ಮೇಲೂ ಮಾರಣಾಂತಿಕವಾಗಿ ಚಾಕು ಇರಿದಿರುವ ಘಟನೆ ರಂಕಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ವರದಿ: ಮಹಲಿಂಗೇಶ ಹಿರೇಮಠ. ಗದಗ
ಮನೆಯೊಳಗೆ ರಕ್ತದ ಮಡುವಿನಲ್ಲಿ ಪತಿಯ ಮೃತದೇಹ ಬಿದ್ದಿದ್ದರೆ, ಇನ್ನೊಂದು ಕೊಠಡಿಯಲ್ಲಿ ತೀವ್ರ ಗಾಯಗೊಂಡ ಮಗು ಉಸಿರಾಟಕ್ಕಾಗಿ ಹೋರಾಡುತ್ತಿತ್ತು. ಇಂತಹ ಭೀಕರ ದೃಶ್ಯವನ್ನು ಕಂಡ ಪೊಲೀಸರು ಕೂಡ ಕೆಲಕಾಲ ದಂಗಾಗಿದ್ದಾರೆ.
ಮೃತರನ್ನು ಹುಬ್ಬಳ್ಳಿ ಚಿರಾಯು ಆಸ್ಪತ್ರೆಯ ಅರವಳಿಕೆ ತಜ್ಞ, ಡಾ. ಕಿರಣ್ ಹೊನಣ್ಣವರ್ (45) ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಪ್ರಿಯಾಂಕಾ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನದ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಒಂದೇ ಮನೆಯೊಳಗೆ ಎರಡು ಭೀಕರ ದೃಶ್ಯ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿ ವಾಸವಾಗಿದ್ದ ಅಪಾರ್ಟ್‌ಮೆಂಟ್‌ನ ಒಂದು ಕೊಠಡಿಯಲ್ಲಿ ಡಾ. ಕಿರಣ್ ಹೊನಣ್ಣವರ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ಹಲವು ಕಡೆ ಚಾಕು ಇರಿತದ ಗಾಯಗಳಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಇದೇ ವೇಳೆ ಮತ್ತೊಂದು ಕೊಠಡಿಯಲ್ಲಿ ಅವರ ಎಂಟು ವರ್ಷದ ಪುತ್ರ ನೇಹಿತ್ ಕೂಡ ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ನರಳುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಗುವಿನ ಸ್ಥಿತಿ ಕಂಡು ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆ ಮಂಗಳವಾರ ರಾತ್ರಿಯೇ ನಡೆದಿದೆ ಎನ್ನಲಾಗಿದ್ದು, ಕಿರಣ್ ಮನೆಯವರು ಫೋನ ಮಾಡಿದಾಗ, ಪತ್ನಿ ಪ್ರೀಯಾಂಕ ಫೋನ ಕರೆ ಸ್ವೀಕರಿಸಿ, ಹೊರಗಡೆ ಹೋಗಿದ್ದಾರೆ ಎಂದು ಹೇಳುತ್ತಿದ್ದಳಂತೆ. ಹೀಗೆ ಅನುಮಾನಗೊಂಡ ಕುಟುಂಬಸ್ಥರು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಿಂದ ಧಾರವಾಡದ ಅಪಾರ್ಟಮೆಂಟ್ ನ ಕಿರಣ್ ಮನೆ ಬಾಗಿಲು ಬಡಿದಿದ್ದಾರೆ. ಅದೆಷ್ಟೇ ಹೊತ್ತು ಬಾಗಿಲು ತಟ್ಟಿದರೂ, ತೆರೆಯದ ಹಿನ್ನೆಲೆ, ತಕ್ಷಣ ಪೊಲೀಸರಿಗೆ ಮಾಹಿತಿ ನಿಡಿದ್ದಾರೆ. ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಮಗನ ಸ್ಥಿತಿ ಕಂಡು ದಂಗಾದ ಪೊಲೀಸ್ ಆಯುಕ್ತ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ, ಎಸಿಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ಮನೆಯೊಳಗೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಇನ್ನೂ ಮಗು ಉಸಿರಾಡುತ್ತಿರುವುದನ್ನು ಗಮನಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕ್ಷಣಮಾತ್ರವೂ ವಿಳಂಬ ಮಾಡಲಿಲ್ಲ. ಆಂಬುಲೆನ್ಸ್‌ಗಾಗಿ ಕಾಯದೆ ಗಾಯಗೊಂಡಿದ್ದ ಮಗುವನ್ನು ತಾವೇ ಹೆಗಲೇರಿಸಿಕೊಂಡು ಹೊರಗೆ ತಂದು ತಮ್ಮ ವಾಹನದಲ್ಲೇ ಖಾಸಗಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.
ಪೊಲೀಸ್ ಆಯುಕ್ತರ ಸಮಯಪ್ರಜ್ಞೆ ಹಾಗೂ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಮಗುವಿಗೆ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಅದರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.
ಮಗು ನರಳುತ್ತಿದ್ದರೂ ಮೊಬೈಲ್ ನೋಡುತ್ತಿದ್ದ ಮಹಿಳೆ?
ಪ್ರಾಥಮಿಕ ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಚಾಕು ಇರಿತದಿಂದ ಮಗು ರಕ್ತದ ಮಡುವಿನಲ್ಲಿ ನರಳುತ್ತಿದ್ದ ಸಂದರ್ಭದಲ್ಲಿಯೂ ಆರೋಪಿತ ಮಹಿಳೆ ಮಗುವಿನ ಪಕ್ಕದಲ್ಲೇ ಕುಳಿತು ಮೊಬೈಲ್ ನೋಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.
ಆದರೆ ಈ ಕುರಿತು ಪೊಲೀಸರು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಈ ಮಾಹಿತಿಯ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.
ಏನಿದು ಕುಟುಂಬ ದುರಂತ?
ಡಾ. ಕಿರಣ್ ಹೊನಣ್ಣವರ್ ನಗರದ ಚಿರಾಯು ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದೊಳಗೆ ಯಾವುದೇ ಸಮಸ್ಯೆ ಇತ್ತೇ? ದಂಪತಿ ನಡುವೆ ಕಲಹ ನಡೆಯುತ್ತಿತ್ತೇ? ಮಾನಸಿಕ ಒತ್ತಡವೇ ಈ ದುರಂತಕ್ಕೆ ಕಾರಣವೇ? ಅಥವಾ ಇನ್ನಾವುದೇ ಕಾರಣ ಇದೆಯೇ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.
ಕುಟುಂಬಸ್ಥರ ಆಕ್ರಂದನ
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತ ವೈದ್ಯರ ಸಂಬಂಧಿಕರು ಹಾಗೂ ಸ್ನೇಹಿತರು ಅಪಾರ್ಟ್‌ಮೆಂಟ್‌ಗೆ ಧಾವಿಸಿದರು. ಡಾ. ಕಿರಣ್ ಅವರ ಸಹೋದರಿಯರ ಆಕ್ರಂದನ ಸ್ಥಳದಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸಿತು. ಕ್ಷಣಾರ್ಧದಲ್ಲಿ ನಗುನಗುತ್ತಿದ್ದ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು.
ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಮಹಜರು ನಡೆಸಿ ರಕ್ತದ ಕಲೆಗಳು, ಚಾಕು ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಆರೋಪಿ ಪ್ರಿಯಾಂಕಾಳನ್ನು ಪೊಲೀಸರು ವಶಕ್ಕೆ ಪಡೆದು ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಹೇಳಿಕೆ, ತಾಂತ್ರಿಕ ಸಾಕ್ಷ್ಯಗಳು ಹಾಗೂ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಕೊಲೆಯ ಹಿಂದಿನ ಕಾರಣವೇನು?
ದಂಪತಿ ನಡುವೆ ಕುಟುಂಬ ಕಲಹವೇ ಈ ದುರ್ಘಟನೆಗೆ ಕಾರಣವೇ? ಪೂರ್ವಯೋಜಿತ ಸಂಚು ರೂಪಿಸಿ ಕೃತ್ಯ ಎಸಗಲಾಗಿದೆಯೇ? ಅಥವಾ ಕ್ಷಣಿಕ ಆಕ್ರೋಶದಿಂದ ಈ ಭೀಕರ ಕೃತ್ಯ ನಡೆದಿದೆಯೇ? ಎಂಬ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಹಿಂದಿನ ನಿಖರ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ಬಹಿರಂಗವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

