Home » News » ಚಿಕ್ಕಟ್ಟಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ: “ಪಿಯುಸಿ ಜೀವನ ಕೇವಲ ಪಠ್ಯಕ್ರಮವಲ್ಲ, ನಿಮ್ಮ ವ್ಯಕ್ತಿತ್ವವನ್ನು ರೂಪಿಸುವ ಭದ್ರ ಬುನಾದಿ” – ಡಾ. ಸಾಮುದ್ರಿ

ಚಿಕ್ಕಟ್ಟಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ: “ಪಿಯುಸಿ ಜೀವನ ಕೇವಲ ಪಠ್ಯಕ್ರಮವಲ್ಲ, ನಿಮ್ಮ ವ್ಯಕ್ತಿತ್ವವನ್ನು ರೂಪಿಸುವ ಭದ್ರ ಬುನಾದಿ” – ಡಾ. ಸಾಮುದ್ರಿ

by CityXPress
0 comments

ಗದಗ, ಜು. 20: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ-2026 ಅನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸಾಮುದ್ರಿ ದಸ್ತಗಿರಿ ಸಾಹೇಬ ಅವರು ಮಾತನಾಡಿ, ಶಾಲಾ ಶಿಕ್ಷಣದ ಒಂದು ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಾಲೇಜು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪಿಯುಸಿ ಜೀವನವು ಕೇವಲ ಎರಡು ವರ್ಷದ ಪಠ್ಯಕ್ರಮವಲ್ಲ; ಅದು ವ್ಯಕ್ತಿತ್ವವನ್ನು ರೂಪಿಸುವ, ಕನಸುಗಳಿಗೆ ದಿಕ್ಕು ನೀಡುವ ಹಾಗೂ ಭವಿಷ್ಯದ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕುವ ಅಮೂಲ್ಯ ಅವಧಿಯಾಗಿದೆ. ಈ ಎರಡು ವರ್ಷಗಳಲ್ಲಿ ಕಲಿಯುವ ಪ್ರತಿಯೊಂದು ವಿಷಯ, ಬೆಳಸಿಕೊಳ್ಳುವ ಉತ್ತಮ ಅಭ್ಯಾಸ ಹಾಗೂ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ ಎಂದು ಹೇಳಿದರು.

ಕಾಲೇಜು ಕೇವಲ ಜ್ಞಾನವನ್ನು ನೀಡುವುದಲ್ಲ; ಶಿಸ್ತು, ಸಮಯಪಾಲನೆ, ನೈತಿಕ ಮೌಲ್ಯಗಳು, ನಾಯಕತ್ವದ ಗುಣಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಸಹ ಕಲಿಸುತ್ತದೆ. ಆದ್ದರಿಂದ ಪ್ರತಿಯೊಂದು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉಪನ್ಯಾಸಕರ ಮಾರ್ಗದರ್ಶನವನ್ನು ಗೌರವಿಸಿ, ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

banner

ಮುಂದುವರಿದು ಮಾತನಾಡಿದ ಅವರು, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಉಪನ್ಯಾಸಕರಷ್ಟೇ ಅಲ್ಲ, ಪಾಲಕರ ಪ್ರೋತ್ಸಾಹವೂ ಮಹತ್ತರವಾಗಿದೆ. ಅವರ ತ್ಯಾಗ, ಪ್ರೀತಿ ಹಾಗೂ ನಿರೀಕ್ಷೆಗಳನ್ನು ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಈ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಮಾರ್ಗದರ್ಶನ ಹಾಗೂ ವಿವಿಧ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಕುಟುಂಬ, ಶಿಕ್ಷಣ ಸಂಸ್ಥೆ ಹಾಗೂ ಸಮಾಜಕ್ಕೆ ಕೀರ್ತಿ ತರುವ ವಿದ್ಯಾರ್ಥಿಗಳಾಗಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರು ಮಾತನಾಡಿ, ಪ್ರಥಮ ಪಿಯುಸಿ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯವಾಗಿದೆ. ಈ ಎರಡು ವರ್ಷಗಳನ್ನು ಶಿಸ್ತು, ಪರಿಶ್ರಮ ಹಾಗೂ ಸಮಯದ ಸದ್ಬಳಕೆಯೊಂದಿಗೆ ಕಳೆಯಬೇಕು. ಉಪನ್ಯಾಸಕರ ಮಾರ್ಗದರ್ಶನವನ್ನು ಪಾಲಿಸಿ, ಪೋಷಕರ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡಬೇಕು ಎಂದರು.

ಪಠ್ಯದ ಜೊತೆಗೆ ವ್ಯಕ್ತಿತ್ವ ವಿಕಸನ, ನೈತಿಕ ಮೌಲ್ಯಗಳು, ಸಂಸ್ಕಾರ, ನಾಯಕತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಪಡೆಯಲು ಸ್ಪಷ್ಟ ಗುರಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸ ಅತ್ಯಗತ್ಯ. ಸೋಲು ಬಂದರೂ ಧೈರ್ಯ ಕಳೆದುಕೊಳ್ಳದೆ, ಪ್ರತಿಯೊಂದು ಸೋಲನ್ನೂ ಯಶಸ್ಸಿನ ಮೆಟ್ಟಿಲಾಗಿ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯು ಉತ್ತಮ ಜ್ಞಾನ, ಉತ್ತಮ ಸಂಸ್ಕಾರ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಲು ಬದ್ಧವಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯರಾದ ವಿನಯ ಎಸ್. ಚಿಕ್ಕಟ್ಟಿ ಅವರು ಮಾತನಾಡಿ, ಶಾಲಾ ಶಿಕ್ಷಣದಿಂದ ಕಾಲೇಜು ಶಿಕ್ಷಣದತ್ತ ವಿದ್ಯಾರ್ಥಿಗಳು ಇಡುತ್ತಿರುವ ಹೆಜ್ಜೆ ಅವರ ಭವಿಷ್ಯವನ್ನು ರೂಪಿಸುವ ಮಹತ್ವದ ಘಟ್ಟವಾಗಿದೆ. ಶಿಕ್ಷಣ ಎಂದರೆ ಕೇವಲ ಅಂಕಗಳನ್ನು ಗಳಿಸುವುದಲ್ಲ; ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಿದೆ. ಶಿಕ್ಷಣವು ಚಿಂತನೆ, ವಿವೇಕ, ಆತ್ಮವಿಶ್ವಾಸ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬೆಳೆಸುತ್ತದೆ ಎಂದು ಹೇಳಿದರು.

ಪುಸ್ತಕದ ಜ್ಞಾನಕ್ಕೆ ಜೊತೆಯಾಗಿ ಸಮಯಪಾಲನೆ, ಶಿಸ್ತು, ಪರಿಶ್ರಮ, ಪ್ರಾಮಾಣಿಕತೆ ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ನಿರಂತರ ಅಭ್ಯಾಸ, ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಅಗತ್ಯ. ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ನಾಯಕತ್ವದ ಗುಣಗಳು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಲು ಅನೇಕ ಅವಕಾಶಗಳಿದ್ದು, ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಉಪನ್ಯಾಸಕರಾದ ಶ್ರೀ ಶೈಲಶಿ. ಬಡಿಗೇರ ಅವರು ಮಾತನಾಡಿ, ಶಿಕ್ಷಣವಿದ್ದು ಸಂಸ್ಕಾರವಿಲ್ಲದ ವ್ಯಕ್ತಿ ಸಮಾಜಕ್ಕೆ ಅಪಾಯಕಾರಿಯಾಗಬಹುದು. ಸಂಸ್ಕಾರವಿದ್ದು ಶಿಕ್ಷಣವಿಲ್ಲದಿದ್ದರೆ ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗಬಹುದು. ಆದ್ದರಿಂದ ಶಿಕ್ಷಣ ಮತ್ತು ಸಂಸ್ಕಾರ ಎರಡೂ ಸಮಾನವಾಗಿ ಅಗತ್ಯವಾಗಿವೆ. ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಮಹತ್ವ ನೀಡದೆ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಹೊಂದಿದ ವ್ಯಕ್ತಿಯೇ ಸಮಾಜದ ನಿಜವಾದ ಸಂಪತ್ತು ಎಂದು ಹೇಳಿದರು.

ಇದಕ್ಕೂ ಮುನ್ನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೈದ್ಯ ದಂಪತಿಗಳಾದ ಡಾ. ಸಾಮುದ್ರಿ ದಸ್ತಗಿರಿ ಸಾಹೇಬ ಹಾಗೂ ಶ್ರೀಮತಿ ಡಾ. ಸುಮಯ್ಯ ಸಾಮುದ್ರಿ, ಸಾಹಿತಿಗಳಾದ ಐ. ಕೆ. ಕಮ್ಮಾರ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅತಿಥಿಗಳಾದ ಡಾ. ಸಾಮುದ್ರಿ ದಸ್ತಗಿರಿ ಸಾಹೇಬ ಹಾಗೂ ಶ್ರೀಮತಿ ಡಾ. ಸುಮಯ್ಯ ಸಾಮುದ್ರಿ ಅವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಐ. ಕೆ. ಕಮ್ಮಾರ, ಪ್ರಾಚಾರ್ಯರಾದ ವಿನಯ ಎಸ್. ಚಿಕ್ಕಟ್ಟಿ, ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಪ್ರೊ. ಬಿ.ವಿ. ಜೋಶಿ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾದ ಶ್ರೀಮತಿ ಡಾ. ಸುಮಯ್ಯ ಸಾಮುದ್ರಿ ಅವರು ಸುಮಧುರ ಹಿಂದಿ ಗೀತೆಯೊಂದನ್ನು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವಿದ್ಯಾರ್ಥಿನಿ ಇಂಪನಾ ಶಲವಡಿ ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿನಿ ಸಾನ್ವಿ ಕಲಾಲ್ ಸ್ವಾಗತಿಸಿದರು. ವೈದ್ಯ ದಂಪತಿಗಳ ಪರಿಚಯವನ್ನು ವಿದ್ಯಾರ್ಥಿನಿ ಪ್ರಿಯಾ ಮೊರಬದ್ ನೀಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ತನ್ವಿ ಗದಗ ಹಾಗೂ ಸಾನಿಕಾ ಕಾಲವಾಡಮಠ ನಿರೂಪಿಸಿದರು. ವಿದ್ಯಾರ್ಥಿನಿ ಆಶಿಯಾನ ದಾಫ್ ವಂದನಾರ್ಪಣೆ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಇಂಪನಾ ಶಲವಡಿ ಹಾರ್ಮೋನಿಯಂ ಮೂಲಕ “ಸರಿಗಮಪದನಿಸ” ರಾಗಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿನಿಯರಾದ ವೀಣಾ ಬಡಿಗೇರ ಹಾಗೂ ಐಶ್ವರ್ಯ ಬೆನಕಟ್ಟಿ ಭಕ್ತಿಗೀತೆ ಹಾಡಿದರು. ವಿದ್ಯಾರ್ಥಿನಿ ವೀಣಾ ಬಡಿಗೇರ ಭರತನಾಟ್ಯ ಪ್ರದರ್ಶಿಸಿದರು. ವಿದ್ಯಾರ್ಥಿನಿಯರಾದ ತನ್ವಿ ಗದಗ ಹಾಗೂ ಖುಷಿ ಕಟವಟೆ ರಿಮಿಕ್ಸ್ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು. ಶಾಲಾ-ಕಾಲೇಜಿನ ಬಸ್ ಚಾಲಕರಾದ ಶೇಖಪ್ಪ ಅಣ್ಣಿಗೇರಿ ಅವರು ಭಕ್ತಿಗೀತೆ ಹಾಡಿ ಸಭಿಕರನ್ನು ರಂಜಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb