Table of Contents
ಎಸ್‌ಪಿ ರೋಹನ್ ಜಗದೀಶ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಕ್ರಮ
ಕೊಲೆ, ಗಾಂಜಾ ಮಾರಾಟ, ಸಾರ್ವಜನಿಕ ಶಾಂತಿ ಭಂಗ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಖಡಕ್ ಕಾರ್ಯಾಚರಣೆ
ಗದಗ: ಜಿಲ್ಲೆಯಾದ್ಯಂತ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅಪರಾಧಿಕ ಹಿನ್ನೆಲೆಯುಳ್ಳ ವ್ಯಕ್ತಿಗಳ ವಿರುದ್ಧ ಗದಗ ಜಿಲ್ಲಾ ಪೊಲೀಸರು ಕಳೆದ ಎರಡು ತಿಂಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಐವರನ್ನು ಜಿಲ್ಲೆಯ ವ್ಯಾಪ್ತಿಯಿಂದ ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಿ ಮಹತ್ವದ ಕ್ರಮ ಕೈಗೊಂಡಿದ್ದಾರೆ.
ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳ ಸಮನ್ವಯ ಕಾರ್ಯಾಚರಣೆಯ ಮೇರೆಗೆ ಈ ಕ್ರಮ ಜರುಗಿಸಲಾಗಿದೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ, ಕೊಲೆಗೆ ಯತ್ನ, ಗಾಂಜಾ ಮಾರಾಟ, ಹಲ್ಲೆ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿ ಭಂಗ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಹಲವು ಬಾರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಸಹ ತಮ್ಮ ಚಟುವಟಿಕೆಗಳನ್ನು ನಿಲ್ಲಿಸದೇ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಕಾನೂನು ಸುವ್ಯವಸ್ಥೆ ಉಳಿಸುವುದು ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ, ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನಂತರ ಐವರ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ.
ಗಡಿಪಾರುಗೊಂಡವರಲ್ಲಿ ನರಗುಂದ ಭಾಗದ ದವನಪ್ಪ ಹಾಗೂ ದಾವಲಸಾಬ, ಗದಗ ಶಹರ ಭಾಗದ ಮುಸ್ತಾಕ್, ಅಭಿಷೇಕ ಮತ್ತು ಸಾಹಿಲ್ ಸೇರಿದ್ದಾರೆ.
ವಿವಿಧ ಠಾಣೆಗಳಲ್ಲಿ ಗಂಭೀರ ಪ್ರಕರಣಗಳು ದಾಖಲು
ದವನಪ್ಪ ವಿರುದ್ಧ 2017ರಿಂದಲೇ ನರಗುಂದ ಪೊಲೀಸ್ ಠಾಣೆಯಲ್ಲಿ ಗಲಾಟೆ, ಹಲ್ಲೆ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿ ಭಂಗ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಕೋವಿಡ್ ಅವಧಿಯಲ್ಲಿ ಎಪಿಡೆಮಿಕ್ ಡಿಸೀಜಸ್ ಕಾಯ್ದೆ ಉಲ್ಲಂಘನೆ ಸಂಬಂಧವೂ ಪ್ರಕರಣ ದಾಖಲಾಗಿತ್ತು.
ದಾವಲಸಾಬ ವಿರುದ್ಧ ಗಾಂಜಾ ಮಾರಾಟ ಹಾಗೂ ಸಾಗಾಟ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ನರಗುಂದ ಪೊಲೀಸ್ ಠಾಣೆ ಮತ್ತು ಅಬಕಾರಿ ಇಲಾಖೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಮುಸ್ತಾಕ್ ವಿರುದ್ಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಬೆದರಿಕೆ, ಜಾತಿ ನಿಂದನೆ ಸೇರಿದಂತೆ ಬಿಎನ್‌ಎಸ್ ಅಡಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದರೆ, ಅಭಿಷೇಕ ಹಾಗೂ ಸಾಹಿಲ್ ವಿರುದ್ಧವೂ ಸಾರ್ವಜನಿಕ ಶಾಂತಿ ಭಂಗ ಹಾಗೂ ಬೆದರಿಕೆ ಪ್ರಕರಣಗಳು ದಾಖಲಾಗಿದ್ದವು.
ಸಮಾಜ ವಿರೋಧಿಗಳಿಗೆ ಖಡಕ್ ಎಚ್ಚರಿಕೆ
ಗದಗ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, “ಜಿಲ್ಲೆಯಲ್ಲಿ ಸಮಾಜ ವಿರೋಧಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾವುದೇ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.

ಕೇವಲ ಎರಡು ತಿಂಗಳ ಅವಧಿಯಲ್ಲಿ ಅಪರಾಧಿಕ ಹಿನ್ನೆಲೆಯ ಐವರನ್ನು ಗಡಿಪಾರು ಮಾಡುವ ಮೂಲಕ ಗದಗ ಪೊಲೀಸರು ಅಪರಾಧ ನಿಯಂತ್ರಣದತ್ತ ಕಠಿಣ ಸಂದೇಶ ರವಾನಿಸಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
