ಮುಂಡರಗಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕನೊಬ್ಬ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಬಸವರಾಜ್ ಮೇಗಳಮನಿ ಎಂಬ ಬಾಲಕ ನಿನ್ನೆ ಸಂಜೆಯಿಂದ ಗ್ರಾಮದಿಂದ ಕಾಣೆಯಾಗಿದ್ದು, ಆತ ತುಂಗಭದ್ರಾ ನದಿಗೆ ಇಳಿದಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮದ ನಿವಾಸಿಯಾದ ಬಸವರಾಜ್ ಮೇಗಳಮನಿ ನಿನ್ನೆ ಸಂಜೆ ಮನೆಯಿಂದ ಹೊರಗೆ ಹೋಗಿದ್ದಾನೆ ಎನ್ನಲಾಗಿದ್ದು, ನಂತರ ಆತ ಮರಳಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಬಸವರಾಜ್ ಧರಿಸಿದ್ದ ಚಪ್ಪಲಿ ತುಂಗಭದ್ರಾ ನದಿ ತೀರದಲ್ಲಿ ಪತ್ತೆಯಾಗಿದ್ದು, ಆತ ನದಿಗೆ ಇಳಿದಿರಬಹುದೆಂಬ ಅನುಮಾನ ಮತ್ತಷ್ಟು ಗಾಢವಾಗಿದೆ.

ಈ ಹಿನ್ನೆಲೆಯಲ್ಲಿ ಸಿಂಗಟಾಲೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಬಸವರಾಜ್ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ನದಿ ತೀರ ಪ್ರದೇಶದಲ್ಲೂ ಪರಿಶೀಲನೆ ನಡೆಸಲಾಗುತ್ತಿದ್ದು, ಬಾಲಕನ ಪತ್ತೆಗಾಗಿ ಎಲ್ಲ ರೀತಿಯ ಪ್ರಯತ್ನಗಳು ಮುಂದುವರಿದಿವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಬಾಲಕನ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿದಿದೆ.

ಬಾಲಕನ ಸುಳಿವು ಇನ್ನೂ ಪತ್ತೆಯಾಗದ ಹಿನ್ನೆಲೆ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಗ್ರಾಮದಲ್ಲಿ ಕೂಡ ಕಳವಳದ ವಾತಾವರಣ ನಿರ್ಮಾಣವಾಗಿದೆ.
