Home » News » ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಹೊಣೆ: ಚಿಕ್ಕಟ್ಟಿ ಶಾಲೆಗಳಲ್ಲಿ ‘ಬಚಪನ್ ಸುರಕ್ಷಿತ್’ ಅಭಿಯಾನ

ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಹೊಣೆ: ಚಿಕ್ಕಟ್ಟಿ ಶಾಲೆಗಳಲ್ಲಿ ‘ಬಚಪನ್ ಸುರಕ್ಷಿತ್’ ಅಭಿಯಾನ

by CityXPress
0 comments

ಗದಗ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಮಕ್ಕಳನ್ನು ಅಶ್ಲೀಲ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಗದಗ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ ‘ಬಚಪನ್ ಸುರಕ್ಷಿತ್’ ಅಭಿಯಾನ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ಅಭಿರಕ್ಷಕರಾದ ಶ್ರೀ ಗುರುರಾಜ ಗೌರಿ ಮಾತನಾಡಿ, “ಮಕ್ಕಳು ಸಮಾಜದ ಅಮೂಲ್ಯ ಸಂಪತ್ತು. ಅವರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ” ಎಂದು ಹೇಳಿದರು.

ಪೋಕ್ಸೊ ಕಾಯ್ದೆಯ ಕುರಿತು ಮಾಹಿತಿ ನೀಡಿದ ಅವರು, 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಈ ಕಾಯ್ದೆಯ ರಕ್ಷಣೆ ದೊರೆಯುತ್ತದೆ. ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಸಮಾನವಾಗಿ ಕಾಯ್ದೆ ಅನ್ವಯವಾಗುತ್ತದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಹಾಗೂ ಲೈಂಗಿಕ ಕಿರುಕುಳ ತಡೆಗಟ್ಟುವುದು, ಮಕ್ಕಳನ್ನು ಅಶ್ಲೀಲ ಚಟುವಟಿಕೆಗಳಿಗೆ ಬಳಸಿಕೊಳ್ಳುವುದನ್ನು ನಿಯಂತ್ರಿಸುವುದು ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ಮಕ್ಕಳ ದೂರುಗಳನ್ನು ದಾಖಲಿಸುವ ಸಂದರ್ಭದಲ್ಲಿ ಅವರ ವಯಸ್ಸು, ಮನಸ್ಥಿತಿ ಮತ್ತು ಗೌರವಕ್ಕೆ ಆದ್ಯತೆ ನೀಡಬೇಕು. ಸಂತ್ರಸ್ತ ಮಕ್ಕಳ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು. ಇಂತಹ ಅಪರಾಧಗಳ ಕುರಿತು ಮಾಹಿತಿ ದೊರೆತಾಗ ಸಂಬಂಧಪಟ್ಟ ಪೊಲೀಸ್ ಇಲಾಖೆ ಅಥವಾ ವಿಶೇಷ ಬಾಲ ಪೊಲೀಸ್ ಘಟಕಕ್ಕೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದರು.

banner

ಪಾಲಕರು ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ವರ್ತನೆಗಳ ನಡುವಿನ ವ್ಯತ್ಯಾಸ ತಿಳಿಸಬೇಕು. ವೈಯಕ್ತಿಕ ಸುರಕ್ಷತೆಯ ಕುರಿತು ಅರಿವು ಮೂಡಿಸಬೇಕು. ಮಕ್ಕಳು ಯಾವುದೇ ಸಮಸ್ಯೆಯನ್ನು ಹೇಳಿಕೊಂಡಾಗ ಅವರನ್ನು ದೂಷಿಸದೆ ತಾಳ್ಮೆಯಿಂದ ಆಲಿಸಬೇಕು. ಅಗತ್ಯವಿದ್ದಲ್ಲಿ ಸೂಕ್ತ ಕಾನೂನು ನೆರವು ಒದಗಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಸುರಕ್ಷತೆ ನಿಮ್ಮ ಹಕ್ಕು. ಯಾರಾದರೂ ಅನುಚಿತವಾಗಿ ವರ್ತಿಸಿದರೆ ಅಥವಾ ಅವರ ವರ್ತನೆಯಿಂದ ಭಯ, ಅಸಹಜತೆ ಉಂಟಾದರೆ ಮೌನವಾಗಿ ಸಹಿಸಿಕೊಳ್ಳಬೇಡಿ. ತಂದೆ-ತಾಯಿ, ಶಿಕ್ಷಕರು ಅಥವಾ ನಂಬಿಕಸ್ಥ ಹಿರಿಯರಿಗೆ ತಿಳಿಸಿ. ಸಹಾಯ ಕೇಳುವುದು ತಪ್ಪಲ್ಲ; ಅದು ನಿಮ್ಮ ಹಕ್ಕು” ಎಂದು ಹೇಳಿದರು.

ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಫೋಟೋಗಳು, ದೂರವಾಣಿ ಸಂಖ್ಯೆ ಹಾಗೂ ಇತರ ಖಾಸಗಿ ಮಾಹಿತಿಯ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು. ಕಾನೂನಿನ ಅರಿವು ಇದ್ದಾಗ ಮಾತ್ರ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯ. ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದು

ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಶ್ರೀ ಸಿದ್ಧರಾಮೇಶ್ವರ ಗಡೇದ ಮಾತನಾಡಿ, ಪೋಕ್ಸೊ (POCSO) ಎಂದರೆ Protection of Children from Sexual Offences Act (ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ) ಎಂದು ವಿವರಿಸಿದರು. ಭಾರತ ಸರ್ಕಾರ 2012ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಹಾಗೂ ಸಂತ್ರಸ್ತ ಮಕ್ಕಳಿಗೆ ಕಾನೂನು ರಕ್ಷಣೆ ಒದಗಿಸಲು ಇದು ಮಹತ್ವದ ಕಾಯ್ದೆಯಾಗಿದೆ ಎಂದರು.

ಪೋಕ್ಸೊ ಕಾಯ್ದೆಯ ಅರಿವು ಕೇವಲ ಕಾನೂನು ಅರಿವಲ್ಲ; ಅದು ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿದೆ. ಮಕ್ಕಳ ರಕ್ಷಣೆ ಕೇವಲ ಸರ್ಕಾರ ಅಥವಾ ಪೊಲೀಸರ ಜವಾಬ್ದಾರಿಯಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ಕಾಯ್ದೆಯ ಅನುಷ್ಠಾನದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ಮಾನವೀಯತೆ ಮತ್ತು ಸಂವೇದನಾಶೀಲತೆಯಿಂದ ವರ್ತಿಸಬೇಕು. ಮಕ್ಕಳ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಕಾನೂನಿನ ಪ್ರಕಾರ ತನಿಖೆ ನಡೆಸಬೇಕು. ಸಂತ್ರಸ್ತ ಮಗುವಿನ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಅಗತ್ಯ ರಕ್ಷಣೆ ಮತ್ತು ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು. ಯಾರೇ ಆಗಲಿ ಅನುಚಿತವಾಗಿ ವರ್ತಿಸಿದರೆ ಅಥವಾ ಅಸುರಕ್ಷಿತ ಭಾವನೆ ಮೂಡಿಸಿದರೆ ಅದನ್ನು ನಿರ್ಲಕ್ಷಿಸಬಾರದು. ತಕ್ಷಣ ತಂದೆ-ತಾಯಿ, ಶಿಕ್ಷಕರು ಅಥವಾ ನಂಬಿಕಸ್ಥ ಹಿರಿಯರಿಗೆ ತಿಳಿಸಬೇಕು. ಯಾವುದೇ ಸಮಸ್ಯೆಯನ್ನು ಮುಚ್ಚಿಡಬಾರದು ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಅಪರಾಧವನ್ನು ಕಂಡಾಗ ಅಥವಾ ಅದರ ಕುರಿತು ಮಾಹಿತಿ ದೊರೆತಾಗ ಮೌನವಾಗಿರದೆ ಸೂಕ್ತ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

“ಮಕ್ಕಳಿಗೆ ಭಯದ ವಾತಾವರಣವಲ್ಲ, ಭದ್ರತೆಯ ವಾತಾವರಣ ಬೇಕು. ಮಕ್ಕಳಿಗೆ ಮೌನವಲ್ಲ, ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಧೈರ್ಯ ಬೇಕು. ಮಕ್ಕಳ ಸುರಕ್ಷತೆಯೇ ನಮ್ಮ ಸಮಾಜದ ಸುರಕ್ಷತೆ. ಪ್ರತಿಯೊಂದು ಮಗುವೂ ನಿರ್ಭೀತಿಯಿಂದ, ಸಂತೋಷದಿಂದ ಹಾಗೂ ಗೌರವದಿಂದ ಬದುಕುವ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಅತಿಥಿಗಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರು ‘ಬಚಪನ್ ಸುರಕ್ಷಿತ್’ ಅಭಿಯಾನದ ಕುರಿತು ಅರಿವು ಮೂಡಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ಅಭಿರಕ್ಷಕರಾದ ಶ್ರೀ ಗುರುರಾಜ ಗೌರಿ ಹಾಗೂ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಶ್ರೀ ಸಿದ್ಧರಾಮೇಶ್ವರ ಗಡೇದ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ಅಭಿರಕ್ಷಕರಾದ ಶ್ರೀ ಎ.ಐ. ಬಂಕಾಪುರ, ಗದಗದ ಪ್ಯಾನಲ್ ಅಡ್ವಕೇಟ್ ಶ್ರೀ ಬಿ.ಎಸ್. ಹೊಂಬಳ, ಪ್ಯಾನಲ್ ಅಡ್ವಕೇಟ್ ಶ್ರೀ ವಿನಾಯಕ ಕೌಜಗೇರಿ, ಬಿಪಿನ್ ಚಿಕ್ಕಟ್ಟಿ ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಬಿಪಿನ್ ಚಿಕ್ಕಟ್ಟಿ ವಿನಯ್ ಚಿಕ್ಕಟ್ಟಿ ಐಸಿಎಸ್‌ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಸಿಬಿಎಸ್‌ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕರಾದ ಪ್ರೊ. ಶ್ರೀಶೈಲಶಿ. ಬಡಿಗೇರ ಅವರು ಕಾರ್ಯಕ್ರಮ ನಿರೂಪಿಸುವುದರ ಜೊತೆಗೆ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb