ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ 2026ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉತ್ಸಾಹದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗದಗ ವಿಭಾಗದ ನಿವೃತ್ತ ಜಂಟಿ ನಿರ್ದೇಶಕರಾದ ಡಾ. ಆರ್. ಎನ್. ಪಾಟೀಲ ಅವರು ಮಾತನಾಡಿ, “ಆರೋಗ್ಯವೇ ಭಾಗ್ಯ, ಕ್ರೀಡೆಯೇ ಆರೋಗ್ಯದ ಸಂಜೀವಿನಿ ಎಂಬ ಮಾತು ಅತ್ಯಂತ ಅರ್ಥಪೂರ್ಣವಾಗಿದೆ. ಶಿಕ್ಷಣವೆಂದರೆ ಕೇವಲ ಪುಸ್ತಕದ ಜ್ಞಾನ, ಪರೀಕ್ಷೆಯ ಅಂಕಗಳು ಮತ್ತು ಪದವಿಗಳನ್ನು ಗಳಿಸುವುದಷ್ಟೇ ಅಲ್ಲ. ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಯೂ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಈ ಎಲ್ಲ ಆಯಾಮಗಳ ಬೆಳವಣಿಗೆಗೆ ಕ್ರೀಡೆ ಮಹತ್ವದ ವೇದಿಕೆಯಾಗಿದೆ” ಎಂದರು.
ವೈದ್ಯನಾಗಿ ಮಕ್ಕಳ ಆರೋಗ್ಯದ ಕುರಿತು ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ಸ್ವಚ್ಛತೆ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳು ಬಹಳ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹದ ಚಟುವಟಿಕೆ ಹೆಚ್ಚುತ್ತದೆ, ಸ್ನಾಯುಗಳು ಬಲಗೊಳ್ಳುತ್ತವೆ, ದೇಹದ ಸಮತೋಲನ ಸುಧಾರಿಸುತ್ತದೆ ಹಾಗೂ ಮನಸ್ಸಿನಲ್ಲಿ ಉತ್ಸಾಹ ಮೂಡುತ್ತದೆ ಎಂದು ತಿಳಿಸಿದರು.
ಕ್ರೀಡೆಯಿಂದ ಮಕ್ಕಳಲ್ಲಿ ಶಿಸ್ತು, ಸಹಕಾರ, ಆತ್ಮವಿಶ್ವಾಸ, ನಾಯಕತ್ವ ಮತ್ತು ಸಹನೆಯಂತಹ ಮೌಲ್ಯಗಳು ಬೆಳೆಯುತ್ತವೆ. ಸಮಯಪಾಲನೆ ಮತ್ತು ನಿಯಮಗಳನ್ನು ಗೌರವಿಸುವ ಗುಣವನ್ನು ಶಿಸ್ತು ಬೆಳೆಸಿದರೆ, ತಂಡದೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವ ಮನೋಭಾವವನ್ನು ಸಹಕಾರ ಮೂಡಿಸುತ್ತದೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿಯನ್ನು ಆತ್ಮವಿಶ್ವಾಸ ನೀಡುತ್ತದೆ. ಜವಾಬ್ದಾರಿ ತೆಗೆದುಕೊಳ್ಳುವ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ನಾಯಕತ್ವ ಬೆಳೆಸುತ್ತದೆ. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬಹುದು ಎಂಬ ಪಾಠವನ್ನು ಸಹನೆ ಕಲಿಸುತ್ತದೆ ಎಂದು ವಿವರಿಸಿದರು.
“ಇಂದು ನೀವು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೀರಿ. ಕೆಲವರು ಬಹುಮಾನ ಗೆಲ್ಲಬಹುದು, ಇನ್ನು ಕೆಲವರು ಗೆಲ್ಲದೇ ಇರಬಹುದು. ಆದರೆ ಗೆಲುವು ಸಾಧಿಸುವುದು ಸಾಧನೆ, ಸೋಲನ್ನು ಸ್ವೀಕರಿಸುವುದು ಸಂಸ್ಕಾರ. ಕ್ರೀಡೆಯಲ್ಲಿ ಭಾಗವಹಿಸುವುದೇ ಮೊದಲ ಗೆಲುವು. ಸೋಲು ನಿಮ್ಮ ಪ್ರಯತ್ನಕ್ಕೆ ಅಂತ್ಯವಲ್ಲ; ಅದು ಮುಂದಿನ ಯಶಸ್ಸಿಗೆ ಮೆಟ್ಟಿಲು” ಎಂದು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
ಪ್ರತಿಯೊಬ್ಬ ಮಗುವಿನಲ್ಲಿಯೂ ಒಂದೊಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ, ಸೃಜನಶೀಲತೆ ಹಾಗೂ ಉತ್ತಮ ಗುಣಗಳನ್ನು ಗುರುತಿಸಿ ಬೆಳೆಸಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್, ದೂರದರ್ಶನ ಮತ್ತು ಕಂಪ್ಯೂಟರ್ಗಳ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯವನ್ನಾದರೂ ಹೊರಾಂಗಣ ಆಟಗಳಿಗೆ ಮೀಸಲಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವೈ. ಚಿಕ್ಕಟ್ಟಿ ಅವರು ಮಾತನಾಡಿ, “ಇಂದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ನಿಮ್ಮಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದು ಮುಖ್ಯವಲ್ಲ. ನೀವು ಎಷ್ಟು ಉತ್ಸಾಹದಿಂದ ಭಾಗವಹಿಸುತ್ತೀರಿ ಮತ್ತು ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೀರಿ ಎಂಬುದು ಮುಖ್ಯ. ಸ್ಪರ್ಧೆಯಲ್ಲಿ ಗೆಲ್ಲುವುದು ಸಾಧನೆಯಾದರೆ, ಸ್ಪರ್ಧೆಯಲ್ಲಿ ಭಾಗವಹಿಸುವುದು ಧೈರ್ಯದ ಸಂಕೇತವಾಗಿದೆ” ಎಂದರು.
ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೌರವಾನ್ವಿತ ಡಾ. ಆರ್. ಎನ್. ಪಾಟೀಲ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಅವರು, ತಮ್ಮ ಅಮೂಲ್ಯ ಸಮಯವನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲು ಆಗಮಿಸಿರುವುದು ಸಂಸ್ಥೆಯ ಎಲ್ಲರಿಗೂ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಆರ್. ಎನ್. ಪಾಟೀಲ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು, ದೈಹಿಕ ಶಿಕ್ಷಣ ಶಿಕ್ಷಕರಾದ ಗುರುನಾಥ ಪೂಜಾರ ಹಾಗೂ ಐಸಿಎಸ್ಇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ ರಾಠೋಡ ಮತ್ತು ತಂಡದವರು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ನಂತರ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಮುಖ್ಯ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿ, ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಸಿಬಿಎಸ್ಇ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ, ಐಸಿಎಸ್ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಸಿಬಿಎಸ್ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕರಾದ ಶ್ರೀಶೈಲ ಬಡಿಗೇರ ಹಾಗೂ ಶಿಕ್ಷಕಿ ಬೃಂದಾ ಬೆಲ್ಲದ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಗೀತ ಶಿಕ್ಷಕಿ ಶ್ರೀಮತಿ ಶ್ರೀದೇವಿ ಶಿಶುವಿನಹಳ್ಳಿ ಪ್ರಾರ್ಥನಾಗೀತೆ ಹಾಡಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಸಿಬಿಎಸ್ಇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಶ್ರೇಯಾ ಮುಳಗುಂದಮಠ ಹಾಗೂ ನಯನಾ ಚಿಲವೇರಿ ಮಾಡಿದರು. ಶಿಕ್ಷಕ ಜಾನ್ಸನ್ ದಂಡಾವತಿ ಸ್ವಾಗತಿಸಿದರು. ಶಿಕ್ಷಕ ರಾಹುಲ್ ಮಾಡೊಳ್ಳಿ ವಂದನಾರ್ಪಣೆ ಸಲ್ಲಿಸಿದರು.
ನಂತರ ಮುಖ್ಯ ಅತಿಥಿಗಳು ಗುಂಡು ಎಸೆಯುವ ಮೂಲಕ ಮಕ್ಕಳ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.
