ಗದಗ ಏ. 30: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಮೃದ್ಧಿ ಸಿದ್ಲಿಂಗ ಅವರು ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಕಾಲೇಜು ಹಾಗೂ ಜಿಲ್ಲೆಗೆ ಹೆಮ್ಮೆಯ ಕ್ಷಣ ತಂದಿದ್ದಾರೆ.
ಸಮೃದ್ಧಿ ಸಿದ್ಲಿಂಗ ಅವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 595 ಅಂಕಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ಸಾಮಾನ್ಯ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದುಕೊಂಡು, ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಈ ಸಾಧನೆ ಕುರಿತು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿದ್ದಲಿಂಗೇಶ್ವರ ಎಚ್. ಪಾಟೀಲ ಅವರು ಸಂತಸ ವ್ಯಕ್ತಪಡಿಸಿ, ಸರ್ಕಾರಿ ಕಾಲೇಜುಗಳಲ್ಲಿಯೇ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಕೀರ್ತಿ ಸಮೃದ್ಧಿ ಸಿದ್ಲಿಂಗ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಕಾನೂನು ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ ಅವರು ಪ್ರತಿಕ್ರಿಯಿಸಿ, ಶಿಸ್ತು ಮತ್ತು ಕಠಿಣ ಪರಿಶ್ರಮದ ಮೂಲಕ ಉನ್ನತ ಸಾಧನೆ ಸಾಧ್ಯ ಎಂಬುದನ್ನು ಸಮೃದ್ಧಿ ಸಿದ್ಲಿಂಗ ಅವರು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ವಿದ್ಯಾರ್ಥಿನಿಯ ಪೋಷಕರಿಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸಿದರು.

ಒಟ್ಟಿನಲ್ಲಿ, ಸಮೃದ್ಧಿ ಸಿದ್ಲಿಂಗ ಅವರ ಸಾಧನೆ ಗದಗ ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಉತ್ತಮ ಫಲಿತಾಂಶ ಸಾಧಿಸಬಹುದೆಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ.
