Home » News » ಜನರು‌ ಕೇಳಿದಾಗ ಅನುದಾನದ ನೆಪ..! ಸಿಎಂ ಬರ್ತಾರೆಂದರೆ ರಾತ್ರೋರಾತ್ರಿ ರಸ್ತೆ ರೆಡಿ..! ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ…

ಜನರು‌ ಕೇಳಿದಾಗ ಅನುದಾನದ ನೆಪ..! ಸಿಎಂ ಬರ್ತಾರೆಂದರೆ ರಾತ್ರೋರಾತ್ರಿ ರಸ್ತೆ ರೆಡಿ..! ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ…

by CityXPress
0 comments

ಗದಗ/ ಲಕ್ಷ್ಮೇಶ್ವರ: “ಜನರು ರಸ್ತೆ ದುರಸ್ತಿ ಕೇಳಿದಾಗ ಅನುದಾನವಿಲ್ಲ ಎನ್ನುತ್ತಾರೆ; ಸಿಎಂ ಬರುತ್ತಾರೆಂದರೆ ರಾತ್ರೋರಾತ್ರಿ ರಸ್ತೆ ರೆಡಿಯಾಗುತ್ತದೆ!”—ಇದು ಕೈಗಾ–ಇಳಕಲ್ ರಾಜ್ಯ ಹೆದ್ದಾರಿಯ ದುರವಸ್ಥೆ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರು ವ್ಯಕ್ತಪಡಿಸಿರುವ ಆಕ್ರೋಶ.

ವರದಿ: ಮಹಲಿಂಗೇಶ ಹಿರೇಮಠ. ಗದಗ

ಹಲವು ವರ್ಷಗಳಿಂದ ಹಳ್ಳ-ಕೊಳ್ಳಗಳಿಂದ ಕೂಡಿರುವ ಕೈಗಾ–ಇಲಕಲ್ ರಾಜ್ಯ ಹೆದ್ದಾರಿಯಿಂದ ವಾಹನ ಸವಾರರು, ಲಾರಿ ಚಾಲಕರು ಹಾಗೂ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ರಸ್ತೆ ದುರಸ್ತಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ, ಅನುದಾನದ ಕೊರತೆಯ ನೆಪ ಹೇಳಲಾಗುತ್ತಿತ್ತು. ಆದರೆ, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಗದಗ ಜಿಲ್ಲೆ ಪ್ರವಾಸದ ವೇಳೆ ಲಕ್ಷ್ಮೇಶ್ವರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ಏಕಾಏಕಿ ಚುರುಕುಗೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾತ್ರೋರಾತ್ರಿ ರಸ್ತೆ ದುರಸ್ತಿ

banner

ಮುಖ್ಯಮಂತ್ರಿಗಳ ಸಂಚಾರಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಸಂದರ್ಭದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಭರದಿಂದ ನಡೆದಿದೆ. ನೂರಾರು ಕಾರ್ಮಿಕರು, ರೋಲರ್, ಜೆಸಿಬಿ ಸೇರಿದಂತೆ ವಿವಿಧ ಯಂತ್ರೋಪಕರಣಗಳು ಹಾಗೂ ಜಲ್ಲಿ ತುಂಬಿದ ಲಾರಿಗಳನ್ನು ಬಳಸಿ ರಾತ್ರೋರಾತ್ರಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವರ್ಷಗಳಿಂದ ರಸ್ತೆ ದುರಸ್ತಿಗೆ ಒತ್ತಾಯಿಸಿದಾಗ ಅನುದಾನವಿಲ್ಲ ಎಂದು ಹೇಳುತ್ತಿದ್ದ ಅಧಿಕಾರಿಗಳಿಗೆ, ಇದೀಗ ತುರ್ತಾಗಿ ಕಾಮಗಾರಿ ಕೈಗೊಳ್ಳಲು ಅನುದಾನ ಹೇಗೆ ಲಭ್ಯವಾಯಿತು? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ.

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ

ಈ ಕುರಿತು ಮಾಹಿತಿ ಪಡೆದ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಶಂಕ್ರಣ್ಣ ಬಾಳಿಕಾಯಿ ಅವರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಇಲಾಖೆ, ಮುಖ್ಯಮಂತ್ರಿಗಳ ವಾಹನ ಸಂಚಾರದ ಹಿನ್ನೆಲೆಯಲ್ಲಿ ಮಾತ್ರ ತರಾತುರಿಯಲ್ಲಿ ರಸ್ತೆ ದುರಸ್ತಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

“ಜನಸಾಮಾನ್ಯರ ಪ್ರಾಣಕ್ಕೆ ಬೆಲೆ ಇಲ್ಲವೇ? ಸಿಎಂ ವಾಹನಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈಗ ಕಾಮಗಾರಿ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತೇಪೆ ಬೇಡ, ಶಾಶ್ವತ ಪರಿಹಾರ ಬೇಕು

ರಸ್ತೆಯ ಗುಂಡಿಗಳಿಗೆ ಕೇವಲ ಜಲ್ಲಿ ಹಾಕಿ ತಾತ್ಕಾಲಿಕವಾಗಿ ತೇಪೆ ಹಾಕುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಂಪೂರ್ಣ ಕೈಗಾ–ಇಲಕಲ್ ರಾಜ್ಯ ಹೆದ್ದಾರಿಗೆ ವೈಜ್ಞಾನಿಕವಾಗಿ ಶಾಶ್ವತ ಮರುಡಾಂಬರೀಕರಣ ಮಾಡಬೇಕು ಎಂದು ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕೈಗೊಂಡಿರುವ ಕಾಮಗಾರಿ ಗುಣಮಟ್ಟದ ಬಗ್ಗೆ ಕೂಡ ಪರಿಶೀಲನೆ ನಡೆಸಬೇಕು. ಕಾಮಗಾರಿಗೆ ಬಳಸಲಾಗುತ್ತಿರುವ ಜಲ್ಲಿ, ಡಾಂಬರು ಹಾಗೂ ಇತರ ಸಾಮಗ್ರಿಗಳ ಗುಣಮಟ್ಟವನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಅನುದಾನದ ಬಗ್ಗೆ ತನಿಖೆಗೆ ಆಗ್ರಹ

“ಇಷ್ಟು ವರ್ಷಗಳಿಂದ ರಸ್ತೆ ದುರಸ್ತಿಗೆ ಅನುದಾನವಿಲ್ಲ ಎಂದು ಹೇಳುತ್ತಿದ್ದ ಅಧಿಕಾರಿಗಳಿಗೆ, ಸಿಎಂ ಬರುತ್ತಾರೆ ಎಂದಾಕ್ಷಣ ಹಣ ಹೇಗೆ ಸಿಕ್ಕಿತು? ಕಾಮಗಾರಿಗೆ ಎಷ್ಟು ಅನುದಾನ ಮಂಜೂರಾಗಿದೆ? ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚಾಗುತ್ತಿದೆ?” ಎಂಬುದನ್ನು ಬಹಿರಂಗಪಡಿಸಬೇಕು ಎಂದು ಶಂಕ್ರಣ್ಣ ಬಾಳಿಕಾಯಿ ಒತ್ತಾಯಿಸಿದ್ದಾರೆ.

ತರಾತುರಿಯಲ್ಲಿ ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಹಣ ದುರುಪಯೋಗವಾದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ರಸ್ತೆ ದುರಸ್ತಿ ಕಾಮಗಾರಿ ಏಕಾಏಕಿ ಆರಂಭವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಭೇಟಿ ಮುಗಿದ ಬಳಿಕವೂ ಇದೇ ವೇಗದಲ್ಲಿ ರಸ್ತೆ ಕಾಮಗಾರಿ ಮುಂದುವರಿಯುತ್ತದೆಯೇ ಅಥವಾ ಮತ್ತೆ ಗುಂಡಿಗಳದ್ದೇ ಗತಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb