ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಪ್ರಶಸ್ತಿಗೂ ವಾಣಿಜ್ಯ ಮಹಾವಿದ್ಯಾಲಯ ಭಾಜನ
ಗದಗ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕೋಶ, ಬೆಂಗಳೂರು ವತಿಯಿಂದ ನೀಡಲಾಗುವ 2023-24ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಗೆ ಗದಗದ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಬಾಹುಬಲಿ ಪಿ. ಜೈನ್ ಅವರು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕವೂ ರಾಜ್ಯಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಮಹಾವಿದ್ಯಾಲಯಕ್ಕೆ ಮತ್ತೊಂದು ಗರಿಮೆಯಾಗಿದೆ.
2021-22, 2022-23 ಹಾಗೂ 2023-24ನೇ ಸಾಲಿನ ಮೂರು ವರ್ಷಗಳ ಅವಧಿಯಲ್ಲಿ ಕೈಗೊಂಡ ಸಮಾಜಮುಖಿ ಕಾರ್ಯಚಟುವಟಿಕೆಗಳು ಮತ್ತು ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಪ್ರೊ. ಬಾಹುಬಲಿ ಜೈನ್ ಅವರ ಹೆಸರನ್ನು ರಾಜ್ಯಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಈ ಅವಧಿಯಲ್ಲಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕವು ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಸ್ವಚ್ಛತೆ ಹಾಗೂ ಸಾಮಾಜಿಕ ಜಾಗೃತಿ ಕ್ಷೇತ್ರಗಳಲ್ಲಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದೆ.
ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿರುವ ಘಟಕವು ಮೂರು ವರ್ಷಗಳಲ್ಲಿ 2,500ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದು, ಮಹಾವಿದ್ಯಾಲಯದ ಕ್ರೀಡಾಂಗಣವೊಂದರಲ್ಲೇ 920 ಸಸಿಗಳನ್ನು ಬೆಳೆಸಿದೆ. ಜಿಲ್ಲಾ ಹಾಕಿ ಕ್ರೀಡಾಂಗಣದ ಆವರಣ, ದತ್ತು ಗ್ರಾಮಗಳಾದ ಅಂತೂರು-ಬೆಂತೂರು, ಅಸುಂಡಿ ಪ್ರಾಥಮಿಕ ಶಾಲಾ ಆವರಣ ಸೇರಿದಂತೆ ವಿವಿಧೆಡೆ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೆ, 15ಕ್ಕೂ ಹೆಚ್ಚು ರಕ್ತದಾನ ಶಿಬಿರಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಕಣ್ಣಿನ ತಪಾಸಣಾ ಶಿಬಿರಗಳು ಹಾಗೂ ಏಡ್ಸ್ ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ, ಲಯನ್ಸ್ ಕ್ಲಬ್, ಮೇರಾ ಯುವ ಭಾರತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನಮಂತ್ರಿ ಅವರ ವಿವಿಧ ಜನಪರ ಯೋಜನೆಗಳಾದ ಉಜ್ವಲ ಯೋಜನೆ, ಜನಧನ್ ಯೋಜನೆ, ಜೀವ ವಿಮಾ ಯೋಜನೆ, ಸ್ವಚ್ಛ ಭಾರತ್, ಬೇಟಿ ಬಚಾವೋ-ಬೇಟಿ ಪಢಾವೋ, ಕಿಸಾನ್ ಸಮ್ಮಾನ್ ಯೋಜನೆ, ಮೇಕ್ ಇನ್ ಇಂಡಿಯಾ, ಹರ್ ಘರ್ ತಿರಂಗಾ, ಮೇರಾ ಮಾಟಿ ಮೇರಾ ದೇಶ್, ಸಫಾಯಿ ಮಿತ್ರ ಸಮ್ಮಾನ್, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಹಾಗೂ ಪೋಕ್ಸೋ ಕಾಯ್ದೆ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ವಿಶೇಷವಾಗಿ ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿದ ಎನ್‌ಎಸ್‌ಎಸ್ ಘಟಕವು ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ನಿರ್ಗತಿಕರಿಗೆ 2,500ಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ವಿತರಿಸಿದೆ. 4,000ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ವಿತರಿಸುವುದರ ಜೊತೆಗೆ 1,500ಕ್ಕೂ ಹೆಚ್ಚು ಬಡವರಿಗೆ ಬಟ್ಟೆ ವಿತರಿಸಲಾಗಿದೆ. ಅಂತೂರು-ಬೆಂತೂರು ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲಿ ಆಶ್ರಯ ಪಡೆದಿದ್ದ ನಿರ್ಗತಿಕರಿಗೆ ನೆರವು ನೀಡಲಾಗಿದೆ. ಅಲ್ಲದೆ, 3,000 ಬಡ ಕುಟುಂಬಗಳಿಗೆ ಹಾಸಿಗೆ ಮತ್ತು ಹೊದಿಕೆಗಳನ್ನು ವಿತರಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸಲಾಗಿದೆ.
ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಪಕ್ಷಿಗಳ ದಾಹ ನೀಗಿಸುವ ಉದ್ದೇಶದಿಂದ ಮೂರು ವರ್ಷಗಳ ಅವಧಿಯಲ್ಲಿ 3,000ಕ್ಕೂ ಹೆಚ್ಚು ಮನೆಗಳಿಗೆ ಪಕ್ಷಿಗಳಿಗೆ ನೀರುಣಿಸುವ ಪಾತ್ರೆಗಳನ್ನು ವಿತರಿಸಲಾಗಿದೆ. ಕಪ್ಪತಗುಡ್ಡದಲ್ಲಿ ಮಳೆನೀರು ಸಂಗ್ರಹಣೆಗಾಗಿ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಜಲಸಂರಕ್ಷಣೆಯ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಮತದಾರರ ಜಾಗೃತಿ ಅಭಿಯಾನ, ಯುವ ಸಂಸತ್, ಸಂವಿಧಾನ ದಿನಾಚರಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.
ಈ ಎಲ್ಲ ಸಮಾಜಮುಖಿ ಕಾರ್ಯಚಟುವಟಿಕೆಗಳು ಮತ್ತು ಸಾಧನೆಗಳನ್ನು ಪರಿಗಣಿಸಿ ಪ್ರೊ. ಬಿ.ಪಿ. ಜೈನ್ ಅವರು ರಾಜ್ಯಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಗೆ ಹಾಗೂ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಅತ್ಯುತ್ತಮ ಘಟಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಕಳೆದ ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಮಟ್ಟದಲ್ಲಿ ಡಾ. ಡಿ.ಸಿ. ಪಾವುಟೆ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಪ್ರೊ. ಜೈನ್ ಅವರು ಈ ಬಾರಿ ರಾಜ್ಯಮಟ್ಟದ ಗೌರವಕ್ಕೆ ಪಾತ್ರರಾಗಿರುವುದು ವಿಶೇಷವಾಗಿದೆ.
ಪ್ರೊ. ಬಾಹುಬಲಿ ಪಿ. ಜೈನ್ ಅವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಕೆ.ವಿ. ಕುಷ್ಟಗಿ, ಚೇರ್ಮನ್ ಆನಂದ್ ಎಲ್. ಪೋತ್ನಿಸ್, ಉಪಾಧ್ಯಕ್ಷರಾದ ಪಿ.ಆರ್. ಅಡವಿ ಹಾಗೂ ಜಿ.ಬಿ. ಬಳಗಾನೂರು, ಕಾರ್ಯದರ್ಶಿ ಎ.ಡಿ. ಗೋಡಖಂಡಿ, ಖಜಾಂಚಿ ಮುಕುಂದ್ ಎಲ್. ಪೋತ್ನಿಸ್, ಸಹಕಾರ್ಯದರ್ಶಿ ಶೈಲೇಶ್ ಬಾಗ್ಮಾರ್, ಸಂಸ್ಥೆಯ ಗೌರವಾನ್ವಿತ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
