ಗದಗ, ಜೂನ್ 12: ಸಾರ್ವಜನಿಕ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆಯನ್ನು ತಡೆಯಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಪುಂಡರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಈ ಘಟನೆ ನಗರದ ಧೋಬಿಘಾಟ್ ಪ್ರದೇಶದ ಸಮೀಪ ಇರುವ ಡ್ರಿಂಕ್ಸ್ ಫ್ಯಾಕ್ಟರಿ ಬಾರ್ ಎದುರು ನಡೆದಿದ್ದು, ಪ್ರಕರಣವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಮಾಹಿತಿಯ ಪ್ರಕಾರ, ನಿನ್ನೆ ತಡರಾತ್ರಿ ವೇಳೆ ಧೋಬಿ ಘಾಟ್ ಸರ್ಕಲ್ ಬಳಿ ಇರುವ ಡ್ರಿಂಕ್ಸ್ ಫ್ಯಾಕ್ಟರಿ ಬಾರ್ ಬಳಿ ಕೆಲ ಯುವಕರು ಪರಸ್ಪರ ಜಗಳವಾಡುತ್ತಿದ್ದರು. ಜಗಳ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿದ್ದವರು ಪರಿಸ್ಥಿತಿಯನ್ನು ಗಮನಿಸುತ್ತಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಅಶೋಕ ಪಾಟೀಲ ಅವರು ಜಗಳವಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿ, ಗಲಾಟೆಯನ್ನು ನಿಲ್ಲಿಸಲು ಮುಂದಾಗಿದ್ದಾರೆ.

ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಬದಲು ಮತ್ತಷ್ಟು ಉಲ್ಬಣಗೊಂಡಿದ್ದು, ಜಗಳವಾಡುತ್ತಿದ್ದ ಯುವಕರ ಗುಂಪು ಏಕಾಏಕಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ತಿರುಗಿಬಿದ್ದಿದೆ ಎನ್ನಲಾಗಿದೆ. ಸುಮಾರು 5 ಜನ ಸೇರಿಕೊಂಡು ಅಶೋಕ ಪಾಟೀಲ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ದೃಶ್ಯದಲ್ಲಿಯೂ ಕಂಡುಬಂದಿದೆ.
ಹಲ್ಲೆ ವೇಳೆ ಆರೋಪಿಗಳಲ್ಲಿ ಒಬ್ಬ ತನ್ನ ಕೈಯಲ್ಲಿ ಧರಿಸಿದ್ದ ಲೋಹದ ಕಡಗವನ್ನು ಬಳಸಿ ಪೊಲೀಸ್ ಸಿಬ್ಬಂದಿಗೆ ಹೊಡೆದಿರುವುದಾಗಿ ತಿಳಿದುಬಂದಿದೆ. ಇದರಿಂದ ಅಶೋಕ ಪಾಟೀಲ ಅವರಿಗೆ ಗಾಯಗಳಾಗಿದ್ದು, ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ವೇಳೆ ಪೊಲೀಸ್ ಸಿಬ್ಬಂದಿಗೆ ಥಳಿಸುತ್ತಿರುವ ದೃಶ್ಯಗಳು ಕೆಲವರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆಯ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಹಲ್ಲೆ ನಡೆಯುತ್ತಿದ್ದ ವೇಳೆ ಅಲ್ಲೇ ಇದ್ದ ಮತ್ತೋರ್ವ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಘಟನೆಯನ್ನು ನೋಡುತ್ತ ನಿಂತಿರುವ ದೃಶ್ಯವೂ ವಿಡಿಯೊದಲ್ಲಿ ಕಂಡುಬಂದಿದೆ. ಈ ಕುರಿತು ಇಲಾಖೆಯೊಳಗೂ ಚರ್ಚೆ ಆರಂಭವಾಗಿದ್ದು, ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಕುರಿತು ತನಿಖೆ ನಡೆಯುತ್ತಿದೆ.
ಹಲ್ಲೆಗೊಳಗಾದ ಅಶೋಕ ಪಾಟೀಲ ಅವರು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಮೇಲೆಯೇ ಇಂತಹ ಹಲ್ಲೆ ನಡೆದಿರುವುದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗಂಭೀರ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಘಟನೆಯ ಸಂಬಂಧ ಗದಗ ಗ್ರಾಮೀಣ ಪೊಲೀಸರು ಹಲ್ಲೆ ನಡೆಸಿದ 5 ಜನ ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ವಿಡಿಯೋ ಇದೆ…👇…(Subscribe ಮಾಡಿ)
ಈ ಘಟನೆ ಪೊಲೀಸ್ ಇಲಾಖೆಯಲ್ಲಿಯೂ ಆಕ್ರೋಶಕ್ಕೆ ಕಾರಣವಾಗಿದ್ದು, ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ರಕ್ಷಣೆ ಒದಗಿಸುವ ಜೊತೆಗೆ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ವೈರಲ್ ವಿಡಿಯೊಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಿದ್ದಾರೆ.
