ಗದಗ, ಮೇ 20:
ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇನ ನಾಗನೂರ ಗ್ರಾಮದಲ್ಲಿ ಪತ್ನಿಯೇ ಪತಿಯನ್ನು ಕಬ್ಬಿಣದ (ಹಾರಿ) ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮದಲ್ಲಿ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ.
ವರದಿ:ಮಹಲಿಂಗೇಶ್ ಹಿರೇಮಠ. ಗದಗ
ಗ್ರಾಮದ ನಿವಾಸಿ ವಿಶ್ವನಾಥ ಶ್ರೀಶೈಲಪ್ಪ ಹಾದಿಮನಿ (29) ಕೊಲೆಯಾದ ದುರ್ದೈವಿ. ಈ ಪ್ರಕರಣದಲ್ಲಿ ಮೃತನ ಪತ್ನಿ ಕವಿತಾ ಹಾದಿಮನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಾಹಿತಿಯಂತೆ, ವಿಶ್ವನಾಥ ಮತ್ತು ಕವಿತಾ ಅವರು 2022ರ ಫೆಬ್ರವರಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ದಿನದಿಂದಲೇ ದಾಂಪತ್ಯ ಜೀವನದಲ್ಲಿ ವೈಮನಸ್ಸು, ಜಗಳಗಳು ನಡೆಯುತ್ತಿತ್ತೆಂದು ತಿಳಿದುಬಂದಿದೆ.
ಮೃತ ವಿಶ್ವನಾಥ ಡಿಪ್ಲೋಮಾ ಇಂಜಿನಿಯರ್ ವಿದ್ಯಾಭ್ಯಾಸ ಮಾಡಿದ್ದು, ಗ್ರಾಮದಲ್ಲೇ ಕೃಷಿ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ತಂದೆ ಮಾಜಿ ಸೈನಿಕರಾಗಿದ್ದಾರೆ ಎನ್ನಲಾಗಿದೆ.
ಗಂಡ, ಹೆಂಡತಿ ಇಬ್ಬರ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಕವಿತಾ ತವರು ಮನೆಗೆ ತೆರಳಿದ್ದು, ಬಳಿಕ ಗಂಡನ ಮನೆಗೆ ಮರಳಿ ಬಂದಿರಲಿಲ್ಲ. ಆದರೆ ಸುಮಾರು 15 ದಿನಗಳ ಹಿಂದಷ್ಟೇ ಮತ್ತೆ ಗಂಡನ ಮನೆಗೆ ವಾಪಸ್ ಬಂದಿದ್ದಳು ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ವೇಳೆ ದಂಪತಿಯ ನಡುವೆ ಮತ್ತೆ ಜಗಳ ಉಂಟಾಗಿದ್ದು, ಆಕ್ರೋಶಗೊಂಡ ಕವಿತಾ ಕಬ್ಬಿಣದ ಸಲಾಕೆಯಿಂದ ವಿಶ್ವನಾಥ ಅವರ ತಲೆಗೆ ಹೊಡೆದಿದ್ದಾಳೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ವಿಶ್ವನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.
ಘಟನೆ ನಡೆದ ವೇಳೆ ಮನೆಯ ಮಹಡಿಯಲ್ಲಿ ಅತ್ತೆ ಮಲಗಿಕೊಂಡಿದ್ದರೆ, ಮಾವ ಮನೆಯ ಹೊರಭಾಗದಲ್ಲಿ ಮಲಗಿದ್ದರೆಂದು ಮಾಹಿತಿ ದೊರೆತಿದೆ.
ಈ ದಂಪತಿಗೆ ಮೂರು ವರ್ಷದ ಗಂಡು ಮಗು ಇದ್ದು, ತಂದೆಯನ್ನು ಕಳೆದುಕೊಂಡು ಮಗು ಅನಾಥವಾಗಿರುವುದು ಮನಕಲಕುವಂತಾಗಿದೆ.
ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
