ಮುಂಬೈ, ಏಪ್ರಿಲ್ 12: ಭಾರತೀಯ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದ ಅಪರೂಪದ ಪ್ರತಿಭೆ, ಅನೇಕ ದಶಕಗಳ ಕಾಲ ತನ್ನ ವಿಶಿಷ್ಟ ಕಂಠದಿಂದ ಸಂಗೀತ ಪ್ರೇಮಿಗಳ ಹೃದಯ ಗೆದ್ದ ಖ್ಯಾತ ಗಾಯಕಿ Asha Bhosle ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. 92 ವರ್ಷದ ತುಂಬು ಜೀವನವನ್ನು ಅವರು ಕಳೆದಿದ್ದು, ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ.

ಸಂಗೀತ ಲೋಕದ ಸರಸ್ವತಿ ಎಂದೇ ಹೆಸರಾಗಿರುವ Lata Mangeshkar ಅವರ ಸಹೋದರಿಯಾಗಿದ್ದ ಆಶಾ ಭೋಸ್ಲೆ, ಐದು ಮಂದಿ ಮಕ್ಕಳಲ್ಲಿ ಮೂರನೇಯವರಾಗಿದ್ದರು. ಸಂಗೀತವೇ ಜೀವನವಾಗಿದ್ದ ಕುಟುಂಬದಲ್ಲಿ ಜನಿಸಿದ ಆಶಾ, ಬಾಲ್ಯದಿಂದಲೇ ಗಾಯನದತ್ತ ಒಲವು ಬೆಳೆಸಿಕೊಂಡಿದ್ದರು. ಅವರ ತಂದೆ Deenanath Mangeshkar ಮರಾಠಿ ನಾಟಕ ರಂಗದ ಖ್ಯಾತ ಗಾಯಕ, ನಟ ಹಾಗೂ ನೃತ್ಯಗಾರರಾಗಿದ್ದು, ಕುಟುಂಬಕ್ಕೆ ಸಂಗೀತದ ಗಟ್ಟಿಯಾದ ಪೈಪೋಟಿ ನೆಲೆ ನೀಡಿದ್ದರು. ಆದರೆ ಅವರು ಮದ್ಯಪಾನದ ಅತಿರೇಕದಿಂದ ಅಕಾಲಿಕವಾಗಿ ನಿಧನರಾದಾಗ ಆಶಾಗೆ ಕೇವಲ 9 ವರ್ಷ ವಯಸ್ಸು ಮಾತ್ರ. ಆ ನಂತರ ಕುಟುಂಬದ ಜವಾಬ್ದಾರಿಯನ್ನು ಅಕ್ಕ ಲತಾ ಮಂಗೇಶ್ಕರ್ ತಮ್ಮ ಹೆಗಲಿಗೆ ಹೊತ್ತರು.
ಕುಟುಂಬದ ಜೀವನೋಪಾಯವೇ ಗಾಯನವಾಗಿದ್ದರಿಂದ ಆಶಾ ಭೋಸ್ಲೆಯೂ ಮರಾಠಿ ರಂಗಭೂಮಿಯಿಂದ ಸಿನಿಮಾಗಳಿಗೆ ಹಾಡಲು ಪ್ರವೇಶಿಸಿದರು. ಕೇವಲ 15ನೇ ವಯಸ್ಸಿನಲ್ಲೇ ಅವರು ಚಿತ್ರರಂಗದಲ್ಲಿ ಹಾಡಲು ಆರಂಭಿಸಿ, ಬೇಗನೆ ತಮ್ಮದೇ ಆದ ಗುರುತು ಮೂಡಿಸಿಕೊಂಡರು. ಆ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದ 31 ವರ್ಷದ ಗಣಪತ್ ರಾವ್ ಭೋಸ್ಲೆ ಅವರೊಂದಿಗೆ 16ನೇ ವಯಸ್ಸಿನಲ್ಲಿ ಮನೆವರ ತಿಳಿವಳಿಕೆಯಾಗದೆ ವಿವಾಹವಾಗಿದ್ದು, ಅವರ ಜೀವನದಲ್ಲಿ ಕಠಿಣ ಅಧ್ಯಾಯಕ್ಕೆ ಕಾರಣವಾಯಿತು.

ವಿವಾಹ ಜೀವನವು ಆಶಾ ಭೋಸ್ಲೆಗೆ ನೋವು, ಹಿಂಸೆ ಹಾಗೂ ಸಂಕಷ್ಟಗಳಿಂದ ಕೂಡಿತ್ತು. ಪತಿ ಹಾಗೂ ಪತಿಯ ಮನೆಯವರಿಂದ ನಿರಂತರ ಹಿಂಸೆ ಅನುಭವಿಸಿದ ಅವರು, ಕೊನೆಗೆ ಪತಿ ಗಣಪತ್ ರಾವ್ ಭೋಸ್ಲೆ ಅವರಿಂದ ಮಕ್ಕಳ ಸಮೇತ ಮನೆಯಿಂದ ಹೊರಹಾಕಲ್ಪಟ್ಟರು. ಇಬ್ಬರು ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹಾಗೂ ಹೊಟ್ಟೆಯಲ್ಲಿ ಮತ್ತೊಂದು ಮಗುವಿನೊಂದಿಗೆ ಅವರು ಮತ್ತೆ ತಮ್ಮ ಮನೆಗೆ ಮರಳಿದರು. ಈ ಸಂದರ್ಭದಲ್ಲಿ ಅಕ್ಕ ಲತಾ ಮಂಗೇಶ್ಕರ್ ತಂಗಿಯನ್ನು ಮಮತೆಯಿಂದ ಮತ್ತೆ ತಮ್ಮ ಮನೆಗೆ ಸೇರಿಸಿಕೊಂಡರು.
ತಮ್ಮ ಜೀವನದ ಈ ನೋವುಗಳ ಬಗ್ಗೆ ಆಶಾ ಭೋಸ್ಲೆ ಸ್ವತಃ ಹೇಳಿಕೊಂಡಿದ್ದು, “ನನ್ನ ಪತಿ ಒಬ್ಬ ಸ್ಯಾಡಿಸ್ಟ್ ಆಗಿದ್ದ. ವಿನಾಕಾರಣ ನನಗೆ ನೋವು ನೀಡುತ್ತಿದ್ದ. ಒಂದು ಹಂತದಲ್ಲಿ ನಾನು ಆತ್ಮಹತ್ಯೆಗೂ ಯತ್ನಿಸಿ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದೆ. ಆಗ ನಾನು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದೆ. ಆದರೆ ನನ್ನ ಮಕ್ಕಳ ಮೇಲಿನ ಪ್ರೀತಿ ನನ್ನನ್ನು ಬದುಕಿಸಿತು,” ಎಂದು ಹೇಳಿದ್ದಾರೆ.
