Home » News » ಎಸ್‌ಐಆರ್ ಕಾರ್ಯದಲ್ಲಿ ತೊಡಗಿದ್ದ ಅಂಗನವಾಡಿ ಶಿಕ್ಷಕಿ ಸಾವು..!

ಎಸ್‌ಐಆರ್ ಕಾರ್ಯದಲ್ಲಿ ತೊಡಗಿದ್ದ ಅಂಗನವಾಡಿ ಶಿಕ್ಷಕಿ ಸಾವು..!

by CityXPress
0 comments

ಮುಂಡರಗಿ, ಜು. 18: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ಬಿಎಲ್‌ಒ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ವರದಿ: ಮಹಲಿಂಗೇಶ ಹಿರೇಮಠ. ಗದಗ

ಮೃತರನ್ನು ರತ್ನಮ್ಮ ಬಳಿಗಾರ (43) ಎಂದು ಗುರುತಿಸಲಾಗಿದೆ. ಅವರು ಬಾಗೇವಾಡಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿದ್ದು, ಎಸ್‌ಐಆರ್ ಕಾರ್ಯಕ್ಕಾಗಿ ಬೂತ್ ಲೆವೆಲ್ ಅಧಿಕಾರಿ (ಬಿಎಲ್‌ಒ) ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು.

ಶನಿವಾರ ಬಾಗೇವಾಡಿ ಗ್ರಾಮದಲ್ಲಿ ಎಸ್‌ಐಆರ್ ಕಾರ್ಯದ ಪ್ರಗತಿ ಪರಿಶೀಲನೆಗಾಗಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಪ್ರಮುಖರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಶಾಸಕರು ಸ್ಥಳೀಯ ಆಪ್ತರೊಬ್ಬರ ಮನೆಯಲ್ಲಿ ಸಭೆ ನಡೆಸಿ, ಎಸ್‌ಐಆರ್ ಕಾರ್ಯದ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ರತ್ನಮ್ಮ ಬಳಿಗಾರ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಬಗ್ಗೆ ಶಾಸಕರಿಂದ ಮೆಚ್ಚುಗೆಗೂ ಪಾತ್ರರಾಗಿದ್ದರು.

banner

ಪರಿಶೀಲನೆ ಮುಗಿದ ಬಳಿಕ ಶಾಸಕರು, ಸ್ಥಳೀಯ ಮುಖಂಡರು ಹಾಗೂ ಸಿಬ್ಬಂದಿ ಎಲ್ಲರೂ ಸೇರಿ ಚಹಾ ಸೇವಿಸುತ್ತಿದ್ದರು. ಮನೆಯ ಹೊರಭಾಗದಲ್ಲಿ ಕುಳಿತು ರತ್ನಮ್ಮ ಬಳಿಗಾರ ಅವರು ಸಹ ಚಹಾ ಕುಡಿಯುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ಘಟನೆ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳದಲ್ಲಿದ್ದ ಶಾಸಕ ಡಾ. ಚಂದ್ರು ಲಮಾಣಿ ತಕ್ಷಣವೇ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಯಾವುದೇ ವಿಳಂಬ ಮಾಡದೇ ಸಮೀಪದ ಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಯಿತು. ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆಯನ್ನೂ ಮಾಡಿಸಿ, ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್ ಮೂಲಕ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು.

ಆದರೆ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆಯೇ ರತ್ನಮ್ಮ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರತ್ನಮ್ಮ ಬಳಿಗಾರ ಅವರ ಅಕಾಲಿಕ ನಿಧನದಿಂದ ಬಾಗೇವಾಡಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಶಿಕ್ಷಕಿಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಸಾರ್ವಜನಿಕರು ಹಾಗೂ ಸರ್ಕಾರಿ ಸಿಬ್ಬಂದಿಯಲ್ಲಿ ತೀವ್ರ ನೋವು ಮೂಡಿಸಿದೆ.

ಘಟನೆಯ ನಂತರ ಶಾಸಕ ಡಾ. ಚಂದ್ರು ಲಮಾಣಿ ಅವರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಅಗತ್ಯ ನೆರವು ನೀಡುವ ಭರವಸೆ ವ್ಯಕ್ತಪಡಿಸಿದರು. ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕೂಡ ರತ್ನಮ್ಮ ಅವರ ಕರ್ತವ್ಯನಿಷ್ಠೆ, ಸರಳ ವ್ಯಕ್ತಿತ್ವವನ್ನು ಸ್ಮರಿಸಿ ಸಂತಾಪ ಸೂಚಿಸಿದ್ದಾರೆ.

“ರತ್ನಮ್ಮ ಬಳಿಗಾರ ಅವರ ಸಾವಿಗೆ ನಿಖರ ಕಾರಣ ವೈದ್ಯಕೀಯ ವರದಿ ಬಳಿಕವೇ ಸ್ಪಷ್ಟವಾಗಲಿದೆ. ಎಸ್‌ಐಆರ್ ಕಾರ್ಯದ ಒತ್ತಡದಿಂದ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಉಂಟಾಗಿತ್ತೇ ಎಂಬ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವೈದ್ಯಕೀಯ ವರದಿ ನಂತರವೇ ಸ್ಪಷ್ಟತೆ ಸಿಗಲಿದೆ. ಸದ್ಯ ಕುಟುಂಬಸ್ಥರು ಹಾಗೂ ಸಂಬಂಧಿಕರು ತೀವ್ರ ಶೋಕದಲ್ಲಿ ಮುಳುಗಿದ್ದು, ಈ ಅಕಾಲಿಕ ಸಾವಿನಿಂದ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.”

ಶ್ಲಾಘನೆಯ ಕೆಲವೇ ಕ್ಷಣಗಳಲ್ಲಿ ಜೀವ ಕಳೆದುಕೊಂಡ ಶಿಕ್ಷಕಿ

ಎಸ್‌ಐಆರ್ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದ ರತ್ನಮ್ಮ ಬಳಿಗಾರ ಅವರ ಕಾರ್ಯವನ್ನು ಶಾಸಕ ಡಾ. ಚಂದ್ರು ಲಮಾಣಿ ಪರಿಶೀಲನೆ ವೇಳೆ ಶ್ಲಾಘಿಸಿದ್ದರು. ಆದರೆ ಕೆಲವೇ ನಿಮಿಷಗಳ ಬಳಿಕ ಚಹಾ ಕುಡಿಯುತ್ತಿದ್ದ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದರೂ ಮಾರ್ಗಮಧ್ಯೆ ಹೃದಯಾಘಾತದಿಂದ ಮೃತಪಟ್ಟಿರುವುದು ಗ್ರಾಮಸ್ಥರು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳನ್ನು ತೀವ್ರ ದುಃಖಕ್ಕೆ ದೂಡಿದೆ. ಈ ಘಟನೆ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯ ಮೇಲಿನ ಒತ್ತಡ ಮತ್ತು ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb