Home » News » ಗದಗದಲ್ಲಿ ಕೈಮಗ್ಗ ತಂತ್ರಜ್ಞಾನಕ್ಕೆ ಹೊಸ ಬೆಳಕು—ಯುವಕರ ಭವಿಷ್ಯ ರೂಪಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ..

ಗದಗದಲ್ಲಿ ಕೈಮಗ್ಗ ತಂತ್ರಜ್ಞಾನಕ್ಕೆ ಹೊಸ ಬೆಳಕು—ಯುವಕರ ಭವಿಷ್ಯ ರೂಪಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ..

by CityXPress
0 comments

ಗದಗದ ಹೆಮ್ಮೆ ‘ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ

——-++++++++——–

ಪಾರಂಪರಿಕ ಕೈಮಗ್ಗ ಕಲೆಗೂ ಆಧುನಿಕ ತಂತ್ರಜ್ಞಾನಕ್ಕೂ ಸೇತುವೆಯಾಗಿರುವ ಗದಗ-ಬೆಟಗೇರಿ ನರಸಾಪೂರ ಗ್ರಾಮದಲ್ಲಿನ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಇಂದು ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದೆ.

1994ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಮೂರು ವರ್ಷದ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್‌ನ್ನು ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಮತ್ತು ಕೈಚಳಕ ಎರಡನ್ನೂ ಒಟ್ಟಿಗೆ ಬೆಳೆಸುವ ಮಹತ್ವದ ವೇದಿಕೆಯನ್ನು ಒದಗಿಸುತ್ತಿದೆ.

banner

ಭಾರತ ಸರ್ಕಾರದ ಜವಳಿ ಮಂತ್ರಾಲಯದ ಅಭಿವೃದ್ಧಿ ಆಯುಕ್ತರಿಂದ ಮಾನ್ಯತೆ ಪಡೆದಿರುವ ಈ ಸಂಸ್ಥೆ, ನವದೆಹಲಿಯ ಮಾರ್ಗಸೂಚಿಗಳ ಪ್ರಕಾರ ಪಠ್ಯಕ್ರಮ ಮತ್ತು ಪರೀಕ್ಷಾ ಪದ್ಧತಿಯನ್ನು ಅನುಸರಿಸುತ್ತಿದ್ದು, ದೇಶದ ಇಂತಹ ಮಾದರಿಯ ಸಂಸ್ಥೆಗಳ ಪೈಕಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಇಂತಹ ಮಾದರಿಯ ಒಟ್ಟು 11 ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸೇಲಂ, ವಾರಣಾಸಿ, ಜೋಧಪುರ, ಗೌಹಾತಿ, ಕಣ್ಣೂರ ಸೇರಿದಂತೆ ಹಲವು ರಾಜ್ಯಗಳಲ್ಲಿ ಇವುಗಳಿವೆ. ಆ ಪೈಕಿ ಗದಗದ ಈ ಸಂಸ್ಥೆ ತನ್ನ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದೆ.

ಗದಗಿನ ನರಸಾಪೂರದಲ್ಲಿ 8.3 ಎಕರೆ ವ್ಯಾಪ್ತಿಯ ಸ್ವಂತ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಡೈಯಿಂಗ್ ಮತ್ತು ಪ್ರಿಂಟಿಂಗ್, ಟೆಸ್ಟಿಂಗ್, ಕೈಮಗ್ಗ ಹಾಗೂ ವಿದ್ಯುತ್ ಮಗ್ಗ, ಜಕಾರ್ಡ್ ಮತ್ತು ಕಂಪ್ಯೂಟರ್ ಆಧಾರಿತ ಟೆಕ್ಸ್ಟೈಲ್ ಡಿಸೈನಿಂಗ್ (CATD) ಲ್ಯಾಬ್‌ಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುತ್ತಿವೆ. ಸ್ಮಾರ್ಟ್ ಬೋರ್ಡ್‌ಗಳ ಮೂಲಕ ತರಗತಿ ಬೋಧನೆ ನಡೆಯುತ್ತಿದ್ದು, ಇ-ಗ್ರಂಥಾಲಯ ಹಾಗೂ ಸುಸಜ್ಜಿತ ಗ್ರಂಥಾಲಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮತ್ತಷ್ಟು ಬಲ ನೀಡುತ್ತಿವೆ.

ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯಲ್ಲಿಯೂ ಸಂಸ್ಥೆ ವಿಶೇಷ ಗಮನ ಹರಿಸಿದ್ದು, ಪುರುಷ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರು ಹಾಗೂ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಗೆ ಸೋಲಾರ್ ವ್ಯವಸ್ಥೆ ಅಳವಡಿಸಿರುವುದು ಗಮನಾರ್ಹವಾಗಿದೆ.

ವಿದ್ಯಾರ್ಥಿನಿಯರಿಗೆ ಸರ್ಕಾರಿ ವಸತಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅನುಭವ ಹೊಂದಿದ ಬೋಧಕರಿಂದ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಒತ್ತು ನೀಡಲಾಗುತ್ತಿದೆ.

ಪ್ರತಿ ವರ್ಷ ಪ್ರಥಮ ವರ್ಷದ ಪ್ರವೇಶ ಮತ್ತು ಲ್ಯಾಟರಲ್ ಎಂಟ್ರಿ ಮೂಲಕ ಮೂರನೇ ಸೆಮಿಸ್ಟರ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಪ್ರಥಮ ವರ್ಷದ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿದ್ದು, ಇಂಗ್ಲಿಷ್ ಕಡ್ಡಾಯ ವಿಷಯವಾಗಿರಬೇಕು. ಸಾಮಾನ್ಯ ವರ್ಗದವರಿಗೆ 15 ರಿಂದ 23 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 15 ರಿಂದ 25 ವರ್ಷ ವಯೋಮಿತಿ ನಿಗದಿಯಾಗಿದೆ.

ಲ್ಯಾಟರಲ್ ಎಂಟ್ರಿ ಮೂಲಕ ಮೂರನೇ ಸೆಮಿಸ್ಟರ್‌ಗೆ ಪಿಯುಸಿ ವಿಜ್ಞಾನ ವಿಭಾಗ, ಐಟಿಐ ಅಥವಾ ಜವಳಿ ಸಂಬಂಧಿತ ವೃತ್ತಿಪರ ಕೋರ್ಸ್ ಉತ್ತೀರ್ಣರಾದವರಿಗೆ ಅವಕಾಶವಿದ್ದು, ಸಾಮಾನ್ಯ ವರ್ಗದವರಿಗೆ 25 ವರ್ಷ ಮತ್ತು ಎಸ್‌ಸಿ/ಎಸ್‌ಟಿ ವರ್ಗದವರಿಗೆ 27 ವರ್ಷ ವಯೋಮಿತಿ ನಿಗದಿಯಾಗಿದೆ.

ಪ್ರವೇಶ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತಿ ತಿಂಗಳು ರೂ. 2,500 ಶಿಷ್ಯವೇತನ ನೀಡಲಾಗುವುದು ಎಂಬುದು ವಿಶೇಷ.

ಸಮಗ್ರ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ದಾರಿ ತೆರೆದಿಡುವ ತರಬೇತಿಯೊಂದಿಗೆ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದ್ದು, ಕೈಮಗ್ಗ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಯುವಕರಿಗೆ ಭವಿಷ್ಯದ ಭರವಸೆಯ ದಾರಿಯಾಗಿ ಪರಿಣಮಿಸಿದೆ.

ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ ಸಂಸ್ಥೆಯಲ್ಲಿ 2008 ರಿಂದ ಕಲಿತ ವಿಧ್ಯಾರ್ಥಿಗಳಲ್ಲಿ 23 ಅಭ್ಯರ್ಥಿಗಳು ರಾಜ್ಯದ ವಿವಿಧ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿ, ನರಸಾಪೂರ, ಗದಗ-ಬೆಟಗೇರಿ ಸಂಪರ್ಕಿಸಬಹುದಾಗಿದೆ. ಮೊಬೈಲ್ ಸಂಖ್ಯೆ 9916143619 ಹಾಗೂ ದೂರವಾಣಿ 08372-259664 ಮೂಲಕ ಸಂಪರ್ಕಿಸಬಹುದು. ಇ-ಮೇಲ್ principalkhtigadag@gmail.com ಮತ್ತು khtigadag.ac.in ವೆಬ್‌ಸೈಟ್ ಮೂಲಕವೂ ವಿವರಗಳನ್ನು ಪಡೆಯಬಹುದಾಗಿದೆ.

ಕೋಟ್ :
“ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ ಇದು ಗ್ರಾಮೀಣ ಹಾಗೂ ನಗರ ಭಾಗದ ಯುವಕರಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಪಾರಂಪರಿಕ ಕೈಮಗ್ಗ ಕಲೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿ ವಿದ್ಯಾರ್ಥಿಗಳನ್ನು ಉದ್ಯೋಗಮುಖಿ ಹಾಗೂ ಸ್ವಾವಲಂಬಿ ವ್ಯಕ್ತಿಗಳಾಗಿ ರೂಪಿಸುವುದು ನಮ್ಮ ಪ್ರಮುಖ ಧ್ಯೇಯವಾಗಿದೆ. ಸಂಸ್ಥೆಯಲ್ಲಿ ಲಭ್ಯವಿರುವ ಆಧುನಿಕ ಪ್ರಯೋಗಾಲಯಗಳು, ಅನುಭವೀ ಬೋಧಕರು ಹಾಗೂ ಶಿಷ್ಯವೇತನ ಸೌಲಭ್ಯಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತಿವೆ. ಕೈಮಗ್ಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,”
-ಶ್ರೀಮತಿ ಸುಮಲತಾ ಎಸ್,
ಪ್ರಾಚಾರ್ಯರು,
ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ

ಪ್ರಮುಖಾಂಶಗಳು:

  • 1994ರಲ್ಲಿ ಸ್ಥಾಪಿತವಾದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆ
  • 3 ವರ್ಷದ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್
  • ಭಾರತ ಸರ್ಕಾರದ ಜವಳಿ ಮಂತ್ರಾಲಯದಿಂದ ಮಾನ್ಯತೆ
  • ದೇಶದ ಒಟ್ಟು 11 ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಗದಗ ಸಂಸ್ಥೆಯು ಒಂದು.
  • 8.3 ಎಕರೆ ವ್ಯಾಪ್ತಿಯ ವಿಶಾಲ ಸ್ವಂತ ಆವರಣ
  • ಡೈಯಿಂಗ್, ಪ್ರಿಂಟಿಂಗ್, ಟೆಸ್ಟಿಂಗ್, ಜಕಾರ್ಡ್ ಹಾಗೂ CATD ಲ್ಯಾಬ್‌ಗಳೊಂದಿಗೆ ಆಧುನಿಕ ಸೌಲಭ್ಯಗಳು
  • ಸ್ಮಾರ್ಟ್ ಕ್ಲಾಸ್‌ರೂಂ, ಇ-ಗ್ರಂಥಾಲಯ ಮತ್ತು ಸಮೃದ್ಧ ಗ್ರಂಥಾಲಯ ವ್ಯವಸ್ಥೆ
  • ಪ್ರತಿ ತಿಂಗಳು ₹2,500 ಶಿಷ್ಯವೇತನ ಸೌಲಭ್ಯ, ವಿಧ್ಯಾರ್ಥಿಗಳಿಗೆ ವಸತಿ, ಮೂಲಭೂತ ಸೌಲಭ್ಯಗಳು
  • ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ
  • ಕೈಮಗ್ಗ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಭದ್ರ ನೆಲೆ
  • 2008 ರಿಂದ ಗದಗ ಸಂಸ್ಥೆಯಲ್ಲಿ ಕಲಿತ 23 ಅಭ್ಯರ್ಥಿಗಳು ರಾಜ್ಯದ ವಿವಿಧ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಸೇವೆ ಸಲ್ಲಿಕೆ

ವಿಶೇಷ ಲೇಖನ:
ವಸಂತ ಬಿ ಮಡ್ಲೂರ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗದಗ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb