Home » News » ಬಾಗಿಲು ಹಾಕಿ ನನ್ನೆದುರಿಗೆ ಒಂದೂವರೆ ಗಂಟೆ ಕುಳಿತ ಸಿಎಂ; ಬೆದರಿಕೆ ದೌರ್ಜನ್ಯದ ರೀತಿಯಲ್ಲಿ ನನ್ನಿಂದ ರಾಜೀನಾಮೆ ಪಡೆದರು..! ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗಂಭೀರ ಆರೋಪ..

ಬಾಗಿಲು ಹಾಕಿ ನನ್ನೆದುರಿಗೆ ಒಂದೂವರೆ ಗಂಟೆ ಕುಳಿತ ಸಿಎಂ; ಬೆದರಿಕೆ ದೌರ್ಜನ್ಯದ ರೀತಿಯಲ್ಲಿ ನನ್ನಿಂದ ರಾಜೀನಾಮೆ ಪಡೆದರು..! ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗಂಭೀರ ಆರೋಪ..

by CityXPress
0 comments

ಗದಗ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ತಮ್ಮಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೇ ಸ್ವತಃ ಸ್ಪೀಕರ್ ಕಚೇರಿಗೆ ಬಂದು, ಕಚೇರಿಯ ಬಾಗಿಲು ಹಾಕಿಕೊಂಡು ಸುಮಾರು ಒಂದೂವರೆ ಗಂಟೆ ಕುಳಿತುಕೊಂಡಿದ್ದರು. ಬಳಿಕ ದೌರ್ಜನ್ಯದ ರೀತಿಯಲ್ಲಿ ತಮ್ಮ ರಾಜೀನಾಮೆ ಪಡೆಯಲಾಯಿತು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ವರದಿ: ಮಹಲಿಂಗೇಶ ಹಿರೇಮಠ. ಗದಗ

‘ಮುಖ್ಯಮಂತ್ರಿಗಳು ಬೆದರಿಕೆ ರೀತಿಯಲ್ಲಿ ನನ್ನ ರಾಜೀನಾಮೆ ಪಡೆದಿದ್ದಾರೆ’ ಎಂದು ಹೇಳುವ ಮೂಲಕ ಹೊರಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಶನಿವಾರ (29-08-26) ಸ್ಥಳೀಯ ಮಾಧ್ಯಮದವರೊಂದಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ಜುಲೈ 24 ರಂದು ರಾತ್ರಿ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಮಗೆ ಕರೆ ಮಾಡಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಆದರೆ ತಕ್ಷಣ ರಾಜೀನಾಮೆ ನೀಡಲು ತಾವು ಒಪ್ಪಿರಲಿಲ್ಲ. ಬದಲಾಗಿ ಆಗಸ್ಟ್ 14 ರಂದು ವಿಧಾನ ಪರಿಷತ್ ಅಧಿವೇಶನ ಕರೆದು, ಸದನದ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕ ಗೌರವಯುತವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು ಹೊರಟ್ಟಿ ಹೇಳಿದರು.

banner

ಆದರೆ ತಮ್ಮ ನಿರ್ಧಾರಕ್ಕೆ ಅವಕಾಶ ನೀಡದೆ ರಾಜೀನಾಮೆ ಪಡೆಯಲಾಯಿತು ಎಂದು ಅವರು ಆರೋಪಿಸಿದರು.

‘ನನ್ನ ಆಪ್ತ ಕಾರ್ಯದರ್ಶಿಗೆ ನನ್ನ ಶಿರೋನಾಮೆಯ ಲೆಟರ್ ತರಲು ಅವರೇ ಹೇಳಿದ್ದರು. ಯಾವುದೇ ಕಾರಣ ನೀಡದೆ ತಾವೇ ರಾಜೀನಾಮೆ ಪತ್ರ ಟೈಪ್ ಮಾಡಿಸಿ, ನನ್ನಿಂದ ಸಹಿ ಮಾಡಿಸಿದರು. ಮುಖ್ಯಮಂತ್ರಿಗಳೇ ನನ್ನ ಕಚೇರಿಗೆ ಬಂದು ಬಾಗಿಲು ಹಾಕಿಕೊಂಡು ಒಂದೂವರೆ ಗಂಟೆ ಕುಳಿತಿದ್ದರು. ದೌರ್ಜನ್ಯದ ರೂಪದಲ್ಲಿ ನನ್ನ ರಾಜೀನಾಮೆ ಪಡೆದರು’ ಎಂದು ಹೊರಟ್ಟಿ ಆರೋಪಿಸಿದರು.

ರಾಜೀನಾಮೆ ಸುತ್ತ ಹೊಸ ವಿವಾದ

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ಇದೀಗ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೊಸ ಆರೋಪದಿಂದ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಸಭಾಪತಿ ಸ್ಥಾನದಿಂದ ನಿರ್ಗಮಿಸುವ ಸಂದರ್ಭದಲ್ಲಿ ಸದನದ ಸದಸ್ಯರಿಗೆ ವಿದಾಯ ಹಾಗೂ ಕೃತಜ್ಞತೆ ಸಲ್ಲಿಸುವ ಅವಕಾಶವಿರುತ್ತದೆ. ಆದರೆ ತಮಗೆ ಅಂತಹ ಅವಕಾಶ ಸಿಗಲಿಲ್ಲ ಎಂಬ ಅಸಮಾಧಾನವನ್ನು ಹೊರಟ್ಟಿ ಹೊರಹಾಕಿದ್ದಾರೆ.

ತಮ್ಮ ರಾಜೀನಾಮೆ ಪತ್ರವನ್ನೂ ಮುಖ್ಯಮಂತ್ರಿಗಳೇ ಟೈಪ್ ಮಾಡಿಸಿ ಸಹಿ ಮಾಡಿಸಿದರು ಎಂಬ ಆರೋಪ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ. ರಾಜೀನಾಮೆ ಪಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ನಡೆ ಹೇಗಿತ್ತು ಎಂಬ ಕುರಿತು ಹೊರಟ್ಟಿ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಈ ಘಟನೆ ನನಗೆ ಬಹಳ ನೋವು ತಂದಿದೆ. ಯಾವುದೇ ಕಾರಣ ನೀಡದೇ ರಾಜೀನಾಮೆ ಪತ್ರ ಟೈಪ್ ಮಾಡಿಸಿ ಸಹಿ ಮಾಡಿಸಿದ್ದು ನಿಜಕ್ಕೂ ನೋವುಂಟು ಮಾಡಿದೆ’ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಮಾಜಿ ಸಭಾಪತಿ ಮಾಡಿರುವ ಈ ಗಂಭೀರ ಆರೋಪಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿದೆಯೇ ಎಂಬುದು ಮುಂದಿನ ಬೆಳವಣಿಗೆಯಲ್ಲಿ ಮಹತ್ವ ಪಡೆಯಲಿದೆ. ಹೊರಟ್ಟಿ ಅವರ ಹೇಳಿಕೆ ರಾಜೀನಾಮೆ ವಿಚಾರಕ್ಕೆ ಹೊಸ ರಾಜಕೀಯ ಆಯಾಮ ನೀಡಿದ್ದು, ಈ ಆರೋಪಕ್ಕೆ ಸರ್ಕಾರದ ಕಡೆಯಿಂದ ಬರುವ ಪ್ರತಿಕ್ರಿಯೆಯತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb