ಗದಗ ೦೬: ಮಹಾತ್ಮ ಗಾಂಧೀಜಿಯವರ ತತ್ವ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಂತೆ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬ ಜನಪ್ರತಿನಿಧಿಗೂ ‘ಜನಸೇವೆಯೇ ಪರಮಧರ್ಮ’. ಅಧಿಕಾರ ಎಂಬುದು ಗರ್ವದ ಸಂಕೇತವಲ್ಲ, ಅದು ಸಮಸ್ತ ಜನಕೋಟಿ ನಮಗೆ ನೀಡಿರುವ ಜವಾಬ್ದಾರಿ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲೂ ಮಂದಹಾಸ ಮೂಡಿಸಿ, ಅವರ ಕಷ್ಟ-ಸುಖಗಳಿಗೆ ಹೆಗಲಾಗುವುದೇ ನಿಜವಾದ ಧರ್ಮ. ನುಡಿದಂತೆ ನಡೆಯುತ್ತಾ, ಜನಸಾಮಾನ್ಯರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವುದೇ ನಮ್ಮ ರಾಜಕೀಯ ಪಥದ ಏಕೈಕ ಪರಮ ಗುರಿ ಎಂದು ನಂಬಿದ ಡಾ. ಎಚ್.ಕೆ ಪಾಟೀಲರಿಗೆ ಸಚಿವ ಸ್ಥಾನದ ಕೈತಪ್ಪಿದ್ದು ಸರಿಯಾದ ಕ್ರಮ ಅಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಶ್ರೀಧರ ವಜ್ರಬಂಡಿ ಆಕ್ರೋಶ ವ್ಪಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಡಾ. ಎಚ್. ಕೆ ಪಾಟೀಲರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಈ ಭಾಗದ ಪ್ರಭಾವಿ ಮುಖಂಡರಲ್ಲಿಯೂ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಆದರೆ, ಇಂತಹ ಪಕ್ಷ ನಿಷ್ಠೆ ನಾಯಕನನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದು ಸರಿಯಲ್ಲ. ಮೊದಲ ಸಾಲಿನ ನಾಯಕರನ್ನೇ ಕಡಿಗಣಿಸಿದರೇ ಪಕ್ಷಕ್ಕೆ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕೂಡಲೇ ವರಿಷ್ಠರು ಎಚ್.ಕೆ ಪಾಟೀಲರ ಅನುಭವಕ್ಕೆ ಮಣೆ ಹಾಕಿ ಎರಡನೇ ಹಂತದ ಪಟ್ಟಿಯಲ್ಲಿ ಅವಕಾಶ ನೀಡಬೇಕು. ಇಲ್ಲದಿದ್ದರೇ ಎಚ್.ಕೆ ಪಾಟೀಲ ಪರವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಚ್.ಕೆ.ಪಾಟೀಲರು ರಾಜ್ಯದ ಸಚಿವರಾಗಿ ಹಲವಾರು ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ. ರಾಜ್ಯಾಧ್ಯಂತ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಕೀರ್ತಿ ನಮ್ಮ ನಾಯಕರಿಗೆ ಸಲ್ಲುತ್ತದೆ. ಇದೇ ಮಾದರಿಯನ್ನು ದೇಶಾಧ್ಯಂತ ನಾನಾ ರಾಜ್ಯಗಳಲ್ಲಿ ಜಾರಿಗೋಳಿಸಲಾಯಿತು. ಇಂತಹ ಮಹಾನ್ ಜ್ಞಾನ ಇರುವ ನಾಯಕರನ್ನು ಕಡೆಗಣಿಸಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಬೇಸರ ವ್ಯಕ್ತಪಡಿಸಿದರು.
ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲು ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಲಕ್ಕುಂಡಿ ಅಭಿವ್ರದ್ದಿ ಪ್ರಾಧಿಕಾರ ರಚನೆ ಮಾಡಿದ ಯಶಸ್ಸು ಎಚ್.ಕೆ ಪಾಟೀಲರಿಗೆ ಸಲ್ಲುತ್ತದೆ. ಲಕ್ಕುಂಡಿ ಬಗ್ಗೆ ವಿಶೇಷ ಮುತವರ್ಜಿ ವಹಿಸಿ ಕೇವಲ ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಐತಿಹಾಸಿಕ ಪ್ರಾಚ್ಯಾವಶೇಷ ಸಂಗ್ರಹಿಸಲು ವಿಶೇಷ ಮಾರ್ಗದರ್ಶನ ನೀಡಿದ್ದರು. ಅಷ್ಟೆ ಅಲ್ಲದೇ ಕರ್ನಾಟಕ ಸಂಭ್ರಮ-೫೦ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸಿ ರಾಜ್ಯ ಸರ್ಕಾರದ ಘನತೆಯನ್ನು ಎತ್ತಿ ಹಿಡಿದಿದ್ದರು. ಇಷ್ಟೆಲ್ಲ ಜನಪರ ಕಾಳಜಿ ಹೊಂದಿರುವ ಮುತ್ಸದ್ದಿ ರಾಜಕಾರಣಿಯನ್ನು ಹೈಕಮಾಂಡ್ ಕಡೆಗಣಿಸಿದ್ದು ಸಮಂಜಸವಲ್ಲ ಎಂದರು.
