ಗದಗ: ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ ಖರೀದಿ ಮಾಡಬಾರದು, ಪೆಟ್ರೋಲ್ ಹಾಗೂ ಡೀಸೆಲ್ನ್ನು ಮಿತವಾಗಿ ಬಳಸಬೇಕು ಎಂದು ದೇಶದ ಜನತೆಗೆ ನೀಡಿರುವ ಸಲಹೆ ವಿರುದ್ಧ ಕಾಂಗ್ರೆಸ್ ನಾಯಕರು ವ್ಯಂಗ್ಯ ಮಾಡುತ್ತಿರುವುದು “ಹುಚ್ಚರ ಕೈಗೆ ತೆಂಗಿನಕಾಯಿ ಕೊಟ್ಟಂತಾಗಿದೆ” ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದರು.
ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಜನತೆಗೆ ಜವಾಬ್ದಾರಿಯುತ ಸಂದೇಶ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಅದನ್ನೇ ರಾಜಕೀಯ ಟೀಕೆ ಮತ್ತು ವ್ಯಂಗ್ಯಕ್ಕೆ ಬಳಸಿಕೊಳ್ಳುತ್ತಿರುವುದು ದುರಂತಕರ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪ್ರಧಾನಿ ಮೋದಿ ಅವರು ಹೇಳಿದಂತೆ ತಾವೇ ನಡೆದುಕೊಳ್ಳುತ್ತಿದ್ದಾರೆ. ಅನಾವಶ್ಯಕ ಖರ್ಚು ಕಡಿಮೆ ಮಾಡಬೇಕು, ಇಂಧನ ಬಳಕೆ ನಿಯಂತ್ರಣದಲ್ಲಿರಬೇಕು ಎಂದು ಕರೆ ನೀಡಿದ್ದಾರೆ. ತಮ್ಮ ಭದ್ರತೆಗಾಗಿ ಇರುವ Z+ ಸೆಕ್ಯೂರಿಟಿಯಲ್ಲಿಯೂ ಸರಳತೆಯನ್ನು ಪಾಲಿಸಿಕೊಂಡು, ಸಾಧ್ಯವಾದಷ್ಟು ನಿಯಮಿತ ವಾಹನ ಬಳಕೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಇದನ್ನೆಲ್ಲ ಬಿಟ್ಟು ವ್ಯಂಗ್ಯ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
ಜಗತ್ತಿನಲ್ಲೇ ಅತ್ಯಂತ ಹೆಚ್ಚು ಭದ್ರತಾ ಅಪಾಯ ಎದುರಿಸುತ್ತಿರುವ ನಾಯಕರಲ್ಲಿ ಪ್ರಧಾನಿ ಮೋದಿ ಪ್ರಮುಖರು. ಆದರೂ ಅವರು ಸರಳ ಜೀವನಶೈಲಿಯ ಸಂದೇಶ ನೀಡುತ್ತಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಾವು ಏನು ಪಾಲನೆ ಮಾಡುತ್ತಿದ್ದಾರೆ ಎಂಬುದನ್ನು ಮೊದಲು ಜನರಿಗೆ ತಿಳಿಸಲಿ ಎಂದು ಪ್ರಶ್ನಿಸಿದರು.
“ನಿಮ್ಮ ಹಿಂದೆ ಎಷ್ಟು ವಾಹನಗಳು ಬರುತ್ತಿವೆ ಎಂಬುದನ್ನು ಮೊದಲು ನೋಡಿ. ದೇಶದ ಜನರಿಗೆ ಮಿತವ್ಯಯದ ಸಂದೇಶ ನೀಡುತ್ತಿರುವ ಪ್ರಧಾನಿಯವರ ವಿರುದ್ಧ ಟೀಕೆ ಮಾಡುವ ನೈತಿಕ ಹಕ್ಕು ಕಾಂಗ್ರೆಸ್ ನಾಯಕರಿಗೆ ಇಲ್ಲ” ಎಂದು ಕಿಡಿಕಾರಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ಮನ್ ಮೋಹನ್ ಸಿಂಗ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಜನತೆಗೆ ಇಂತಹ ಸಲಹೆಗಳನ್ನು ನೀಡಿದ್ದರು. ಆಗ ಅದನ್ನು ದೇಶಭಕ್ತಿಯ ದೃಷ್ಟಿಯಿಂದ ನೋಡಲಾಗುತ್ತಿತ್ತು. ಈಗ ಮಾತ್ರ ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ಒಳಗಿನ ಪರಿಸ್ಥಿತಿ ಕುರಿತು ಮಾತನಾಡಿದ ಶ್ರೀರಾಮುಲು, “ಕಾಂಗ್ರೆಸ್ನಲ್ಲಿ ಹಿರಿಯ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಹೈಕಮಾಂಡ್ನ ನಡವಳಿಕೆ ಸರಿಯಿಲ್ಲ ಎಂಬ ಅಸಮಾಧಾನ ದಿನೇದಿನೇ ಹೆಚ್ಚುತ್ತಿದೆ. ಪಕ್ಷದೊಳಗೆ ನಾಯಕತ್ವದ ಗೊಂದಲ ಹಾಗೂ ಕುಟುಂಬ ರಾಜಕಾರಣವೇ ಹೆಚ್ಚಾಗಿದೆ” ಎಂದು ಹೇಳಿದರು.
“ಕಾಂಗ್ರೆಸ್ ನಾಯಕರು ದಪ್ಪ ಚರ್ಮದ ನಾಯಕರು. ಯಾರೇ ಸರಳ ಜೀವನದ ಸಂದೇಶ ನೀಡಿದರೂ ಅದನ್ನು ವ್ಯಂಗ್ಯ ಮಾಡುತ್ತಾರೆ. ಸೈಕಲ್ ಮೇಲೆ ಸವಾರಿ ಮಾಡಿದ ನಾಯಕರನ್ನೂ ಟೀಕಿಸುತ್ತಾರೆ. ನಾಟಕ ಮಾಡಿ ರಾಜ್ಯ ಆಳಬೇಕು ಎಂಬ ಮನೋಭಾವ ಕಾಂಗ್ರೆಸ್ ನಾಯಕರದ್ದು” ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಅವಧಿಯಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಲೇ ಬಂದಿದೆ. ಆದರೆ ಜನರ ಹಿತದ ವಿಚಾರ ಬಂದಾಗ ಕಾಂಗ್ರೆಸ್ ನಾಯಕರಿಗೆ ದೇಶ ಮುಖ್ಯವಲ್ಲ, ಗಾಂಧಿ ಕುಟುಂಬವೇ ಮುಖ್ಯ ಎಂದು ಟೀಕಿಸಿದರು.
ರಾಜಕೀಯ ಟೀಕೆಗಳ ಬದಲು ದೇಶದ ಅಭಿವೃದ್ಧಿ, ಆರ್ಥಿಕ ಶಿಸ್ತು ಮತ್ತು ಜನರ ಹಿತದ ಬಗ್ಗೆ ಕಾಂಗ್ರೆಸ್ ನಾಯಕರು ಚಿಂತನೆ ಮಾಡಬೇಕು ಎಂದು ಶ್ರೀರಾಮುಲು ಸಲಹೆ ನೀಡಿದರು. ಈ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಎಂ.ಎಂ.ಹಿರೇಮಠ, ಸೇರಿದಂತೆ ಪಕ್ಷದ ಹಲವು ನಾಯಕರು ಇದ್ದರು.

