ಮುಂಡರಗಿ, ಜು. 3: ಮಗಳ ಶುಭ ಸಮಾರಂಭದ ಸಿದ್ಧತೆಯಲ್ಲಿ ನಿರತರಾಗಿದ್ದ ತಂದೆಯೊಬ್ಬರು ಕಿರಾಣಿ ಸಾಮಗ್ರಿ ಖರೀದಿಸಲು ಬಂದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೊಪ್ಪಳ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.
ಮೃತರನ್ನು ಶಿವನಂದಪ್ಪ ರಾಮಣ್ಣ ಉಳ್ಳಾಗಡ್ಡಿ (36) ಎಂದು ಗುರುತಿಸಲಾಗಿದೆ.
ಶಿವನಂದಪ್ಪ ಅವರು ಮುಂಡರಗಿ ಪಟ್ಟಣದ ಕೊಪ್ಪಳ ವೃತ್ತದಲ್ಲಿರುವ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ನಿಗದಿಯಾಗಿದ್ದ ಮಗಳ ಶುಭ ಸಮಾರಂಭ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಪಡೆದು, ಸಮಾರಂಭಕ್ಕೆ ಅಗತ್ಯವಿದ್ದ ಕಿರಾಣಿ ಸಾಮಗ್ರಿಗಳನ್ನು ಖರೀದಿಸಲು ಆಗಮಿಸಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದಾಗ ಕೊಪ್ಪಳ ರಸ್ತೆ ಮಾರ್ಗದಿಂದ ಅತಿವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವನಂದಪ್ಪನನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ತಲೆಗೆ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.
ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದ ಶಿವನಂದಪ್ಪ ಅವರ ಅಕಾಲಿಕ ನಿಧನದಿಂದ ಕುಟುಂಬದಲ್ಲಿ ಆಕ್ರಂದನ ಮಡುಗಟ್ಟಿದೆ. ಅವರಿಗೆ ವಯೋವೃದ್ಧ ತಂದೆಯ ಜೋಪಾನ, ನಾಲ್ವರು ಮಕ್ಕಳು, ಇಬ್ಬರು ಸಹೋದರಿಯರು ಇದ್ದು, ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ತಿಳಿದುಬಂದಿದೆ. ಮಗಳ ಶುಭ ಸಮಾರಂಭದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ದುರಂತ ಬರಸಿಡಿಲಿನಂತೆ ಎರಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೈಕ್ ಅತಿವೇಗದಲ್ಲಿ ಸಂಚರಿಸಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.ಬೈಕ್ ಡಿಕ್ಕಿ ಹೊಡೆದ ಪರಿಣಾಮ, ರಸ್ತೆ ದಾಟುತ್ತಿದ್ದ ಶಿವನಂದಪ್ಪ, ರಸ್ತೆಯಿಂದ ಮೇಲಕ್ಕೆ ಪುಟಿದು, ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ. ಆದರೆ ಅಪಘಾತದ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಕೊಪ್ಪಳ ವೃತ್ತದಲ್ಲಿ ಸಂಚಾರ ಶಿಸ್ತು ಅಗತ್ಯ
ಮುಂಡರಗಿ ಪಟ್ಟಣದ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಕೊಪ್ಪಳ ವೃತ್ತದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಹಾಗೂ ನೂರಾರು ಪಾದಚಾರಿಗಳು ಸಂಚರಿಸುತ್ತಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಇದೇ ರಸ್ತೆಯನ್ನು ಬಳಸುವುದರಿಂದ ಈ ಪ್ರದೇಶ ಅಪಘಾತದ ದೃಷ್ಟಿಯಿಂದ ಸೂಕ್ಷ್ಮ ವಲಯವಾಗಿದೆ.
ಸ್ಥಳೀಯರ ಪ್ರಕಾರ, ಇಲ್ಲಿ ವಾಹನಗಳ ಅತಿವೇಗಕ್ಕೆ ಕಡಿವಾಣ ಹಾಕುವ ಕ್ರಮಗಳು ಸಮರ್ಪಕವಾಗಿಲ್ಲ. ವೇಗ ನಿಯಂತ್ರಕಗಳು (ಸ್ಪೀಡ್ ಬ್ರೇಕರ್), ಸ್ಪಷ್ಟವಾದ ಜೀಬ್ರಾ ಕ್ರಾಸಿಂಗ್, ಎಚ್ಚರಿಕೆ ಫಲಕಗಳು ಹಾಗೂ ಗರಿಷ್ಠ ಸಂಚಾರದ ವೇಳೆಯಲ್ಲಿ ಸಂಚಾರ ಪೊಲೀಸರ ನಿಯೋಜನೆ ಅಗತ್ಯವಾಗಿದೆ. ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ವಾಹನ ಸವಾರರು ನಿಗದಿತ ವೇಗ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸ್ ಇಲಾಖೆ ನಿರಂತರ ಜಾಗೃತಿ ಮತ್ತು ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಂದು ಕ್ಷಣದ ಅಜಾಗರೂಕತೆ ಮತ್ತು ಅತಿವೇಗದ ಚಾಲನೆ ಒಂದು ಕುಟುಂಬದ ಬದುಕನ್ನೇ ದುಃಖದ ಸಾಗರಕ್ಕೆ ತಳ್ಳಬಲ್ಲದು ಎಂಬುದಕ್ಕೆ ಈ ಘಟನೆ ಮತ್ತೊಂದು ಕಹಿ ಉದಾಹರಣೆಯಾಗಿದೆ. ರಸ್ತೆ ಸುರಕ್ಷತೆ ಎಂಬುದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ; ವಾಹನ ಸವಾರರು, ಪಾದಚಾರಿಗಳು ಹಾಗೂ ಸಾರ್ವಜನಿಕರೆಲ್ಲರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಇಂತಹ ಅಮೂಲ್ಯ ಜೀವಹಾನಿಗಳನ್ನು ತಡೆಯಲು ಸಾಧ್ಯ.
