ಗದಗ: ರಾಜ್ಯದ ಜನರ ಆರೋಗ್ಯ ಸುಧಾರಣೆಗೆ ಕಾಂಗ್ರೆಸ್ ಸರ್ಕಾರ ಕಳೆದ ಎರಡು ಮತ್ತು ಅರ್ಧ ವರ್ಷಗಳಲ್ಲಿ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 2026-27ನೇ ಸಾಲಿನ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 17,473 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರದ ಕ್ರಮಗಳಿಂದ ಕರ್ನಾಟಕವು ದೇಶದಲ್ಲಿ ತಲಾ ಆರೋಗ್ಯ ವೆಚ್ಚದಲ್ಲಿ ಅಗ್ರ ಐದು ರಾಜ್ಯಗಳಲ್ಲೊಂದು ಸ್ಥಾನ ಪಡೆದಿದೆ ಎಂದರು.

ಶಿಶುಮರಣ ಪ್ರಮಾಣವು 2021ರಲ್ಲಿ ಶೇ.17ರಷ್ಟಿದ್ದರೆ, 2023ರ ವೇಳೆಗೆ ಶೇ.14ಕ್ಕೆ ಕುಸಿದಿದೆ. ತಾಯಿ ಮರಣ ಪ್ರಮಾಣ ತಗ್ಗಿಸಲು 320 ಕೋಟಿ ರೂ. ಅನುದಾನ ನೀಡಲಾಗಿದ್ದು, ‘ಲಕ್ಷ್ಯ’ ಕಾರ್ಯಕ್ರಮದಡಿ ಹೆರಿಗೆ ಕೊಠಡಿಗಳು, ಮಾತೃತ್ವ ಐಸಿಯುಗಳು ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಗಳ ಗುಣಮಟ್ಟವನ್ನು ಸುಧಾರಿಸಲಾಗಿದೆ. ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು 11 ತಾಯಿ ಎದೆಹಾಲು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2030ರೊಳಗೆ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಒಂದಂಕಿಗೆ ತರುವ ಗುರಿ ಹೊಂದಲಾಗಿದೆ.
ತಾಲ್ಲೂಕು ಮಟ್ಟದ 148 ಆಸ್ಪತ್ರೆಗಳಲ್ಲಿ 24×7 ಸ್ತ್ರೀರೋಗ, ಅರಿವಳಿಕೆ ಮತ್ತು ಮಕ್ಕಳ ತಜ್ಞರನ್ನು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. 108 ಅಂಬುಲೆನ್ಸ್ ಸೇವೆಯನ್ನು ಸರ್ಕಾರದ ಆರೋಗ್ಯ ಇಲಾಖೆಯಡಿ ತರಲಾಗಿದ್ದು, ತುರ್ತು ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
‘ಗೃಹ ಆರೋಗ್ಯ’ ಯೋಜನೆಯಡಿ ಮನೆ ಮನೆಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಮೂರು ಹಂತಗಳಲ್ಲಿ ತಪಾಸಣೆ, ಉಚಿತ ಪರೀಕ್ಷೆಗಳು, ಔಷಧ ವಿತರಣೆ ಹಾಗೂ ಗಂಭೀರ ಕಾಯಿಲೆಗಳಿಗಾಗಿ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿ ಸುಮಾರು 7 ಕೋಟಿ ಕನ್ನಡಿಗರಿಗೆ ಪ್ರಯೋಜನ ಕಲ್ಪಿಸಲಾಗುತ್ತಿದೆ.

30 ವರ್ಷ ಮೇಲ್ಪಟ್ಟವರಿಗೆ 14 ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಪಾಸಣೆ ಹಾಗೂ ನಿರ್ವಹಣೆಯ ಮೂಲಕ ಅಕಾಲಿಕ ಮರಣಗಳನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ತಾಲೂಕು ಆಸ್ಪತ್ರೆಗಳನ್ನು ಬಲಪಡಿಸಿ 24×7 ಸೇವೆ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಸುಮಾರು 32 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವೈದ್ಯರು ಮತ್ತು ನರ್ಸ್ಗಳಿಗೆ ಶೇ.55ರಷ್ಟು ವೇತನ ಪರಿಷ್ಕರಣೆ ಅನುಮೋದಿಸಲಾಗಿದೆ.
ಕಳಪೆ ಔಷಧಿಗಳ ವಿರುದ್ಧ ಕ್ರಮ ಕೈಗೊಂಡು, 2025ರ ಜನವರಿಯಲ್ಲಿ 17 ಲಕ್ಷ ರೂ. ಮೌಲ್ಯದ 106 ಗುಣಮಟ್ಟವಲ್ಲದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಜೊತೆಗೆ 75 ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಲಾಗಿದೆ. ಆಹಾರದಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗಿದೆ.
ತಾಯಿ ಮರಣ ಪ್ರಮಾಣ 2024ರಲ್ಲಿ 483 ಇದ್ದರೆ, 2025ರಲ್ಲಿ 366ಕ್ಕೆ ಇಳಿದು ಶೇ.24ರಷ್ಟು ಕಡಿಮೆಯಾಗಿದೆ. 2030ರೊಳಗೆ ತಾಯಿ ಮರಣ ಪ್ರಮಾಣವನ್ನು ನಿಯಂತ್ರಣದಲ್ಲಿಡುವ ಗುರಿ ಹೊಂದಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ 62 ಲಕ್ಷ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ನರ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ನಿಮ್ಹಾನ್ಸ್ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ಜಾರಿಯಲ್ಲಿದೆ.
ಆರೋಗ್ಯ ಕ್ಷೇತ್ರದ ಪ್ರಮುಖ ಯೋಜನೆಗಳು:
ರಾಜ್ಯದಲ್ಲಿ ಸಮಗ್ರ ಆರೋಗ್ಯ ಯೋಜನೆಗೆ 413 ಕೋಟಿ ರೂ., ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳ ನವೀಕರಣಕ್ಕೆ 650 ಕೋಟಿ ರೂ. ಅನುದಾನ ನೀಡಲಾಗಿದೆ. 185 ಕೋಟಿ ರೂ. ವೆಚ್ಚದಲ್ಲಿ ‘ಪೌಷ್ಠಿಕ ಕರ್ನಾಟಕ’ ಯೋಜನೆ, 280 ಕೋಟಿ ರೂ. ವೆಚ್ಚದಲ್ಲಿ ಹೊಸ ತಾಲೂಕು ಆಸ್ಪತ್ರೆಗಳ ಸ್ಥಾಪನೆ, 262 ಹೊಸ ಅಂಬುಲೆನ್ಸ್ ಸೇರ್ಪಡೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ಹೃದಯ ಸಂಬಂಧಿ ತುರ್ತು ಚಿಕಿತ್ಸೆಗೆ ‘ಪುನೀತ್ ಹೃದಯ ಜ್ಯೋತಿ’ ಯೋಜನೆ, 15 ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ಗಳ ನಿರ್ಮಾಣ, 50 ‘ಹಾರ್ಟ್ ಲೈನ್’ ಅಂಬುಲೆನ್ಸ್ ಸೇವೆ ಆರಂಭಿಸುವಂತಹ ಕ್ರಮಗಳು ಕೈಗೊಳ್ಳಲಾಗಿದೆ. ಬೆಂಗಳೂರಿನ ಜಯದೇವ ಹೃದಯ ಆಸ್ಪತ್ರೆಯನ್ನು 1000 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗಿದ್ದು, ಕಲಬುರಗಿಯಲ್ಲಿ ಹೊಸ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೂ ಅನುದಾನ ನೀಡಲಾಗಿದೆ.
ಒಟ್ಟಿನಲ್ಲಿ, ಕಾಂಗ್ರೆಸ್ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದು ರಾಜ್ಯದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಅಶೋಕ ಮಂದಾಲಿ ತಿಳಿಸಿದ್ದಾರೆ.
