Home » News » ರೇಬಿಸ್ ತಡೆಗೆ ಜಾಗೃತಿ ಅಗತ್ಯ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮ

ರೇಬಿಸ್ ತಡೆಗೆ ಜಾಗೃತಿ ಅಗತ್ಯ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮ

by CityXPress
0 comments

ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಲಾ ವಿದ್ಯಾರ್ಥಿಗಳಲ್ಲಿ ರೇಬಿಸ್ ರೋಗದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. “ಜಾಗೃತಿ ನಮ್ಮ ರಕ್ಷಣೆ; ಸಮಯೋಚಿತ ಚಿಕಿತ್ಸೆ ನಮ್ಮ ಭದ್ರತೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ, ಗದಗದ ವಿಸ್ತರಣಾಧಿಕಾರಿ ಡಾ. ಜಗದೀಶ ಎಸ್. ಮಟ್ಟಿ ಅವರು, ಎಲ್‌ಇಡಿ ಸ್ಕ್ರೀನ್ ಮೂಲಕ ವಿದ್ಯಾರ್ಥಿಗಳಿಗೆ ರೇಬಿಸ್ ರೋಗದ ಕುರಿತು ಸಮಗ್ರ ಮಾಹಿತಿ ನೀಡಿದರು.

ಸೆಪ್ಟೆಂಬರ್ 28ರಂದು ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ ರೇಬಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ಫ್ರೆಂಚ್ ವಿಜ್ಞಾನಿ ಲೂಯಿಸ್ ಪ್ಯಾಶ್ಚರ್ ಅವರ ಪುಣ್ಯತಿಥಿಯ ದಿನವನ್ನು ವಿಶ್ವ ರೇಬಿಸ್ ದಿನವನ್ನಾಗಿ ಜಗತ್ತಿನಾದ್ಯಂತ ಪ್ರತಿವರ್ಷ ಆಚರಿಸಲಾಗುತ್ತದೆ. 2030ರ ಒಳಗೆ ನಾಯಿಯಿಂದ ಹರಡುವ ರೇಬಿಸ್ ರೋಗದ ನಿರ್ಮೂಲನೆ ಮಾಡುವ ಉದ್ದೇಶದಿಂದ ಸಮುದಾಯದಲ್ಲಿ ಹಾಗೂ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು ಮತ್ತು ಎಲ್ಲ ನಾಯಿಗಳಿಗೆ ಲಸಿಕೆ ನೀಡುವ ಮೂಲಕ ರೇಬಿಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನಾಯಿಯಿಂದ ಕಚ್ಚಿಸಿಕೊಂಡ ವಿದ್ಯಾರ್ಥಿಗಳು ಯಾವುದೇ ರೀತಿಯ ವಿಳಂಬ ಮಾಡದೆ ಮೊದಲು ತಮ್ಮ ಪಾಲಕರಿಗೆ ವಿಷಯ ತಿಳಿಸಬೇಕು. ರೇಬಿಸ್ ವೈರಸ್‌ನಿಂದ ಉಂಟಾಗುವ ಗಂಭೀರ ಸೋಂಕಾಗಿದ್ದು, ಸೋಂಕಿತ ಪ್ರಾಣಿಯ ಕಚ್ಚುವಿಕೆ ಅಥವಾ ಅದರ ಲಾಲಾರಸವು ಗಾಯ ಅಥವಾ ಚರ್ಮದ ಮುರಿದ ಭಾಗಕ್ಕೆ ತಾಗುವುದರಿಂದ ಮನುಷ್ಯರಿಗೆ ಸೋಂಕು ಹರಡಬಹುದು. ನಾಯಿಗಳು ರೇಬಿಸ್ ಹರಡುವ ಪ್ರಮುಖ ಪ್ರಾಣಿಗಳಲ್ಲೊಂದು ಎಂದು ವಿವರಿಸಿದರು.

banner

ಪ್ರಾಣಿಗಳು ಕಚ್ಚಿದಾಗ ಮೊದಲನೆಯದಾಗಿ ಗಾಬರಿಯಾಗದೆ, ಕಚ್ಚಿದ ಗಾಯವನ್ನು ಡಿಟರ್ಜಂಟ್, ಸಾಬೂನು ಮತ್ತು ಹರಿಯುವ ನೀರಿನಿಂದ ಸುಮಾರು 15 ನಿಮಿಷಗಳ ಕಾಲ ಚೆನ್ನಾಗಿ ತೊಳೆಯಬೇಕು. ನಂತರ ಸಾಧ್ಯವಾದಷ್ಟು ಬೇಗ ವೈದ್ಯಕೀಯ ಕೇಂದ್ರಕ್ಕೆ ತೆರಳಿ ವೈದ್ಯರ ಸಲಹೆ ಪಡೆಯಬೇಕು. ವೈದ್ಯರು ಗಾಯದ ಸ್ವರೂಪ ಮತ್ತು ಪ್ರಾಣಿಯ ಪರಿಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ರೇಬಿಸ್ ಲಸಿಕೆ ಹಾಗೂ ಇತರ ಅಗತ್ಯ ಚಿಕಿತ್ಸೆಯನ್ನು ಸೂಚಿಸುತ್ತಾರೆ. ವೈದ್ಯರು ಸೂಚಿಸಿದ ಲಸಿಕೆಗಳ ಪೂರ್ಣ ವೇಳಾಪಟ್ಟಿಯನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.

ಗಾಯ ಸಣ್ಣದಾಗಿದೆ, ಏನೂ ಆಗುವುದಿಲ್ಲ ಎಂದು ನಿರ್ಲಕ್ಷಿಸಬಾರದು. ಪ್ರಾಣಿ ಕಚ್ಚಿದ ನಂತರ ಮನೆಮದ್ದುಗಳ ಮೇಲೆ ಅವಲಂಬಿತವಾಗದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ರೇಬಿಸ್ ತಡೆಗಟ್ಟಲು ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸಬೇಕು. ಅಪರಿಚಿತ ಅಥವಾ ಬೀದಿ ಪ್ರಾಣಿಗಳನ್ನು ಕೆಣಕಬಾರದು. ಮಕ್ಕಳಿಗೆ ಪ್ರಾಣಿಗಳೊಂದಿಗೆ ಸುರಕ್ಷಿತವಾಗಿ ವರ್ತಿಸುವ ಕುರಿತು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

“ಜಾಗೃತಿ ನಮ್ಮ ರಕ್ಷಣೆ; ಸಮಯೋಚಿತ ಚಿಕಿತ್ಸೆ ನಮ್ಮ ಭದ್ರತೆ” ಎಂಬ ಸಂದೇಶದ ಮೂಲಕ ರೇಬಿಸ್ ಕುರಿತು ಜಾಗೃತಿ ಮೂಡಿಸಿ ನಮ್ಮ ಕುಟುಂಬ ಮತ್ತು ಸಮಾಜವನ್ನು ಸುರಕ್ಷಿತವಾಗಿರಿಸೋಣ. ಆರೋಗ್ಯವೇ ನಮ್ಮ ನಿಜವಾದ ಸಂಪತ್ತು. ಜಾಗೃತರಾಗಿರಿ, ಸುರಕ್ಷಿತರಾಗಿರಿ ಎಂದು ಡಾ. ಜಗದೀಶ ಎಸ್. ಮಟ್ಟಿ ತಿಳಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಕೆಎಂಎಫ್ ಧಾರವಾಡದ ವಿಶ್ರಾಂತ ಜಂಟಿ ನಿರ್ದೇಶಕ ಡಾ. ಮಹಾದೇವಪ್ಪ ಮಡಿವಾಳರ ಮಾತನಾಡಿ, ರೇಬಿಸ್ ಬಗ್ಗೆ ಭಯಪಡುವುದಕ್ಕಿಂತ ಮುನ್ನೆಚ್ಚರಿಕೆ ಮತ್ತು ತಕ್ಷಣದ ವೈದ್ಯಕೀಯ ಕ್ರಮಗಳ ಕುರಿತು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ ಎಂದರು.

ನಾಯಿ ಅಥವಾ ಇತರ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸುವುದು ಕೂಡ ರೇಬಿಸ್ ನಿಯಂತ್ರಣದ ಪ್ರಮುಖ ಭಾಗವಾಗಿದೆ. ಸಾಕುಪ್ರಾಣಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ಬೀದಿನಾಯಿಗಳೊಂದಿಗೆ ಅನಗತ್ಯವಾಗಿ ಆಟವಾಡುವುದು ಅಥವಾ ಅವುಗಳನ್ನು ಕೆಣಕುವುದನ್ನು ತಪ್ಪಿಸಬೇಕು. ಮಕ್ಕಳಿಗೆ ಪ್ರಾಣಿಗಳೊಂದಿಗೆ ಸುರಕ್ಷಿತವಾಗಿ ವರ್ತಿಸುವ ಕುರಿತು ಪೋಷಕರು ಮತ್ತು ಶಿಕ್ಷಕರು ಅರಿವು ಮೂಡಿಸಬೇಕು ಎಂದು ಹೇಳಿದರು.

ರೇಬಿಸ್ ತಡೆಗಟ್ಟುವಲ್ಲಿ ಸಾರ್ವಜನಿಕರ ಜಾಗೃತಿ, ಸಾಕುಪ್ರಾಣಿಗಳಿಗೆ ನಿಯಮಿತ ಲಸಿಕೆ, ಸುರಕ್ಷಿತ ಪ್ರಾಣಿ ನಿರ್ವಹಣೆ ಮತ್ತು ಸಮಯೋಚಿತ ವೈದ್ಯಕೀಯ ಚಿಕಿತ್ಸೆ—ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತವೆ. ಆರೋಗ್ಯದ ಬಗ್ಗೆ ಜಾಗೃತಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. “ತಕ್ಷಣದ ಕ್ರಮವೇ ರೇಬಿಸ್‌ನಿಂದ ರಕ್ಷಣೆಯ ಮೊದಲ ಹೆಜ್ಜೆ” ಎಂದು ಡಾ. ಮಹಾದೇವಪ್ಪ ಮಡಿವಾಳರ ತಿಳಿಸಿದರು.

ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್.ವೈ. ಚಿಕ್ಕಟ್ಟಿ ಗುರುಗಳು ಮಾತನಾಡಿ, ರೇಬಿಸ್ ರೋಗದ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸೇರಿದ್ದೇವೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಆರೋಗ್ಯ, ಸ್ವಚ್ಛತೆ, ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನೂ ನೀಡಲಾಗುತ್ತಿದೆ ಎಂದರು.

ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮೂಲಕ ಕುಟುಂಬ ಮತ್ತು ಸಮಾಜಕ್ಕೂ ತಲುಪಬೇಕು. ಆದ್ದರಿಂದ ರೇಬಿಸ್ ಬಗ್ಗೆ ಯಾವುದೇ ತಪ್ಪುಕಲ್ಪನೆಗಳಿಗೆ ಅವಕಾಶ ನೀಡದೆ, ವೈಜ್ಞಾನಿಕ ಮಾಹಿತಿಯನ್ನು ತಿಳಿದುಕೊಂಡು, ಅಗತ್ಯ ಸಂದರ್ಭಗಳಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ನಮ್ಮ ಕುಟುಂಬ ಮತ್ತು ಸಮಾಜವನ್ನು ರೇಬಿಸ್‌ನ ಅಪಾಯದಿಂದ ರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ, ಗದಗದ ವಿಸ್ತರಣಾಧಿಕಾರಿ ಡಾ. ಜಗದೀಶ ಎಸ್. ಮಟ್ಟಿ, ಕೆಎಂಎಫ್ ಧಾರವಾಡದ ವಿಶ್ರಾಂತ ಜಂಟಿ ನಿರ್ದೇಶಕ ಡಾ. ಮಹಾದೇವಪ್ಪ ಮಡಿವಾಳರ ಹಾಗೂ ಮಾತೋಶ್ರೀ ನಾಗರತ್ನ ಆರ್. ಈಳಿಗೇರ, ವಿಶ್ರಾಂತ ಮುಖ್ಯೋಪಾಧ್ಯಾಯರು, ಸವಣೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತೋಶ್ರೀ ನಾಗರತ್ನ ಆರ್. ಈಳಿಗೇರ, ವಿಶ್ರಾಂತ ಮುಖ್ಯೋಪಾಧ್ಯಾಯರು, ಸವಣೂರು; ವಿನಯ್ ಚಿಕ್ಕಟ್ಟಿ ಕಾಲೇಜಿನ ಪ್ರಾಚಾರ್ಯ ವಿನಯ್ ಎಸ್. ಚಿಕ್ಕಟ್ಟಿ; ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬಿಪಿನ್ ಎಸ್. ಚಿಕ್ಕಟ್ಟಿ; ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯೆ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ; ಉಪಪ್ರಾಚಾರ್ಯೆ ಶ್ರೀಮತಿ ರಿಯಾನಾ ಮುಲ್ಲಾ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಶ್ರೀಶೈಲ ಶಿಬಡಿಗೇರ ಕಾರ್ಯಕ್ರಮ ನಿರೂಪಣೆಯೊಂದಿಗೆ ಗಣ್ಯರನ್ನು ಸ್ವಾಗತಿಸಿ, ವಂದನಾರ್ಪಣೆ ನೆರವೇರಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb