Home » News » ಮುಂಡರಗಿ:ಮನೆಗೆ ಬೀಗ ಹಾಕಿ ಹೊರಹೋಗುವ ಮುನ್ನ ಎಚ್ಚರ..! ಹಗಲಿನಲ್ಲೇ 13 ಲಕ್ಷಕ್ಕೂ ಅಧಿಕ ಚಿನ್ನಾಭರಣ ದೋಚಿದ ಕಳ್ಳರು..!

ಮುಂಡರಗಿ:ಮನೆಗೆ ಬೀಗ ಹಾಕಿ ಹೊರಹೋಗುವ ಮುನ್ನ ಎಚ್ಚರ..! ಹಗಲಿನಲ್ಲೇ 13 ಲಕ್ಷಕ್ಕೂ ಅಧಿಕ ಚಿನ್ನಾಭರಣ ದೋಚಿದ ಕಳ್ಳರು..!

by CityXPress
0 comments

ಮುಂಡರಗಿ: ಮನೆಗೆ ಬೀಗ ಹಾಕಿ ಹೊರಹೋಗುವ ಮುನ್ನ ಸಾರ್ವಜನಿಕರು ಎಚ್ಚರ ವಹಿಸಬೇಕಾದಂತಹ ಮನೆ ಕಳ್ಳತನ ಪ್ರಕರಣ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿದ ಖದೀಮರು ಸುಮಾರು 13 ಲಕ್ಷರೂಪಾಯಿಗೂ ಅಧಿಕ ಮೌಲ್ಯದ 180 ಕ್ಕೂ ಹೆಚ್ಚು ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಎಡಿ ನಗರದ ಭೂಮರೆಡ್ಡಿ ಶಾಲೆ ಸಮೀಪದ ವಸಂತ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸಮಯವನ್ನು ಬಳಸಿಕೊಂಡ ಖದೀಮರು ಮನೆಯೊಳಗೆ ನುಗ್ಗಿ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಘಟನೆಯ ವಿಶೇಷವೆಂದರೆ, ಕಳ್ಳರು ಮನೆಯ ಮುಂಬಾಗಿಲು ಹಾಗೂ ಹಿಂಬಾಗಿಲನ್ನು ಮುರಿಯದೇ ಅಥವಾ ಒಡೆಯದೇ ಮನೆಯೊಳಗೆ ಪ್ರವೇಶಿಸಿದ್ದಾರೆ. ಮನೆಯ ಮುಂಭಾಗಿಲಿನಲ್ಲಿದ್ದ ಇಂಟರ್‌ಲಾಕ್ಅನ್ನು ತೆಗೆದು ಅತ್ಯಂತ ಸುಲಭವಾಗಿ ಮನೆಯೊಳಗೆ ನುಗ್ಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮನೆಯ ಮಾಲೀಕರ ಮಾಹಿತಿ ಪ್ರಕಾರ, ಮನೆಯ ಕೀಲಿಯು ತಮ್ಮ ಬಳಿ ಹಾಗೂ ಮನೆಯ ಕೆಲಸದವರ ಬಳಿ ಮಾತ್ರ ಇತ್ತು. ಇದನ್ನು ಹೊರತುಪಡಿಸಿ ಬೇರೆ ಯಾರ ಬಳಿಯೂ ಮನೆಯ ಕೀ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ, ಕಳ್ಳರು ಮನೆಯ ಭದ್ರತಾ ವ್ಯವಸ್ಥೆ ಮತ್ತು ಬೀಗದ ಬಗ್ಗೆ ಮಾಹಿತಿ ಪಡೆದುಕೊಂಡೇ ಕೃತ್ಯ ಎಸಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

banner

ಕಳ್ಳರು ಮನೆಯೊಳಗಿದ್ದ ಸುಮಾರು 180 ಕ್ಕೂ ಹೆಚ್ಚು ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ. ಕಳುವಾಗಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ 13 ಲಕ್ಷ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಂಡರಗಿ ಸಿಪಿಐ ಅಯ್ಯನಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ.

ಬೆರಳಚ್ಚು ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು, ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಹಗಲು ಹೊತ್ತಿನಲ್ಲೇ ನಡೆದಿರುವ ಈಮನೆ ಕಳ್ಳತನ ಪ್ರಕರಣ ಮುಂಡರಗಿ ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದ್ದು, ಮನೆಗೆ ಬೀಗ ಹಾಕಿ ಹೊರಗೆ ತೆರಳುವ ಮುನ್ನ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಈಘಟನೆ ಎಚ್ಚರಿಕೆಯ ಗಂಟೆಯಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb