ಲಕ್ಷ್ಮೇಶ್ವರ: ಶಿಕ್ಷಣ ಪ್ರೇಮಿ ಮಾತೋಶ್ರೀ ಕಮಲಮ್ಮ ವಿ. ಅಗಡಿ.
( ಜೂನ್ 01, 2026 ರಂದು ಲಕ್ಷ್ಮೇಶ್ವರದ ಅಗಡಿ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಮಾತೋಶ್ರೀ ಕಮಲಮ್ಮ ವಿ. ಅಗಡಿಯವರ 88 ನೆಯ ಜನ್ಮದಿನ ತನ್ನಿಮಿತ್ತ ಈ ಲೇಖನ )
ಸಮಾಜ ಬದಲಾವಣೆಯ ಕನಸು ಕಾಣುವುದು ಸುಲಭ ಆದರೆ, ಕಂಡ ಕನಸನ್ನು ಸಾಕಾರಗೊಳಿಸಲು ಮಾಡುವ ಪ್ರಯತ್ನಗಳು ಅಷ್ಟೇನು ಸುಲಭವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಮಹಾದಾಸೆಯಿಂದ ಲಕ್ಷ್ಮೇಶ್ವರದಲ್ಲಿ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜನೀಯರಿಂಗ್ ಮಹಾವಿದ್ಯಾಲಯ ಸ್ಥಾಪಿಸುವಲ್ಲಿ ದಿವಂಗತ ಶ್ರೀ ವೆಂಕಪ್ಪ ಎಂ. ಅಗಡಿಯವರಿಗೆ ಬೆನ್ನೆಲುಬಾಗಿ ನಿಂತು ಅವರ ಕನಸು ಸಾಕಾರಗೊಳಿಸಿದವರು ಅವರ ಧರ್ಮಪತ್ನಿ ಮಾತೋಶ್ರೀ ಕಮಲಮ್ಮ ವಿ. ಅಗಡಿಯವರು.
ಮಾತೋಶ್ರೀ ಕಮಲಮ್ಮ ಅವರು ೦1/೦6/1938 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಾ. ನರಸಿಂಹಶೆಟ್ಟಿ ತಾಯಿ ಲೀಲಾವತಿ ಕ್ರಿ. ಶ 1938ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಪದವಿ ಗಳಿಸಿ ಅಂದಿನ ಸ್ತ್ರಿಯರಿಗೆ ಆದರ್ಶಪ್ರಾಯರಾದರು.ಮಾರ್ಚ 5, 1961 ರಲ್ಲಿ ಬೆಂಗಳೂರಿನ ವಿ ವಿ ಪುರಂನಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ವೆಂಕಪ್ಪ ಎಂ. ಅಗಡಿಯವರ ಜೊತೆ ಇವರ ವಿವಾಹವಾಯಿತು. ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳ್ಳದ ಇವರು ತಾವು ಹುಟ್ಟಿದ ಸಮಾಜಕ್ಕೆ, ನಾಡಿಗೆ, ತಮ್ಮನ್ನು ಸಮರ್ಪಿಸಿಕೊಳ್ಳಬಯಸಿದವರು. ಇನ್ನರವ್ಹೀಲ್ ಕ್ಲಬ್, ಮುಂಬೈ ಇದರ ಅಧ್ಯಕ್ಷೆಯಾಗಿ ಅನೇಕ ಮಹಿಳಾ ಪರ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಇತರ ಮಹಿಳೆಯರಿಗೆ ಆದರ್ಶ ಪ್ರಾಯರಾಗಿ ಮಾದರಿಯಾದವರು.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಆದರ್ಶ ಸ್ತ್ರೀ ಇರುತ್ತಾಳೆ ಎನ್ನುವಂತೆ ದಿವಂಗತ ಶ್ರೀ ವೆಂಕಪ್ಪ ಎಂ. ಅಗಡಿಯವರ ಸಾಧನೆ, ಯಶಸ್ಸಿನ ಹಿಂದೆ ಮಾತೋಶ್ರೀ ಕಮಲಮ್ಮ ಅಗಡಿಯವರ ಪ್ರೋತ್ಸಾಹ, ಸಹಕಾರ ಕಾರಣವಾಗಿದೆ. ಅಲ್ಲದೇ ಇವರು ಭಾರತದ ಪ್ರಥಮ ವಿಮಾನ ಚಾಲಕರಾದ ದಿ. ಪ್ರೋ. ವೆಂಕಟಸುಬ್ಬಾ ಶೆಟ್ಟಿಯವರ ಮೊಮ್ಮಗಳು, ಪ್ರೋ ವೆಂಕಟಸುಬ್ಬಾ ಶೆಟ್ಟಿಯವರು ಗ್ರಾಮಾಂತರ ಪ್ರದೇಶದಲ್ಲಿ ಒಂದು ಇಂಜಿನೀಯರಿಂಗ್ ಕಾಲೇಜ್ ಸ್ಥಾಪಿಸಬೇಕೆಂದು ಕನಸು ಕಂಡಿದ್ದರು. ಆ ಕನಸನ್ನು ಅವರ ಮೊಮ್ಮಗಳಾದ ಶ್ರೀಮತಿ ಕಮಲಾ, ವಿ, ಅಗಡಿಯವರು ತಮ್ಮ ಪತಿ ವೆಂಕಪ್ಪ ಎಮ್. ಅಗಡಿಯವರ ಜೊತೆಗೂಡಿ ಕ್ರಿ. ಶ 2003 ರಲ್ಲಿ ವೆಂಕಪ್ಪನವರ ಹುಟ್ಟುರಾದ
ಲಕ್ಷ್ಮೇಶ್ವರದಲ್ಲಿ ಇಂಜನೀಯರಿಂಗ್ ಕಾಲೇಜ ಸ್ಥಾಪಿಸುವ ಮೂಲಕ ನನಸಾಗಿಸಿದ್ದಾರೆ.
ಇಂದು ಈ ಮಹಾವಿದ್ಯಾಲಯವು ಮೆಕಾನಿಕಲ್, ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಕಂಪ್ಯೂಟರ್ ಸಾಯಿನ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸಿವಿಲ್ ಮತ್ತು ಇ ಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ & ಕಂಪ್ಯೂಟರ್ ಸಾಯಿನ್ಸ್ (AIML )ವಿಭಾಗಗಳನ್ನೊಳಗೊಂಡು ಅತ್ಯಾಧುನಿಕ ಡಿಜಿಟಲ್ ಲೈಬ್ರರಿ, ಉತ್ಕೃಷ್ಟ ಪ್ರಯೋಗಾಲಯಗಳು, ಇ-ವಿದ್ಯಾ, ಡಿಜಿಟಲ್ ಕ್ಲಾಸ್ ರೂಮ್, ಅಂತರ್ಜಾಲ, ಸುಸಜ್ಜಿತ ಕಟ್ಟಡ, ಪೀಠೋಪಕರಣಗಳು, ಹಾಸ್ಟೇಲ್, ಆಟದ ಮೈದಾನ ಒಳಗೊಂಡ ಮಹಾವಿದ್ಯಾಲಯದಲ್ಲಿ ಇಂದು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸಿಸುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು , ಸತ್ಯಂ, ಸೋನಾಟಾ ಎಸ್/ಡಬ್ಲು, ಇನ್ಪೋಸಿಸ್, ಎಲ್ & ಟಿ, ಕೀನೆ, ಐ. ಬಿ. ಎಮ್. ಪ್ರೈಮಸ್ ಕಂಪನಿ ಕೆ. ಬಿ. ಕೆ. ಯಂತಹ ಪ್ರತಿಷ್ಠಿತ ಸಾಪ್ಟೇವೇರ್ ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವುದು ಈ ಕಾಲೇಜಿನ ಹಿರಿಮೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಲ್ಲಿಯವರೆಗೆ ಸಂಸ್ಥೆಯ ವತಿಯಿಂದ ಸುಮಾರು ಒಂದು ಕೋಟಿ ಐವತ್ತು ಲಕ್ಷದಷ್ಟು ವಿದ್ಯಾರ್ಥಿ ವೇತನ ನೀಡಿರುವುದು ವಿಶೇಷವಾಗಿದೆ.
ಕೇವಲ ಶಿಕ್ಷಣಕ್ಕೆ ಮಾತ್ರ ತಮ್ಮ ಸಮಾಜ ಸೇವೆಯನ್ನು ಸೀಮೀತಗೊಳಿಸಿದ ಶ್ರೀ ವೆಂಕಪ್ಪ ಎಂ. ಅಗಡಿಯವರು ಗ್ರಾಮೀಣ ಮತ್ತು ಬಡ ಜನತೆಯ ಮನೆಬಾಗಿಲಿಗೆ ಅತ್ಯಾಧುನಿಕ ವೈಧ್ಯಕೀಯ ಸೌಲಭ್ಯಗಳು ದೊರೆಯಬೇಕೆಂಬ ನಿಟ್ಟನಲ್ಲಿ ಅವರು ಕಂಡ ಕನಸಿನಂತೆ ಅಗಡಿ ಸನ್ ರೈಸ್ ಆಸ್ಪತ್ರೆಯನ್ನು, ಅಲ್ಲದೆ ಧಾರ್ಮಿಕವಾಗಿ ಸೇವೆಗೈಯಲು ಶ್ರೀ ತಿರುಪತಿ ವೆಂಕಟೇಶ್ವರ ದೇವಾಲಯವನ್ನು ನಿರ್ಮಿಸುವಲ್ಲಿ ಮಾತೋಶ್ರೀ ಕಮಲಮ್ಮ ವಿ. ಅಗಡಿಯವರ ಪಾತ್ರ ಮಹತ್ವದ್ದಾಗಿದೆ.
ಇಂದು ಸಂಸ್ಥೆಯ ಚೇರ್ ಮನ್ನರಾದ ಶ್ರೀ ಹರ್ಷವರ್ಧನ ವೆಂಕಪ್ಪ ಅಗಡಿ ಹಾಗೂ ವೈಸ್ ಚೇರ್ ಪರ್ಸನ್ ರಾದ ಶ್ರೀಮತಿ ಗೀತಾ ಹರ್ಷವರ್ಧನ ಅಗಡಿಯವರ ದೂರದೃಷ್ಟಿತ್ವ ಫಲವಾಗಿ ಕ್ರಿ. ಶ 2023 ರಲ್ಲಿ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ ಅಗಡಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾರಂಭಿಸಲಾಗಿದೆ ಸಂಸ್ಥೆಗೆ ಕಳಶಪ್ರಾಯ ಎಂಬಂತೆ ಆಡಳಿತ ಮಂಡಳಿ ಮಾರ್ಗದರ್ಶನ ಮತ್ತು ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದ ಪ್ರಯತ್ನದ ಫಲವಾಗಿ ಯುಜಿಸಿ ನವದೆಹಲಿ ವತಿಯಿಂದ ಇಂಜನೀಯರಿಂಗ್ ಕಾಲೇಜಿಗೆ ನ್ಯಾಕ್ ಬಿ ++ ಮಾನ್ಯತೆ 2024 ರಲ್ಲಿ ಪಡೆಯಲು, ಕರ್ನಾಟಕ ಸರಕಾರದ NAIN 2.೦ ಯೋಜನೆಗೆ ಆಯ್ಕೆಯಾಗಲು, ಮಾತೋಶ್ರೀ ಕಮಲಮ್ಮ ವಿ ಅಗಡಿಯವರ ಶುಭಿಚ್ಛೆ ಮತ್ತು ಆಶೀರ್ವಾದವೇ ಕಾರಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕಳೆದ ಎರಡು ದಶಕಗಳಿಂದ ಮಹಾವಿದ್ಯಾಲಯದಲ್ಲಿ ಇಂಜಿನೀಯರಿಂಗ್ ಪದವಿ ಪೂರೈಸಿದ ಸಾವಿರಾರು ವಿದ್ಯಾರ್ಥಿ ಗಳು ಇಂದು ತಮ್ಮ ಕುಟುಂಬಕ್ಕೆ ಆಸರೆಯಾಗಿ ಹಾಗೂ ದೇಶ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸುತ್ತಿರುವ ಕೀರ್ತಿ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಶ್ರೀ ವೆಂಕಪ್ಪ ಎಂ ಅಗಡಿ ಮತ್ತು ಮಾತೋಶ್ರೀ ಕಮಲಮ್ಮ ವಿ ಅಗಡಿಯವರಿಗೆ ಸಲ್ಲುತ್ತದೆ.
ಜೂನ್ 01, 2026 ರಂದು ಮಾತೋಶ್ರೀ ಕಮಲಮ್ಮ ವಿ. ಅಗಡಿಯವರ 88 ನೆಯ ಜನ್ಮದಿನದ ಅಂಗವಾಗಿ ಇಂಜನೀಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಪರಶುರಾಮ ಬಾರಕಿ ಅವರ ಮಾರ್ಗದರ್ಶನದಲ್ಲಿ ಎನ್ ಎಸ್ ಎಸ್ ಘಟಕ ಹಾಗೂ ಅದ್ವಿತಾ ಲೇಡಿಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ, ಸಸಿ ನೆಡುವುದು ಹೀಗೆ ಹಲವಾರು ವಿಧಾಯಕ ಕಾರ್ಯಕ್ರಮಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಮಾತೋಶ್ರೀ ಕಮಲಮ್ಮ ವಿ ಅಗಡಿ ಅವರು ನೂರುಕಾಲ ಬಾಳಿ ನಮ್ಮನ್ನೆಲ್ಲಾ ಆಶೀರ್ವದಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
ಲೇಖಕರು.. ಪ್ರೊ. ಸೋಮಶೇಖರ. ಚ. ಕೆರಿಮನಿ
ಸಹ ಪ್ರಾಧ್ಯಾಪಕರು ಶ್ರೀಮತಿ ಕಮಲಾ ವಿ. ಅಗಡಿ ತಾಂತ್ರಿಕ ಮಹಾವಿದ್ಯಾಲಯ,
ಲಕ್ಷ್ಮೇಶ್ವರ ಜಿ: ಗದಗ 944911196
