ಸುದ್ದಿ:
ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ನವಲಿ ಸಮೀಪದ ತುಂಗಭದ್ರಾ ನದಿಯಲ್ಲಿ ನಿರ್ಲಕ್ಷ್ಯದಿಂದ ನಡೆದ ಘಟನೆ ಒಂದು ದೊಡ್ಡ ದುರಂತವನ್ನು ತಪ್ಪಿಸಿದೆ. ಶಿಂಗಟಾಲೂರು ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದ ಭಕ್ತರ ಗುಂಪು ನದಿಯನ್ನು ಟ್ರ್ಯಾಕ್ಟರ್ ಮೂಲಕ ದಾಟಲು ಮುಂದಾದ ವೇಳೆ ಹತ್ತಾರು ಜನರ ಜೀವ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ.
ಬಾವಿಕಟ್ಟಿ ಗ್ರಾಮದ ನಿವಾಸಿಗಳು ಜಾತ್ರೆಗೆ ಹೋಗುವ ಉದ್ದೇಶದಿಂದ ಟ್ರ್ಯಾಕ್ಟರ್ ಏರಿ ನದಿಗೆ ಇಳಿದಿದ್ದರು. ಆರಂಭದಲ್ಲಿ ನೀರಿನ ಮಟ್ಟ ಕಡಿಮೆ ಇದ್ದ ಕಾರಣ ಯಾವುದೇ ಅಪಾಯ ಇಲ್ಲವೆಂದು ಭಾವಿಸಲಾಗಿತ್ತು. ಆದರೆ ನದಿಯ ಮಧ್ಯಭಾಗ ತಲುಪುತ್ತಿದ್ದಂತೆ ನೀರಿನ ಸೆಳೆತ ಏಕಾಏಕಿ ಹೆಚ್ಚಾಗಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮುಳುಗುವ ಹಂತಕ್ಕೆ ತಲುಪಿತು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮೇಲೆ ಇದ್ದ ಸುಮಾರು 15ಕ್ಕೂ ಹೆಚ್ಚು ಜನ ಆತಂಕಕ್ಕೆ ಒಳಗಾದರು.
ವರದಿ: ಮಹಲಿಂಗೆಶ ಹಿರೇಮಠ.ಗದಗ
ಅಪಾಯದ ಸ್ಥಿತಿಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಪ್ರವೃತ್ತರಾಗಿ ತೆಪ್ಪಗಳ ಸಹಾಯದಿಂದ ನದಿಗೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವರು ಪ್ರಾಣಾಪಾಯದಲ್ಲಿದ್ದವರನ್ನು ಒಂದೊಬ್ಬರಾಗಿ ಸುರಕ್ಷಿತವಾಗಿ ದಡಕ್ಕೆ ಕರೆತಂದು ಕನಿಷ್ಠ 10ಕ್ಕೂ ಹೆಚ್ಚು ಜನರ ಜೀವ ಉಳಿಸಿದರು. ಮೀನುಗಾರರ ಧೈರ್ಯ ಹಾಗೂ ಸಮಯೋಚಿತ ಕ್ರಮದಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.

ನದಿಯಲ್ಲಿ ಸಿಲುಕಿಕೊಂಡಿದ್ದ ಟ್ರ್ಯಾಕ್ಟರ್ ಅನ್ನು ಬಳಿಕ ಜೆಸಿಬಿ ಯಂತ್ರದ ಸಹಾಯದಿಂದ ಹೊರತೆಗೆದು ದಡಕ್ಕೆ ತರಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ನದಿಯನ್ನು ದಾಟುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂಬ ಅವಶ್ಯಕತೆಯನ್ನು ಮತ್ತೆ ಒತ್ತಿಹೇಳಿದೆ.
ಬ್ರಿಡ್ಜ್ ಮೂಲಕ ಸುರಕ್ಷಿತವಾಗಿ ಹೋಗುವ ಅವಕಾಶವಿದ್ದರೂ, ಬೇಗ ಜಾತ್ರೆ ತಲುಪಬೇಕೆಂಬ ಉದ್ದೇಶದಿಂದ ಟ್ರ್ಯಾಕ್ಟರ್ ಅನ್ನು ನದಿಗೆ ಇಳಿಸಿದ ಚಾಲಕನ ನಿರ್ಲಕ್ಷ್ಯವೇ ಈ ಅಪಾಯಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಮೀನುಗಾರರ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ತಕ್ಷಣದ ನೆರವಿನಿಂದ ಅನೇಕ ಜೀವಗಳು ಉಳಿದಿವೆ. ಅಪಾಯದಿಂದ ಪಾರಾದ ಭಕ್ತರು ಬಳಿಕ ಮತ್ತೆ ತಮ್ಮ ಯಾತ್ರೆಯನ್ನು ಮುಂದುವರಿಸಿಕೊಂಡು ಶಿಂಗಟಾಲೂರು ವೀರಭದ್ರೇಶ್ವರ ಜಾತ್ರೆಗೆ ತೆರಳಿದರೆಂಬ ಮಾಹಿತಿ ಲಭ್ಯವಾಗಿದೆ.ಹಾಗೂ ಆ ವೀರಭದ್ರೆಶ್ವರನೇ ಪವಾಡ ಸದೃಶ್ಯದಲ್ಲಿ ಈ ದೊಡ್ಡ ಅನಾಹುಥ ತಪ್ಪಿಸದೆನೆಂಬ ಮಾತು ಸಾರ್ವಜನಿಕರದ್ದಾಗಿದೆ.
