Home » News » ಸಮಯಪ್ರಜ್ಞೆ ಮೆರೆದ ಪೊಲೀಸನ ಮೇಲೆಯೇ ದಾಳಿ ..! ಹಲ್ಲೆ ಪ್ರಕರಣದ 5 ಆರೋಪಿಗಳು ಜೈಲುಪಾಲು..!

ಸಮಯಪ್ರಜ್ಞೆ ಮೆರೆದ ಪೊಲೀಸನ ಮೇಲೆಯೇ ದಾಳಿ ..! ಹಲ್ಲೆ ಪ್ರಕರಣದ 5 ಆರೋಪಿಗಳು ಜೈಲುಪಾಲು..!

by CityXPress
0 comments

ಗದಗ, ಜೂನ್ 12: ಪುಡಿ‌ರೌಡಿಗಳ ಜಗಳ ಬಿಡಿಸಲು ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವರದಿ:ಮಹಲಿಂಗೇಶ್ ಹಿರೇಮಠ. ಗದಗ

ನಗರದ ಧೋಬಿಘಾಟ್ ಸರ್ಕಲ್ ಸಮೀಪದ ಬಾರ್ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿತ್ತು. ಬಾರ್ ಎದುರು ಕೆಲ ಪುಂಡ ಯುವಕರು ಪರಸ್ಪರ ಜಗಳವಾಡುತ್ತಿದ್ದ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಗಲಾಟೆ ನಿಲ್ಲಿಸಲು ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಅಶೋಕ ಪಾಟೀಲ ಮುಂದಾಗಿದ್ದರು.

ಆದರೆ ಜಗಳ ನಿಲ್ಲಿಸುವ ಬದಲು ಪುಡಿರೌಡಿ ಯುವಕರ ಗುಂಪು ಏಕಾಏಕಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ತಿರುಗಿಬಿದ್ದು ಹಲ್ಲೆ ನಡೆಸಿತ್ತು. ಐವರು ಆರೋಪಿಗಳು ಸೇರಿಕೊಂಡು ಅಶೋಕ ಪಾಟೀಲ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

banner

ಹಲ್ಲೆ ವೇಳೆ ಆರೋಪಿಗಳಲ್ಲಿ ಒಬ್ಬ ತನ್ನ ಕೈಯಲ್ಲಿ ಧರಿಸಿದ್ದ ಲೋಹದ ಕಡಗದಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಅಶೋಕ ಪಾಟೀಲ ಅವರು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗದಗ ಗ್ರಾಮೀಣ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಹಲ್ಲೆಯಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಶೇಷವೆಂದರೆ, ಘಟನೆ ನಡೆದ ವೇಳೆ ಅಶೋಕ ಪಾಟೀಲ ಅವರು ಕರ್ತವ್ಯದಲ್ಲಿರಲಿಲ್ಲ ಎನ್ನಲಾಗಿದೆ. ಆದಾಗ್ಯೂ, ಸಾರ್ವಜನಿಕ ಸ್ಥಳದಲ್ಲಿ ಪುಡಿ ರೌಡಿಗಳು ಪರಸ್ಪರ ಜಗಳವಾಡುತ್ತಿರುವುದನ್ನು ಗಮನಿಸಿದ ಅವರು, ಜವಾಬ್ದಾರಿಯುತ ಪೊಲೀಸ್ ಸಿಬ್ಬಂದಿಯಾಗಿ ಸಮಯಪ್ರಜ್ಞೆ ಮೆರೆದು ಗಲಾಟೆಯನ್ನು ಶಮನಗೊಳಿಸಲು ಮುಂದಾಗಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಧ್ಯಪ್ರವೇಶಿಸಿದ್ದ ಅವರ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಕರ್ತವ್ಯದಲ್ಲಿಲ್ಲದಿದ್ದರೂ ಪೊಲೀಸ್ ಸೇವೆಯ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ, ಜಗಳವನ್ನು ತಡೆಯಲು ಹೋದ ಅವರ ಮೇಲೆಯೇ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆದಿರುವುದು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಪ್ರಕರಣದ ಹೆಚ್ಚಿನ ತನಿಖೆಯನ್ನು ಗದಗ ಗ್ರಾಮೀಣ ಪೊಲೀಸರು ಮುಂದುವರಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb