ಗದಗ, ಮೇ 30: ರಾಜ್ಯ ಸರ್ಕಾರ ಐತಿಹಾಸಿಕ ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸಲು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಸಂದರ್ಭದಲ್ಲಿಯೇ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ ಅವರ ನೇತೃತ್ವದಲ್ಲಿ ನಡೆದಿರುವ ಪ್ರಾಚ್ಯವಶೇಷಗಳ ಸ್ವಚ್ಛತಾ ಕಾರ್ಯ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹಲವುಪ್ರಶ್ನೆಗಳ, ಜೊತೆಗೆ ಆಕ್ರೋಶ ಹುಟ್ಟುಹಾಕಿದೆ.
ವರದಿ: ಮಹಲಿಂಗೇಶ ಹಿರೇಮಠ. ಗದಗ
ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಲಕ್ಕುಂಡಿಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, 2026ರೊಳಗೆ 50 ಬಾವಿ ಹಾಗೂ 50 ದೇವಾಲಯಗಳನ್ನು ಗುರುತಿಸಿ ಅನಾವರಣಗೊಳಿಸುವ ಗುರಿಯನ್ನು ಘೋಷಿಸಿದ್ದಾರೆ. ಈಗಾಗಲೇ ಲಕ್ಕುಂಡಿಯಲ್ಲಿ 10 ಬಾವಿ, 10 ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದ್ದು, ಪುರಾತತ್ವ ಸ್ಮಾರಕಗಳ ಸಂಖ್ಯೆ 70ರ ಗಡಿ ದಾಟಿದೆ. ಸ್ಮಾರಕಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ 10.16 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. 1200ಕ್ಕೂ ಹೆಚ್ಚು ಪ್ರಾಚ್ಯವಶೇಷಗಳಿಗೆ ಈಗಾಗಲೇ ಸಂಖ್ಯೆ ನಿಗದಿಪಡಿಸಲಾಗಿದ್ದು, ಲಕ್ಕುಂಡಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಬಹುದಾದ ಪುರಾತತ್ವ ತಾಣವನ್ನಾಗಿ ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ.

ಇಂತಹ ಸಂದರ್ಭದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ ಅವರ ನೇತೃತ್ವದಲ್ಲಿ ನಡೆದಿರುವ ಒಂದು ಕಾರ್ಯ ಇದೀಗ ಪ್ರಶ್ನೆಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಲಕ್ಕುಂಡಿಯಲ್ಲಿ ಪತ್ತೆಯಾಗಿರುವ ಐತಿಹಾಸಿಕ ಮಹತ್ವದ ಕಲ್ಲಿನ ಪ್ರಾಚ್ಯವಶೇಷವೊಂದನ್ನು ಹಳ್ಳದಲ್ಲಿ ಹರಿಯುತ್ತಿರುವ ಪಾಚಿಗಟ್ಟಿದ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುತ್ತಿರುವ ದೃಶ್ಯ ಕಂಡುಬಂದಿದೆ. ವಿಡಿಯೋದಲ್ಲಿ ಆಯುಕ್ತ ಡಾ. ಶರಣು ಗೊಗೇರಿ ಅವರು ಸ್ಥಳದಲ್ಲೇ ನಿಂತು ತಮ್ಮ ಸಿಬ್ಬಂದಿಯಿಂದ ಈ ಕಾರ್ಯ ನಡೆಸಿಸುತ್ತಿರುವುದು ಗೋಚರಿಸುತ್ತದೆ.
ಇನ್ನೂ ವಿಶೇಷವೆಂದರೆ, ಈ ವಿಡಿಯೋವನ್ನು ಸ್ವತಃ ಡಾ. ಶರಣು ಗೊಗೇರಿ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಇದರಿಂದ ಪುರಾತತ್ವ ಸ್ಮಾರಕಗಳ ಸಂರಕ್ಷಣೆಯ ವಿಧಾನಗಳ ಕುರಿತು ಹೊಸ ಪ್ರಶ್ನೆಗಳು ಉದ್ಭವಿಸಿವೆ.
ಒಂದೆಡೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು, ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೀಗೆ ಹಲವಾರು ನಾಯಕರ ಸಾರಥ್ಯದಲ್ಲಿ ಲಕ್ಕುಂಡಿಯ ಸ್ಮಾರಕಗಳ ಸಂರಕ್ಷಣೆಗೆ ಸಾಂಕೇತಿಕವಾಗಿ ಹಾಲಿನ ಅಭಿಷೇಕ ಮಾಡುವ ಮೂಲಕ ಸಂರಕ್ಷಣಾ ಕಾರ್ಯಗಳಿಗೆ ಇದೇ ಮೇ 2 ರಂದು ಚಾಲನೆ ನೀಡಿದ್ದರು. ಅಲ್ಲದೇ ಪಾರಂಪರಿಕ ಸಂಪತ್ತಿನ ಬಗ್ಗೆ ಸರ್ಕಾರದ ಬದ್ಧತೆಯನ್ನು ಅವರು ನಿರಂತರವಾಗಿ ತಮ್ಮ ಪ್ರಯತ್ನದ ಮೂಲಕ ಸರ್ಕಾರದ ಮಟ್ಟದಲ್ಲಿ ಅತ್ಯಂತ ಆಸಕ್ತಿಯಿಂದ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಮತ್ತೊಂದೆಡೆ, ಸ್ಮಾರಕಗಳ ಸಂರಕ್ಷಣೆಯ ಹೊಣೆ ಹೊತ್ತಿರುವ ಅಧಿಕಾರಿಗಳೇ ವೈಜ್ಞಾನಿಕ ವಿಧಾನಗಳನ್ನು ಅನುಸರಿಸದೇ, ಹಳ್ಳದಲ್ಲಿ ಹರಿಯುತ್ತಿರುವ ನೀರಿನಲ್ಲಿ ಪ್ರಾಚ್ಯವಶೇಷಗಳನ್ನು ತೊಳೆದು ಸ್ವಚ್ಛಗೊಳಿಸಿರುವುದು ಎಷ್ಟು ಸಮಂಜಸ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪುರಾತತ್ವ ಸ್ಮಾರಕಗಳು ಮತ್ತು ಪ್ರಾಚ್ಯವಶೇಷಗಳ ಸಂರಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸೇರಿದಂತೆ ವಿವಿಧ ಸಂಸ್ಥೆಗಳು ನಿರ್ದಿಷ್ಟ ಮಾರ್ಗಸೂಚಿಗಳು ಹಾಗೂ ವೈಜ್ಞಾನಿಕ ವಿಧಾನಗಳನ್ನು ರೂಪಿಸಿವೆ. ಶತಮಾನಗಳ ಇತಿಹಾಸವನ್ನು ಹೊತ್ತಿರುವ ಶಿಲ್ಪಗಳು, ಕೆತ್ತನೆಗಳು ಮತ್ತು ಪ್ರಾಚ್ಯವಸ್ತುಗಳನ್ನು ಸ್ವಚ್ಛಗೊಳಿಸುವ ವೇಳೆ ತಜ್ಞರ ಸಲಹೆ, ಸೂಕ್ತ ತಾಂತ್ರಿಕ ವಿಧಾನಗಳು ಮತ್ತು ಎಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆಯೇ? ತಜ್ಞರ ಸಲಹೆ ಪಡೆಯಲಾಗುತ್ತಿದೆಯೇ? ಎಂಬ ಪ್ರಶ್ನೆಗಳೂ ಉದ್ಭವಿಸಿವೆ.
“ಒಂದೆಡೆ ಕೋಟಿ ಕೋಟಿ ರೂಪಾಯಿ ಅನುದಾನ ನೀಡಿ ಸ್ಮಾರಕಗಳ ಸಂರಕ್ಷಣೆಗೆ ಸರ್ಕಾರ ಒತ್ತು ನೀಡುತ್ತಿದೆ. ಮತ್ತೊಂದೆಡೆ ಅಮೂಲ್ಯ ಪ್ರಾಚ್ಯವಶೇಷಗಳನ್ನು ಹಳ್ಳದ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುವುದು ಇದು ಯಾವ ಸಂರಕ್ಷಣಾ ವಿಧಾನ?” ಎಂದು ಇತಿಹಾಸಕ್ತರು ಮತ್ತು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಲಕ್ಕುಂಡಿಯಲ್ಲಿ ಈಗಾಗಲೇ ಸಾವಿರಾರು ವರ್ಷಗಳ ಇತಿಹಾಸವನ್ನು ಹೊತ್ತಿರುವ ಅನೇಕ ಪ್ರಾಚ್ಯವಶೇಷಗಳು ಪತ್ತೆಯಾಗುತ್ತಿವೆ. ಇಂತಹ ಅಮೂಲ್ಯ ಪರಂಪರೆಯ ಸಂರಕ್ಷಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ವೈಜ್ಞಾನಿಕವಲ್ಲದ ಕ್ರಮಗಳು ಅನುಸರಿಸಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸುವ ಕನಸಿಗೆ ಸಚಿವ ಎಚ್.ಕೆ. ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿ ಶ್ರಮಿಸುತ್ತಿರುವ ಸಂದರ್ಭದಲ್ಲಿ, ಅಧಿಕಾರಿಗಳ ಕಾರ್ಯವೈಖರಿಯೂ ಅದಕ್ಕೆ ಪೂರಕವಾಗಬೇಕಿದೆ. ಪುರಾತತ್ವ ಸ್ಮಾರಕಗಳ ಸಂರಕ್ಷಣೆಯಲ್ಲಿ ವೈಜ್ಞಾನಿಕತೆ, ತಜ್ಞರ ಮಾರ್ಗದರ್ಶನ ಹಾಗೂ ನಿಗದಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಇದೀಗ ಲಕ್ಕುಂಡಿಯ ಪುರಾತತ್ವ ಸಂರಕ್ಷಣೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
