Home » News » ಗದಗನಲ್ಲಿ ಬಡ್ಡಿ ದಂಧೆಕೋರರ‌ ಅಟ್ಟಹಾಸ..!ಕಿರುಕುಳಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆ..?

ಗದಗನಲ್ಲಿ ಬಡ್ಡಿ ದಂಧೆಕೋರರ‌ ಅಟ್ಟಹಾಸ..!ಕಿರುಕುಳಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆ..?

by CityXPress
0 comments

ಗದಗ, ಜು. 10: ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಓರ್ವ ವ್ಯಕ್ತಿ ಬಲಿಯಾದ ಆರೋಪ ಕೇಳಿಬಂದಿದೆ. ಗದಗ ನಗರದ ಕರಿಯಮ್ಮನಕಲ್ಲು ಬಡಾವಣೆಯ ನಿವಾಸಿ ಸಂಪತ್ತ ದಂಡಗಿ (38) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಬಡ್ಡಿ ದಂಧೆಕೋರರ ನಿರಂತರ ಕಿರುಕುಳ ಹಾಗೂ ಬೆದರಿಕೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವರದಿ: ಮಹಲಿಂಗೇಶ್ ಹಿರೇಮಠ. ಗದಗ

ಕುಟುಂಬದವರ ಹೇಳಿಕೆಯ ಪ್ರಕಾರ, ಸಂಪತ್ತ ಅವರು ಕೆಲವರಿಂದ ಹಣ ಪಡೆದಿದ್ದರು ಎನ್ನಲಾಗಿದ್ದು, ಅದರ ಬಡ್ಡಿ ಹಾಗೂ ಹಣವನ್ನು ವಸೂಲಿ ಮಾಡುವ ನೆಪದಲ್ಲಿ ಕೆಲವು ಬಡ್ಡಿ ದಂಧೆಕೋರರು ನಿರಂತರವಾಗಿ ಮೊಬೈಲ್ ಕರೆಗಳ ಮೂಲಕ ಕಿರುಕುಳ ನೀಡುತ್ತಿದ್ದರು. ಹಣ ನೀಡುವಂತೆ ಒತ್ತಡ ಹೇರುವುದರ ಜೊತೆಗೆ ಬೆದರಿಕೆಯನ್ನೂ ಹಾಕಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಅಷ್ಟೇ ಅಲ್ಲದೆ, ಸಂಪತ್ತ ಅವರ ಪತ್ನಿ ಸ್ನೇಹಾ ಅವರ ಮೊಬೈಲ್‌ಗೂ ಕರೆ ಮಾಡಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ವಿಶೇಷವಾಗಿ ಧರ್ಮಗೌಡ ಎಂಬ ವ್ಯಕ್ತಿ ಪ್ರತಿನಿತ್ಯ ಕರೆ ಮಾಡಿ ಹಣಕ್ಕಾಗಿ ಒತ್ತಡ ಹೇರುತ್ತಿದ್ದ ಎಂದು ಸ್ನೇಹಾ ಆರೋಪಿಸಿದ್ದಾರೆ.

banner

ಈ ನಿರಂತರ ಕಿರುಕುಳ ಮತ್ತು ಬೆದರಿಕೆಯಿಂದ ಮಾನಸಿಕವಾಗಿ ನೊಂದಿದ್ದ ಸಂಪತ್ತ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಘಟನೆ ಕುಟುಂಬದಲ್ಲಿ ಆಕ್ರಂದನ ಮೂಡಿಸಿದೆ. ಪತಿ ಸಾವಿನಿಂದ ಪತ್ನಿ ಸ್ನೇಹಾ, ತಾಯಿ ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

“ಬಡ್ಡಿ ದಂಧೆಕೋರರ ಕಿರುಕುಳ ಮತ್ತು ಬೆದರಿಕೆಗೆ ಹೆದರಿ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮಗೂ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಪತ್ನಿ ಸ್ನೇಹಾ ಆಗ್ರಹಿಸಿದ್ದಾರೆ.

ಇನ್ನು ಆತ್ಮಹತ್ಯೆಗೂ ಮುನ್ನ ಸಂಪತ್ ತನ್ನ ಹೇಳಿಕೆಯನ್ನ ವಿಡಿಯೋ ಮಾಡಿಟ್ಟು ಸಾವನ್ನಪ್ಪಿದ್ದಾನೆ ಎನ್ನುವ ಮಾತುಗಳು‌ ಕೇಳಿಬರುತ್ತಿವೆ. ಸದ್ಯ ಈ ಘಟನೆ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣದ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು, ಕುಟುಂಬಸ್ಥರು ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb