ಗದಗ,ಜೂನ್:11
ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಅಂತರ್ ಜಿಲ್ಲಾ ಖದೀಮರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆರೋಪಿತರಿಂದ ಸುಮಾರು 145 ಗ್ರಾಂ ತೂಕದ ಬಂಗಾರದ ಆಭರಣಗಳು, 332 ಗ್ರಾಂ ತೂಕದ ಬೆಳ್ಳಿ ಆಭರಣಗಳು ಹಾಗೂ ₹50 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ವರದಿ:ಮಹಲಿಂಗೇಶ್ ಹಿರೇಮಠ.ಗದಗ
ಕಳೆದ ಮೇ ತಿಂಗಳಲ್ಲಿ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು, ನರೇಗಲ್ಲ ಠಾಣಾ ವ್ಯಾಪ್ತಿಯಲ್ಲಿ ಎರಡು, ರೋಣ ಠಾಣಾ ವ್ಯಾಪ್ತಿಯಲ್ಲಿ ಒಂದು ಹಾಗೂ ಶಿರಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಒಂದು ಸೇರಿ ಒಟ್ಟು ಎಂಟು ಮನೆಗಳ್ಳತನ ಪ್ರಕರಣಗಳು ವರದಿಯಾಗಿದ್ದವು. ಕೇವಲ 20 ದಿನಗಳ ಅಂತರದಲ್ಲಿ ನಡೆದ ಈ ಸರಣಿ ಕಳ್ಳತನಗಳಿಂದ ಗ್ರಾಮೀಣ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದರು.
ಪ್ರಕರಣಗಳ ಗಂಭೀರತೆಯನ್ನು ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ವಾಹನಗಳ ತಪಾಸಣೆ ನಡೆಸಲಾಯಿತು. ಅಲ್ಲದೇ ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ, ಮೊಬೈಲ್ ಸಿಡಿಆರ್ ವಿಶ್ಲೇಷಣೆ, ಟವರ್ ಡಂಪ್ ಮಾಹಿತಿ ಸಂಗ್ರಹ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲಾಯಿತು.

ತನಿಖೆಯ ವೇಳೆ ದೊರೆತ ಸುಳಿವಿನ ಮೇರೆಗೆ ಜೂನ್ 7 ರಂದು ಮುಂಡರಗಿ ಪಟ್ಟಣದ ಬ್ಯಾಲವಾಡಗಿ ಕ್ರಾಸ್ ಬಳಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆರೋಪಿಗಳು ಗದಗ ಜಿಲ್ಲೆಯ ಎಂಟು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದಲ್ಲದೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಹಾಗೂ ದಾಟನಾಳ, ದಾವಣಗೆರೆ ಜಿಲ್ಲೆಯ ಹದಡಿ, ಮೈಸೂರು ಜಿಲ್ಲೆಯ ಹುಣಸೂರು ಹಾಗೂ ಕೊಪ್ಪಳ ಜಿಲ್ಲೆಯ ಬೆಳಗಟ್ಟಿಯಲ್ಲಿಯೂ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಒಟ್ಟು 13 ಪ್ರಕರಣಗಳಲ್ಲಿ ಇವರ ಕೈವಾಡ ಬೆಳಕಿಗೆ ಬಂದಿದೆ.
ಕಳ್ಳತನಕ್ಕೇ ರೂಪಿಸಿಕೊಂಡಿದ್ದರು ವಿಶೇಷ ತಂತ್ರ
ಆರೋಪಿಗಳು ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಲ್ಲಿ ಮೋಟಾರ್ ಬೈಕ್ ಕಳವು ಮಾಡಿಕೊಂಡು ಅದರಲ್ಲಿ ಸಂಚರಿಸುತ್ತಿದ್ದರು. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ, ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಗ್ರಾಮೀಣ ಪ್ರದೇಶಗಳ ರಸ್ತೆಯ ಪಕ್ಕದಲ್ಲಿರುವ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು.
ಕೆಲವು ಕಡೆಗಳಲ್ಲಿ ಲಾರಿಗಳಲ್ಲಿ ಪ್ರಯಾಣಿಸಿ ದೂರದ ಗ್ರಾಮಗಳಿಗೆ ತೆರಳಿ ಕೃತ್ಯ ಎಸಗುತ್ತಿದ್ದರು. ಅಪರಾಧಕ್ಕೆ ಮುನ್ನ ಸವಣೂರು, ಗುತ್ತಲ ಹಾಗೂ ಹಾವೇರಿ ಹೊರವಲಯಗಳಲ್ಲಿ ಸೇರಿ ಸಂಚು ರೂಪಿಸುತ್ತಿದ್ದ ಆರೋಪಿಗಳು, ಕಳ್ಳತನದ ಬಳಿಕ ಜನ ಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ಹಗಲು ವೇಳೆ ವಿಶ್ರಾಂತಿ ಪಡೆಯುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕಣ್ಣಿನ ಆಪರೇಷನ್ ನೆಪದಲ್ಲಿ ಚಿನ್ನ ಮಾರಾಟ
ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಕಾರವಾರ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಾಗೂ ಮುಳಗುಂದ ಭಾಗದಲ್ಲಿ ಮಾರಾಟ ಮಾಡಿರುವ ಆರೋಪಿಗಳು, “ಮನೆಯಲ್ಲಿ ತೊಂದರೆ ಇದೆ, ಕಣ್ಣಿನ ಆಪರೇಷನ್ ಮಾಡಿಸಬೇಕಿದೆ” ಎಂದು ಸುಳ್ಳು ಹೇಳಿ ಚಿನ್ನಾಭರಣಗಳನ್ನು ಹಣಕ್ಕೆ ಪರಿವರ್ತಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು
ಹನಮಂತ ತೊಲೆಪ್ಪ ಕುಂಚಿಕೊರವರ (26), ಲಕ್ಷ್ಮೇಶ್ವರ
ಮಾಂತೇಶ @ ಗೌಡ ದುರಗಪ್ಪ ಕುಂಚಿಕೊರವರ (22), ಶಿಗ್ಗಾಂವ
ದುರಗೇಶ @ ಗಿರೀಶ ಯಲ್ಲಪ್ಪ ಗುತ್ತಲ್ (18), ಶಿಗ್ಗಾಂವ
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
ಸರಣಿ ಮನೆಗಳ್ಳತನಗಳಿಂದ ಕಂಗಾಲಾಗಿದ್ದ ಗ್ರಾಮೀಣ ಜನರಿಗೆ ಆರೋಪಿತರ ಬಂಧನದಿಂದ ನೆಮ್ಮದಿ ಸಿಕ್ಕಿದ್ದು, ಪ್ರಕರಣಗಳನ್ನು ಭೇದಿಸಿ ಕಳುವಾದ ಆಸ್ತಿ ಪತ್ತೆ ಹಚ್ಚಿದ ಗದಗ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕೇವಲ ಕೆಲವೇ ದಿನಗಳಲ್ಲಿ ಖದೀಮರ ಜಾಡು ಹಿಡಿದು ಬಂಧಿಸಿರುವುದು ಪೊಲೀಸರ ದಕ್ಷತೆಗೆ ಸಾಕ್ಷಿ” ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ತಂಡದ ಪರಿಶ್ರಮಕ್ಕೆ ಸಿಕ್ಕ ಯಶಸ್ಸು
ಈ ಕಾರ್ಯಾಚರಣೆಯಲ್ಲಿ ನರಗುಂದ ಉಪ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಡಿ.ಕೆ., ಮುಂಡರಗಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐಗಳಾದ ಬಿ.ಎನ್. ಯಳವತ್ತಿ ಹಾಗೂ ಪ್ರಕಾಶ ಬಣಕಾರ, ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಗಂಗಾಧರ ಮಜ್ಜಗಿ, ಮಹೇಶ ಗೊಳಗೊಳಕಿ, ಚಂದ್ರಶೇಖರ ದೊಡ್ಡಮನಿ, ಕಿರಣ ಹಿರೇಮಠ, ಮಂಜು ಬಂಡಿವಡ್ಡರ, ಶಿವು ಹುಬ್ಬಳ್ಳಿ, ಕಲಂದರ ನದಾಫ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿಗಳಾದ ಗುರು ಬೂದಿಹಾಳ ಮತ್ತು ಸಂಜು ಕೊರಡೂರ ಅವರು ಪ್ರಮುಖ ಪಾತ್ರ ವಹಿಸಿದ್ದರು.
ತಂಡದ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರು, ಸಿಬ್ಬಂದಿಗೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.
