Home » News » ವಿದ್ಯಾರ್ಥಿಗಳಲ್ಲಿ ಅಂತಃಪ್ರಜ್ಞೆ ಅರಿವು: ಚಿಕ್ಕಟ್ಟಿ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪರಿಚಯಾತ್ಮಕ ಸಭೆ: “ಸಮಯಕ್ಕೆ ಸರಿಯಾಗಿ ಬಾರದ ಬುದ್ಧಿ, ಸಾವಿರ ಬುದ್ಧಿ ಇದ್ದರೂ ರದ್ದಿ” – ಗೌರಿ ನಾಯರ್‌ಜೀ

ವಿದ್ಯಾರ್ಥಿಗಳಲ್ಲಿ ಅಂತಃಪ್ರಜ್ಞೆ ಅರಿವು: ಚಿಕ್ಕಟ್ಟಿ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪರಿಚಯಾತ್ಮಕ ಸಭೆ: “ಸಮಯಕ್ಕೆ ಸರಿಯಾಗಿ ಬಾರದ ಬುದ್ಧಿ, ಸಾವಿರ ಬುದ್ಧಿ ಇದ್ದರೂ ರದ್ದಿ” – ಗೌರಿ ನಾಯರ್‌ಜೀ

by CityXPress
0 comments

ಗದಗ:
ನಗರದ ಚಿಕ್ಕಟ್ಟಿ ಶಾಲಾ-ಕಾಲೇಜ್ ಆವರಣದಲ್ಲಿ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಅಂತಃಪ್ರಜ್ಞೆ (ಇಂಟ್ಯೂಷನ್) ಪ್ರಕ್ರಿಯೆ ಪರಿಚಯಾತ್ಮಕ ವಿಷಯದ ಕುರಿತು ವಿಶೇಷ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮನೋವಿಕಾಸ, ಏಕಾಗ್ರತೆ ಮತ್ತು ಸೃಜನಾತ್ಮಕ ಚಿಂತನೆ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ವಿಶ್ಲೇಷಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸೀನಿಯರ್ ಇಂಟರ್‌ನ್ಯಾಶನಲ್ ಶಿಕ್ಷಕಿಯಾದ ಶ್ರೀಮತಿ ಗೌರಿ ನಾಯರ್‌ಜೀ ಮಾತನಾಡಿ, “ಅಂತಃಪ್ರಜ್ಞೆ ಎಂಬುದು ನಮ್ಮೊಳಗಿನ ಜ್ಞಾನ. ಮನಸ್ಸು ಶಾಂತವಾಗಿದ್ದರೆ ಹಾಗೂ ಗಮನ ಕೇಂದ್ರಿಕೃತವಾಗಿದ್ದರೆ, ಒಳಗಿನ ಆಲೋಚನೆಗಳು ನಮಗೆ ಸರಿಯಾದ ಮಾರ್ಗದರ್ಶನ ನೀಡುತ್ತವೆ. ಇದು ಪಾಠಗಳನ್ನು ಕೇವಲ ನೆನಪಿಡುವುದಕ್ಕಿಂತ ಅವುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ” ಎಂದು ತಿಳಿಸಿದರು.

ಪರೀಕ್ಷೆಗಳು, ಸ್ಪರ್ಧೆಗಳು ಹಾಗೂ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಂತಃಪ್ರಜ್ಞೆ ವೇಗ ಮತ್ತು ನಿಖರತೆಯನ್ನು ನೀಡುತ್ತದೆ. ವಿಜ್ಞಾನ, ಕಲೆ, ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ಹೊಸತನದ ಚಿಂತನೆ ಬೆಳೆಯಲು ಇದು ಸಹಕಾರಿ ಎಂದು ಹೇಳಿದರು. “ಜ್ಞಾನ ಹೊರಗಿನಿಂದ ಬರುತ್ತದೆ, ಆದರೆ ಅಂತಃಪ್ರಜ್ಞೆ ಒಳಗಿನಿಂದ ಬರುತ್ತದೆ. ಈ ಎರಡೂ ಒಂದಾಗಿದಾಗ ಜೀವನದ ಮಾರ್ಗ ಬೆಳಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ, ವಿಚಾರಿಸುವುದು, ಕಲ್ಪನೆ ಮಾಡುವುದು ಹಾಗೂ ಸ್ವತಂತ್ರವಾಗಿ ಯೋಚಿಸುವುದು ಕಲಿಯಬೇಕು ಎಂದು ಸಲಹೆ ನೀಡಿದರು. “ಸಮಯಕ್ಕೆ ಸರಿಯಾಗಿ ಬಾರದ ಬುದ್ಧಿ, ಸಾವಿರ ಬುದ್ಧಿ ಇದ್ದರೂ ರದ್ದಿ” ಎಂಬ ಮಾತಿನ ಮೂಲಕ ಅಭ್ಯಾಸ ಮಾಡಿದ ವಿಷಯಗಳನ್ನು ನೆನಪಿನಲ್ಲಿ ಉಳಿಸಲು ಅಂತಃಪ್ರಜ್ಞೆಯ ಮಹತ್ವವನ್ನು ವಿವರಿಸಿದರು. ಈ ಭಾಷಣವನ್ನು ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾದ ಶ್ರೀ ಕುನಾಲ್ ಕೇತಕಾಳಿ ಅವರು ಕನ್ನಡಕ್ಕೆ ಅನುವಾದಿಸಿ ಉಪಸ್ಥಿತರಿಗೆ ವಿವರಿಸಿದರು.

banner

ಕಾರ್ಯಕ್ರಮದಲ್ಲಿ ಎಲ್‌ಇಡಿ ಪರದೆಯ ಮೂಲಕ ಜೂಮ್ ಸಭೆಯಲ್ಲಿ ಭಾಗವಹಿಸಿದ ಬೆಂಗಳೂರಿನ ಸುರಾನ್ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸಂದೀಪ್‌ಜೀ ಮಾತನಾಡಿ, “ವಿದ್ಯಾರ್ಥಿಗಳೊಳಗಿನ ಅನನ್ಯ ಸಾಮರ್ಥ್ಯ, ಕಲಿಯುವ ಕುತೂಹಲ ಮತ್ತು ಸಮಸ್ಯೆ ಪರಿಹಾರ ಶಕ್ತಿ ಅಂತಃಪ್ರಜ್ಞೆಯೇ ಆಗಿದೆ. ಶಿಕ್ಷಣ ವ್ಯವಸ್ಥೆಯ ಗುರಿ ಕೇವಲ ಪುಸ್ತಕ ಜ್ಞಾನವಲ್ಲ; ಸ್ವಚಿಂತನೆ, ಸೃಜನಶೀಲತೆ ಮತ್ತು ನಿರ್ಧಾರ ಸಾಮರ್ಥ್ಯ ಬೆಳೆಸುವುದಾಗಿದೆ” ಎಂದು ತಿಳಿಸಿದರು.

ಅವರು ವಿದ್ಯಾರ್ಥಿಗಳಲ್ಲಿರುವ ಅಂತಃಪ್ರಜ್ಞೆಯ ಲಕ್ಷಣಗಳನ್ನು ವಿವರಿಸಿ, ಹೊಸದನ್ನು ಹುಡುಕುವ ಜಿಜ್ಞಾಸೆ, ಪ್ರಶ್ನಿಸುವ ಮನಸ್ಸು, ಸೃಜನಾತ್ಮಕ ಚಿಂತನೆ ಮತ್ತು ‘ನಾನು ಮಾಡಬಲ್ಲೆ’ ಎಂಬ ಆತ್ಮವಿಶ್ವಾಸದಿಂದಲೇ ವಿಭಿನ್ನ ಜ್ಞಾನವನ್ನು ಪಡೆದು ಮುಂದುವರೆಯಲು ಸಾಧ್ಯ ಎಂದು ಹೇಳಿದರು. ಸಾಹಿತಿ ಶ್ರೀ ಜೆ.ಕೆ. ಜಮಾದಾರ್ ಅವರು ಯೋಗ, ಧ್ಯಾನ ಹಾಗೂ ಸುದರ್ಶನ ಕ್ರಿಯೆಯ ಕುರಿತು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಲು ಆಹ್ವಾನಿಸಿದಾಗ, ಸಂದೀಪ್‌ಜೀ ಅವರು ಸಂತಸದಿಂದ ಒಪ್ಪಿಕೊಂಡರು. ಪಾಲಕರು ಕೇಳಿದ ಪ್ರಶ್ನೆಗಳಿಗೆ ಸಹ ಸಮರ್ಪಕ ಉತ್ತರ ನೀಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕುಮಾರಿ ಸಾನ್ವಿಸಿಂಗ್ ಜಮಾದರ್ ಅವರು ಅಂತಃಪ್ರಜ್ಞೆಯ ಪ್ರಾಯೋಗಿಕ ಪ್ರದರ್ಶನ ನೀಡಿದರು. ಕಣ್ಣುಗಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರೂ ತಮ್ಮ ಮುಂದೆ ನಿಂತವರ ಆಕಾರ, ಉಡುಗೆ-ತೊಡುಗೆಯ ಬಣ್ಣ ಹಾಗೂ ಕೈಯಲ್ಲಿ ಇರುವ ವಸ್ತುಗಳನ್ನು ನಿಖರವಾಗಿ ಗುರುತಿಸಿ ವಿವರಿಸಿದರು. ಅಲ್ಲದೇ ಎಲ್‌ಇಡಿ ಪರದೆಯಲ್ಲಿದ್ದ ಪತ್ರಿಕೆಯ ವಿಷಯಗಳನ್ನು ಸಹ ಸರಾಗವಾಗಿ ಓದಿ ಸಭಿಕರನ್ನು ಆಶ್ಚರ್ಯಚಕಿತರನ್ನಾಗಿಸಿದರು. ಸಭೆಯ ವಿವಿಧ ಭಾಗಗಳಲ್ಲಿ ನಿಂತಿದ್ದ ವ್ಯಕ್ತಿಗಳನ್ನು ಗುರುತಿಸಿ ಅವರ ವಿವರಗಳನ್ನು ತಿಳಿಸಿದ ಪ್ರದರ್ಶನವನ್ನು ಕಂಡು ಪಾಲಕರು ನಿಬ್ಬೆರಗಾದರು.

ವಿದ್ಯಾದಾನ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಹುಯಿಲಗೋಳ್ ಮಾತನಾಡಿ, “ಯೋಗ ಕೇವಲ ವ್ಯಾಯಾಮವಲ್ಲ; ಮನಸ್ಸು, ದೇಹ ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಸಾಧನವಾಗಿದೆ. ಇದು ಏಕಾಗ್ರತೆ ಹೆಚ್ಚಿಸಿ, ಶಿಸ್ತಿನ ಜೀವನಶೈಲಿಯನ್ನು ರೂಪಿಸುತ್ತದೆ” ಎಂದರು. ಧ್ಯಾನವು ಒಳಗಿನ ಶಾಂತಿ ಮತ್ತು ಸಮಾಧಾನವನ್ನು ಅರಿಯಲು ಸಹಕಾರಿ ಎಂದು ತಿಳಿಸಿದರು. ಹಿಂದಿನ ದಿನಗಳಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ ಗುರುಜೀಯವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಿದ್ದನ್ನು ಅವರು ಸ್ಮರಿಸಿದರು.

ಅಧ್ಯಕ್ಷರಾದ ಪ್ರೊ. ಎಸ್.ವೈ. ಚಿಕ್ಕಟ್ಟಿ ಮಾತನಾಡಿ, “ವಿದ್ಯಾರ್ಥಿಗಳಲ್ಲಿರುವ ಅಂತಃಪ್ರಜ್ಞೆ ಸಹಜ ಗುಣ. ಅದನ್ನು ಜಾಗೃತಗೊಳಿಸುವುದು ಶಿಕ್ಷಣದ ಮುಖ್ಯ ಗುರಿ. ನಮ್ಮ ಸಂಸ್ಥೆಯ ಉದ್ದೇಶ ಕೇವಲ ಅಂಕ ನೀಡುವುದಲ್ಲ; ಆಳವಾದ ಚಿಂತನೆ, ಭಾವನಾತ್ಮಕ ಶಕ್ತಿ ಹಾಗೂ ಮಾನವೀಯತೆ ಹೊಂದಿದ ವ್ಯಕ್ತಿಗಳನ್ನು ರೂಪಿಸುವುದಾಗಿದೆ” ಎಂದು ಹೇಳಿದರು. ಯೋಗ ಮತ್ತು ಧ್ಯಾನವನ್ನು ವಿದ್ಯಾರ್ಥಿಗಳು ಮನೆಯಲ್ಲಿ ಸಹ ಅನುಸರಿಸಬೇಕೆಂದು, ಇದಕ್ಕೆ ಪಾಲಕರ ಸಹಕಾರ ಅವಶ್ಯಕ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೌರಿ ನಾಯರ್‌ಜೀ ಹಾಗೂ ಕುನಾಲ್ ಕೇತಕಾಳಿ ಅವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀ ಜೆ.ಕೆ. ಜಮಾದಾರ್, ಬಿಪಿನ್ ಚಿಕ್ಕಟ್ಟಿ ಬಿಸಿಎ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ವಿನಯ್ ಚಿಕ್ಕಟ್ಟಿ ಐಸಿಎಸ್‌ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಉಪಮುಖ್ಯೋಪಾಧ್ಯಾಯಿನಿ ಶ್ರೀಮತಿ ರಿಯಾನಾ ಮುಲ್ಲಾ, ವಾಯ್.ಎನ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಜೆ. ಭಟ್, ವಿನಯ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಲತಾ ಎಂ. ಬೆಲೇರಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ಉಪನ್ಯಾಸಕರಾದ ಶ್ರೀ ಶ್ರೀಶೈಲ ಶಿ. ಬಡಿಗೇರ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb