Home » News » ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಂತಲಾ ಪವರ್ ಲಿಮಿಟೆಡ್‌ಗೆ ಔದ್ಯಮಿಕ ಪ್ರವಾಸ

ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಂತಲಾ ಪವರ್ ಲಿಮಿಟೆಡ್‌ಗೆ ಔದ್ಯಮಿಕ ಪ್ರವಾಸ

by CityXPress
0 comments

ಗದಗ: ನಗರದ ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಪದವಿ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹುಬ್ಬಳ್ಳಿಯ ಶಾಂತಲಾ ಪವರ್ ಲಿಮಿಟೆಡ್ ಕಂಪನಿಗೆ ಒಂದು ದಿನದ ಔದ್ಯಮಿಕ ಪ್ರವಾಸವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಅಧ್ಯಕ್ಷರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿಯವರ ಇಚ್ಛೆಯ ಮೇರೆಗೆ ಹಾಗೂ ವಿನಯ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿನಯ್ ಎಸ್. ಚಿಕ್ಕಟ್ಟಿಯವರ ನಿರ್ದೇಶನದಂತೆ, ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿಯವರ ನೇತೃತ್ವದಲ್ಲಿ ದಿನಾಂಕ 14-03-2026 ರಂದು ಈ ಪ್ರವಾಸ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಶಾಂತಲಾ ಪವರ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕಾಡಪ್ಪ ಮೈಸೂರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ಕಲಿತು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿದರು. ಪರಿಶ್ರಮ, ಶಿಸ್ತು ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುಂದುವರಿದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲದೆ ಸಮಾಜ ಸೇವೆ ಮತ್ತು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸುಮಾರು ಮೂವತ್ತೈದು ವರ್ಷಗಳ ಹಿಂದೆ ಕೇವಲ 10 ಸಾವಿರ ರೂ. ಮೂಲಧನದಿಂದ ಆರಂಭವಾದ ಶಾಂತಲಾ ಪವರ್ ಲಿಮಿಟೆಡ್ ಕಂಪನಿ ಇಂದು ಹತ್ತು ಕೋಟಿಗೂ ಅಧಿಕ ವಹಿವಾಟಿನೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಸುಮಂಗಲಾ ಕೆ. ಮೈಸೂರು ಅವರ ನೇತೃತ್ವದಲ್ಲಿ ನೂರಾರು ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗಿಸಲಾಗುತ್ತಿದೆ. ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕಾಡಪ್ಪ ಮೈಸೂರು ಅವರಿಗೆ 2005ರಲ್ಲಿ ಮಾಜಿ ಪ್ರಧಾನಿ ಪ್ರಣಬ್ ಮುಖರ್ಜಿ ಅವರಿಂದ ‘ಶ್ರೇಷ್ಠ ಕೈಗಾರಿಕೋದ್ಯಮಿ’ ರಾಷ್ಟ್ರ ಪ್ರಶಸ್ತಿ ಲಭಿಸಿರುವುದನ್ನು ಅವರು ಸ್ಮರಿಸಿದರು.

banner

ಈ ಸಂದರ್ಭದಲ್ಲಿ ಕಾಡಪ್ಪ ಮೈಸೂರು ಅವರು ಕಂಪನಿಯ ವಿವಿಧ ಘಟಕಗಳ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿವರಿಸಿ ಸುಮಾರು ಎರಡು ಗಂಟೆಗಳ ಕಾಲ ಮಾರ್ಗದರ್ಶನ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯಮ ವೃದ್ಧಿಯಲ್ಲಿ ಲಿಮಿಟೆಡ್ ಕಂಪನಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಉದ್ಯಮಿ ಕಾಡಪ್ಪ ಮೈಸೂರು ಅವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿಗಳು ಉತ್ತಮ ತಂತ್ರಜ್ಞಾನ ಶಿಕ್ಷಣ ಪಡೆದು ಉದ್ಯಮ ಕ್ಷೇತ್ರದಲ್ಲಿ ತೊಡಗಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಈ ಔದ್ಯಮಿಕ ಪ್ರವಾಸದಲ್ಲಿ ಪ್ರಾಧ್ಯಾಪಕರಾದ ಪ್ರೊ. ಎಸ್. ಸುಭಾಷಗೌಡರ್, ಪ್ರೊ. ಶ್ರೀಶೈಲ ಶಿ. ಬಡಿಗೇರ, ಪ್ರೊ. ಮೇಘಾ ರಾಯ್ಕರ್, ಪ್ರೊ. ಶಿವಲೀಲಾ ಪಾಟೀಲ್, ಪ್ರಥಮ ದರ್ಜೆ ಸಹಾಯಕರಾದ ಕುಮಾರಿ ಮಾಧುರಿ ಶೇಷನಗೌಡ್ರ ಹಾಗೂ ವಿಶಾಲ ಕಂಪ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರವಾಸದಲ್ಲಿ ಉತ್ಸಾಹದಿಂದ ಭಾಗವಹಿಸಿ ಕೈಗಾರಿಕಾ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb