ವರದಿ : ಪರಮೇಶ ಎಸ್ ಲಮಾಣಿ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ, ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಸಮಗ್ರ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ ಹದಿನೈದನೇಯ ದಿನಕ್ಕೆ ಕಾಲಿಟ್ಟಿತು.
ಈ ಸಂದರ್ಭದಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕಿಸಾನ್ ಜಾಗೃತಿ ಸಂಘ ಮುಂಡರಗಿ ಘಟಕದ ವಿಶ್ವನಾಥ ತಾಂಬ್ರಗುಂಡಿ ರೋಷಾವೇಷದಿಂದ ಮಾತನಾಡಿ ಹದಿನೈದು ದಿನಗಳಾದರೂ ಭಂಡ ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳು ಕಿವಿಗೊಡದೆ ಏನು ಮಾಡಿತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೂಲಿ ಕೇಳುತ್ತಿದ್ದಿರಿ, ಬಿಸಿಲು-ಮಳೆ, ಚಳಿ ಎಲ್ಲವನ್ನು ಅನುಭವಿಸಿ ನಿಮ್ಮನ್ನು ನಾವು ಕೂಲಿ ಕೇಳಬೇಕಾದ ಸಂದರ್ಭ ಒದಗಿರುವುದು ಮತ್ತು ರೈತರನ್ನು ಬೀದಿಗೆ ತಳ್ಳಿದಿರಲ್ಲ ನಾಚಿಕೆಯಾಗುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ ಅವರು ಇನ್ನು ಮುಂದೆ ಎಲ್ಲಾ ಚಳುವಳಿ ಕೈಬಿಟ್ಟು ನೀವು ತಲೆ ತಗ್ಗಿಸುವಂತೆ ವಿನೂತನ ರೀತಿಯ ಚಳುವಳಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಗಟ್ಟಿ ಮಾತನಾಡಿ ರೈತರು ಶಾಸಕರು, ರಾಜಕಾರಣಿಗಳು ಬಂದಾಗ ಅವರ ಮುಂದೆ ಹೋಗುವದನ್ನು ನಿಲ್ಲಿಸಿ, ಅವರೇ ನಿಮ್ಮ ಮನೆಯ ಬಾಗಿಲಿಗೆ ಬರುತ್ತಾರೆ. ಹದಿನೈದು ದಿನಗಳಿಂದಲೂ ಕಣ್ಣು ತೆರೆಯದ ಸರ್ಕಾರ ಕಣ್ಣಿದ್ದು ಕುರಡರಂತೆ ವರ್ತಿಸುತ್ತಿರುವುದು ಖಂಡನೀಯ. ಕುರ್ಚಿಯ ಕಿತ್ತಾಟದಲ್ಲಿ ಉತ್ತರ ಕರ್ನಾಟಕದ ರೈತರನ್ನೆ ಮರೆತ ಈ ಸರ್ಕಾರ ಇದ್ದರೇನು ಇಲ್ಲದಿದ್ದರೇನು, ಜಿಲ್ಲೆಯ ಉಸ್ತುವಾರಿ ಸಚಿವರು ಮಾತಿಗೆ ಬಾರದ ಖಾತೆಗಳನ್ನು ಹೊಂದಿ ಜಿಲ್ಲೆಯ ರೈತರ ಹೋರಾಟಕ್ಕೆ ಧ್ವನಿ ಎತ್ತದಿರುವುದು ವಿಷಾದನೀಯ ಎಂದರು.
ನಂತರ ಎಲ್ಲಾ ರೈತರು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ತಡೆದು ಮೊಳಕೆ ಹೊಡೆದ ಮತ್ತು ಹಾಳಾದ ಮೆಕ್ಕೆಜೋಳದ ತೆನೆಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಂದರ್ಭದಲ್ಲಿ ಡಾ.ಕುಮಾರ ಮಹಾರಾಜ,ಪೂರ್ಣಾಜಿ ಕರಾಟೆ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಸುರೇಶ ಹಟ್ಟಿ, ಶಿವಾನಂದ ಲಿಂಗಶೇಟ್ಟಿ, ಟಾಕಪ್ಪ ಸಾತಪೂತೆ, ರಮೇಶ ಹಂಗನಕಟ್ಟಿ, ಚಂದ್ರು ಮಾಗಡಿ, ಬಸವರಾಜ ಹಿರೇಮನಿ, ಡಾ.ಸಜ್ಜನ, ನಿಂಗಪ್ಪ ಭಂಡಾರಿ, ಜಗದೀಶಗೌಡ ಪಾಟೀಲ್, ಮಂಜುನಾಥ ಉಪ್ಪಾರ, ಮಲ್ಲಯ್ಯ ಗೊಂಡಬಾಳಮಠ ಮತ್ತಿತರಿದ್ದರು.
