Home » News » ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ; ಕಂದಾಯ ನಿರೀಕ್ಷಕನಿಗೆ ವಂಚಕರಿಂದ ಬೆದರಿಕೆ ಕರೆ..

ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ; ಕಂದಾಯ ನಿರೀಕ್ಷಕನಿಗೆ ವಂಚಕರಿಂದ ಬೆದರಿಕೆ ಕರೆ..

by CityXPress
0 comments

ರೋಣ/ಗದಗ: ಜೂನ್ 6: ಲೋಕಾಯುಕ್ತ ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿರುವ ವಂಚಕರ ಜಾಲ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ರೋಣ ಪಟ್ಟಣದ ಪುರಸಭೆಯ ಕಂದಾಯ ನಿರೀಕ್ಷಕರೊಬ್ಬರಿಗೆ ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಕರೆ ಮಾಡಿ ₹30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ವರದಿ: ಮಹಲಿಂಗೆಶ್ ಹಿರೇಮಠ. ಗದಗ

ಪುರಸಭೆಯ ಕಂದಾಯ ನಿರೀಕ್ಷಕರಾದ ವಿನಾಯಕ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ಲೋಕಾಯುಕ್ತ ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಮಾತನಾಡಿದ ಆತ, “ನಿಮ್ಮ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ದಾಖಲಾಗಿದೆ. ಪ್ರಕರಣ ದಾಖಲಿಸದಂತೆ ನೋಡಿಕೊಳ್ಳಬೇಕಾದರೆ ₹30 ಸಾವಿರ ಹಣ ನೀಡಬೇಕು. ಇಲ್ಲವಾದರೆ ನಾಳೆಯೇ ನಿಮ್ಮ ಕಚೇರಿಗೆ ಬಂದು ನಿಮ್ಮನ್ನು ಬಂಧಿಸಲಾಗುವುದು” ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಅನಿರೀಕ್ಷಿತ ಕರೆ ಹಾಗೂ ಬೆದರಿಕೆ ಮಾತುಗಳಿಂದ ಗಾಬರಿಗೊಂಡ ಕಂದಾಯ ನಿರೀಕ್ಷಕರು, “ನನ್ನ ಬಳಿ ಅಷ್ಟು ಹಣ ಇಲ್ಲ. ₹15 ಸಾವಿರ ಮಾತ್ರ ಕೊಡಲು ಸಾಧ್ಯ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಂಚಕ, “ಸರಿ, ಆದರೆ 30 ನಿಮಿಷಗಳೊಳಗೆ ಹಣವನ್ನು ಕಳುಹಿಸಬೇಕು. ಇಲ್ಲದಿದ್ದರೆ ನಾವು ನೇರವಾಗಿ ನಿಮ್ಮ ಕಚೇರಿಗೆ ಬರುತ್ತೇವೆ” ಎಂದು ಹೇಳಿ ಕರೆ ಕಡಿತಗೊಳಿಸಿದ್ದಾನೆ.

banner

ಇದಾದ ಕೆಲವೇ ಹೊತ್ತಿನಲ್ಲಿ ಮತ್ತೆ ಕರೆ ಮಾಡಿದ ವ್ಯಕ್ತಿ, “ಸಮಯ ಮುಗಿದರೂ ಹಣ ಯಾಕೆ ಜಮೆಯಾಗಿಲ್ಲ?” ಎಂದು ಪ್ರಶ್ನಿಸಿ ಒತ್ತಡ ಹೇರಿದ್ದಾನೆ. ಆಗ ಕಂದಾಯ ನಿರೀಕ್ಷಕರು, “ಈಗ ನನ್ನ ಬಳಿ ₹5 ರಿಂದ ₹6 ಸಾವಿರ ಮಾತ್ರ ಇದೆ” ಎಂದು ತಿಳಿಸಿದಾಗ, “ಸದ್ಯ ಅಷ್ಟೇ ಕಳುಹಿಸಿ” ಎಂದು ಹೇಳಿ ಮತ್ತೊಮ್ಮೆ ಕರೆ ಸ್ಥಗಿತಗೊಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ದೂರು

ಕರೆ ಹಾಗೂ ಹಣದ ಬೇಡಿಕೆಯಿಂದ ಅನುಮಾನಗೊಂಡ ಕಂದಾಯ ನಿರೀಕ್ಷಕರು ಕೂಡಲೇ ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದಾರೆ. ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ (ಎಸ್‌ಪಿ) ಗಮನಕ್ಕೂ ವಿಷಯವನ್ನು ತಂದಿದ್ದು, ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ

ಇತ್ತೀಚಿನ ದಿನಗಳಲ್ಲಿ ಪೊಲೀಸ್, ಸಿಬಿಐ, ಇಡೀ, ಲೋಕಾಯುಕ್ತ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡಲು ವಂಚಕರು ಪ್ರಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಘಟನೆಯೂ ಅಂತಹದೇ ವಂಚನೆ ಯತ್ನವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಎಚ್ಚರಿಕೆಯಿಂದಿರಲು ಸೂಚನೆ

ಯಾವುದೇ ತನಿಖಾ ಸಂಸ್ಥೆ ಅಥವಾ ಸರ್ಕಾರಿ ಅಧಿಕಾರಿಗಳು ದೂರವಾಣಿ ಮೂಲಕ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ಆತಂಕಕ್ಕೊಳಗಾಗದೆ ತಕ್ಷಣ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಅಥವಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಕರೆ ಮಾಡಿದ ವ್ಯಕ್ತಿಯ ಗುರುತು ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಸರ್ಕಾರಿ ಅಧಿಕಾರಿಗಳ ವಲಯದಲ್ಲಿ ಆತಂಕ ಮೂಡಿಸಿದ್ದು, ವಂಚಕರ ಹೊಸ ತಂತ್ರದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb