ಗದಗ: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲೆಗೆ ಆಗಮಿಸಿ ವಿವಿಧ ಪ್ರದೇಶಗಳಲ್ಲಿ ಬರ ಹಾಗೂ ಬೆಳೆ ಹಾನಿ ವೀಕ್ಷಣೆ ನಡೆಸಿದರು. ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಸಮೀಪ ರೈತರ ಜಮೀನುಗಳಿಗೆ ಭೇಟಿ ನೀಡಿದ ಅವರು ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳನ್ನು ಪರಿಶೀಲಿಸಿ, ರೈತರೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿದರು.
ಕದಾಂಪೂರ ಸಮೀಪದ ರೈತರ ಜಮೀನುಗಳಿಗೆ ತೆರಳಿದ ಮುಖ್ಯಮಂತ್ರಿ, ಮಳೆಯ ಕೊರತೆಯಿಂದ ಬೆಳೆಗಳ ಸ್ಥಿತಿ ಹೇಗಿದೆ ಎಂಬುದನ್ನು ಖುದ್ದಾಗಿ ವೀಕ್ಷಿಸಿದರು. ರೈತರು ಎದುರಿಸುತ್ತಿರುವ ಸಮಸ್ಯೆಗಳು, ಬೆಳೆ ಹಾನಿಯ ಪ್ರಮಾಣ ಹಾಗೂ ಸರ್ಕಾರದಿಂದ ನಿರೀಕ್ಷಿಸುತ್ತಿರುವ ಪರಿಹಾರ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ರೈತ ಶಂಕರಪ್ಪ ಗಾವರವಾಡ, ಸುನಿತಾ ಪೂಜಾರ್ ಹಾಗೂ ಕಲ್ಲಪ್ಪ ಕಾಡಪ್ಪಗೋಳ ಅವರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಬೆಳೆಗಳ ಸ್ಥಿತಿ ಹಾಗೂ ಬರದಿಂದಾಗಿರುವ ಹಾನಿಯ ಕುರಿತು ರೈತರೊಂದಿಗೆ ಚರ್ಚಿಸಿದ ಅವರು, ರೈತರ ಅಹವಾಲುಗಳನ್ನು ಆಲಿಸಿದರು. ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಜನರ ನೂಕುನುಗ್ಗಲಿಗೆ ಅಧಿಕಾರಿಗಳ ವಿರುದ್ಧ ಸಿಎಂ ಗರಂ
ಮುಖ್ಯಮಂತ್ರಿಗಳು ಬೆಳೆ ಹಾನಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮೀನುಗಳ ಬಳಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳದಲ್ಲಿದ್ದ ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನರನ್ನು ನಿಯಂತ್ರಿಸಲು ಸಾಧ್ಯವಾಗದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ನಾನು ಬೆಳೆ ಹಾನಿ ನೋಡಲು ಬಂದಿದ್ದೇನೆ. ಜನರನ್ನು ಕಂಟ್ರೋಲ್ ಮಾಡಲು ನಿಮ್ಮಿಂದ ಆಗಲ್ವಾ?” ಎಂದು ಪ್ರಶ್ನಿಸಿದರು.
ಇದೇ ವೇಳೆ ಐಜಿಪಿ, ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ, “ನಾಲ್ಕು ಜನ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದಾಗ ನಿಮಗೆ ಬುದ್ಧಿ ಬರುತ್ತೆ” ಎಂದು ಕಠಿಣವಾಗಿ ವಾರ್ನ್ ಮಾಡಿದರು.
ಮುಖ್ಯಮಂತ್ರಿಗಳ ಈ ಮಾತಿನಿಂದ ಸ್ಥಳದಲ್ಲಿ ಕೆಲಕಾಲ ಅಧಿಕಾರಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬರ ಘೋಷಣೆ, ಪರಿಹಾರಕ್ಕೆ ರೈತರ ಆಗ್ರಹ
ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ರೈತರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಬರದಿಂದಾಗಿ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಜಾನುವಾರುಗಳಿಗೆ ಅಗತ್ಯವಿರುವ ಮೇವು ಲಭ್ಯವಾಗುವಂತೆ ಗೋಶಾಲೆ ಹಾಗೂ ಮೇವು ಬ್ಯಾಂಕ್ಗಳನ್ನು ಆರಂಭಿಸಬೇಕು ಎಂದು ರೈತರು ಮನವಿ ಮಾಡಿದರು.
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ಬರದಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಕ್ರಮ ಕೈಗೊಳ್ಳಬೇಕು ಎಂದು ರೈತರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ರೈತರು ಸಲ್ಲಿಸಿದ ಮನವಿಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವೀಕರಿಸಿ, ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಜಿಲ್ಲೆಗೆ ಬಂದಿರುವುದಾಗಿ ತಿಳಿಸಿದರು.
ಕುರ್ತಕೋಟಿಯಲ್ಲೂ ಬರ ವೀಕ್ಷಣೆ
ಮುಂಡರಗಿ ತಾಲೂಕಿನ ಕದಾಂಪೂರದಲ್ಲಿ ಬರ ವೀಕ್ಷಣೆ ನಡೆಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ತಾಲೂಕಿನ ಕುರ್ತಕೋಟಿ ಗ್ರಾಮಕ್ಕೂ ಭೇಟಿ ನೀಡಿದರು. ಕುರ್ತಕೋಟಿ ಗ್ರಾಮದ ಸಮೀಪದ ಜಮೀನುಗಳಿಗೆ ತೆರಳಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಿದರು.
ರೈತರ ಜಮೀನುಗಳಲ್ಲಿ ಬೆಳೆಗಳ ಸ್ಥಿತಿಗತಿ, ಮಳೆಯ ಕೊರತೆಯಿಂದ ಉಂಟಾಗಿರುವ ಹಾನಿ ಹಾಗೂ ರೈತರ ಸಂಕಷ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮುಖ್ಯಮಂತ್ರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ಎಚ್.ಕೆ. ಪಾಟೀಲ ಸೇರಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗದಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ನೈಜ ಚಿತ್ರಣವನ್ನು ಖುದ್ದಾಗಿ ವೀಕ್ಷಿಸಿರುವ ಮುಖ್ಯಮಂತ್ರಿ, ರೈತರ ಅಹವಾಲುಗಳನ್ನು ಆಲಿಸಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಪರಿಹಾರ ಕ್ರಮಗಳ ಕುರಿತು ಜಿಲ್ಲೆಯ ರೈತರು ಇದೀಗ ಎದುರು ನೋಡುತ್ತಿದ್ದಾರೆ.
