Home » News » ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

by CityXPress
0 comments

“ಕನ್ನಡ ಭಾಷೆ ನಮ್ಮ ತಾಯಿಯ ಭಾಷೆ, ನಮ್ಮ ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮ” – ಪ್ರೊ. ಎಸ್.ವೈ. ಚಿಕ್ಕಟ್ಟಿ

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್.ವೈ. ಚಿಕ್ಕಟ್ಟಿ ಗುರುಗಳು ಮಾತನಾಡಿ, “ಇಂದು ನಮ್ಮೆಲ್ಲರಿಗೂ ಹೆಮ್ಮೆ, ಅಭಿಮಾನ ಹಾಗೂ ಸಂಭ್ರಮದ ದಿನ. ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಸ್ಮರಿಸುವ ಪವಿತ್ರ ದಿನವಾಗಿದೆ. 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣದ ಮೂಲಕ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ನಂತರ 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣಗೊಂಡಿತು. ಈ ಐತಿಹಾಸಿಕ ದಿನವನ್ನು ನಾವು ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ” ಎಂದು ಹೇಳಿದರು.

ಕರ್ನಾಟಕ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಶ್ರೀಮಂತ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳ ಸಂಗಮವಾಗಿದೆ. ಪಂಪ, ರನ್ನ, ಜನ್ನ, ಬಸವಣ್ಣ, ಅಕ್ಕಮಹಾದೇವಿ, ಕನಕದಾಸರು, ಸರ್ವಜ್ಞರು, ಕುವೆಂಪು, ಬೇಂದ್ರೆ ಹಾಗೂ ಶಿವರಾಮ ಕಾರಂತರು ಸೇರಿದಂತೆ ಅನೇಕ ಮಹನೀಯರು ಕನ್ನಡ ಭಾಷೆಯ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಸ್ಮರಿಸಿದರು.

“ಕನ್ನಡ ಭಾಷೆ ನಮ್ಮ ತಾಯಿಯ ಭಾಷೆ, ನಮ್ಮ ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮ ಹಾಗೂ ನಮ್ಮ ಅಸ್ಮಿತೆಯ ಸಂಕೇತ. ಆದ್ದರಿಂದ ಕನ್ನಡವನ್ನು ಕೇವಲ ಮಾತನಾಡುವುದಕ್ಕೆ ಸೀಮಿತಗೊಳಿಸದೆ, ಓದುವ, ಬರೆಯುವ, ಬಳಸುವ ಹಾಗೂ ಮುಂದಿನ ಪೀಳಿಗೆಗೆ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆಯ ಅಭಿಮಾನ ಬೆಳೆಸುವುದರ ಜೊತೆಗೆ ಕನ್ನಡ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಮತ್ತು ಮಹನೀಯರ ಜೀವನಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಾತೃಭಾಷೆಯ ಬಲದೊಂದಿಗೆ ಇತರ ಭಾಷೆಗಳ ಜ್ಞಾನವನ್ನೂ ಪಡೆದು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

banner

ನಮ್ಮ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕನ್ನಡಿಗರು ಎಲ್ಲೇ ಇದ್ದರೂ ಕನ್ನಡದ ಕಂಪನ್ನು ಹರಡಬೇಕು. ನಮ್ಮ ನಡೆ-ನುಡಿಗಳಲ್ಲಿ ಕನ್ನಡದ ಸಂಸ್ಕಾರ, ಚಿಂತನೆಗಳಲ್ಲಿ ಕನ್ನಡದ ಮೌಲ್ಯಗಳು ಹಾಗೂ ಕಾರ್ಯಗಳಲ್ಲಿ ನಾಡಿನ ಪ್ರಗತಿಯ ಸಂಕಲ್ಪ ಇರಬೇಕು ಎಂದು ಪ್ರೊ. ಚಿಕ್ಕಟ್ಟಿ ವಿವರಿಸಿದರು.

ಕನ್ನಡ ಉಪನ್ಯಾಸಕರಾದ ಪ್ರೊ. ಶ್ರೀಶೈಲ ಶಿ. ಬಡಿಗೇರ ಅವರು “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂಬ ಕವಿವಾಣಿಯೊಂದಿಗೆ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಮೈಸೂರು ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಹಾಗೂ ಹೈದರಾಬಾದ್ ಸಂಸ್ಥಾನ ಸೇರಿದಂತೆ ವಿವಿಧ ಆಡಳಿತ ಪ್ರದೇಶಗಳಲ್ಲಿ ಹಂಚಿಹೋಗಿದ್ದವು ಎಂದು ತಿಳಿಸಿದರು.

ಕನ್ನಡಿಗರೆಲ್ಲರೂ ಒಂದೇ ಆಡಳಿತದ ಅಡಿಯಲ್ಲಿ ಒಂದಾಗಬೇಕು ಎಂಬ ಆಶಯದಿಂದ ಅನೇಕ ಮಹನೀಯರು ಹೋರಾಟ ನಡೆಸಿದರು. ಆಲೂರು ವೆಂಕಟರಾಯರು ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಾರರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಹೀಗಾಗಿ ನವೆಂಬರ್ 1 ನಮ್ಮ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ ಎಂದು ಹೇಳಿದರು.

ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ಸಾಹಿತ್ಯ ಪರಂಪರೆಯ ಹೆಗ್ಗಳಿಕೆಯಾಗಿದೆ. ಶಾಸನಗಳಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ ಕನ್ನಡದ ಅಭಿವ್ಯಕ್ತಿ ವೈವಿಧ್ಯಮಯವಾಗಿ ಬೆಳೆದು ಬಂದಿದೆ. ಇಂದಿನ ಜಾಗತೀಕರಣದ ಯುಗದಲ್ಲಿ ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳನ್ನು ಕಲಿಯುವುದು ಅಗತ್ಯ. ಆದರೆ, ಇತರ ಭಾಷೆಗಳನ್ನು ಕಲಿಯುವ ಜೊತೆಗೆ ನಮ್ಮ ಮಾತೃಭಾಷೆಯನ್ನು ಗೌರವಿಸಬೇಕು. ಜಗತ್ತಿನ ಜ್ಞಾನವನ್ನು ಅರಿಯುವಾಗ ನಮ್ಮ ನಾಡಿನ ಬೇರುಗಳನ್ನು ಮರೆಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ. ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಬಿಪಿನ್ ಚಿಕ್ಕಟ್ಟಿ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ, ಸಿಬಿಎಸ್‌ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಶೋಭಾ ಭಟ್ ಹಾಗೂ ಶ್ರೀಮತಿ ಪುಷ್ಪಲತಾ ಬೆಲೇರಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿಯಾದ ಶ್ರೀಮತಿ ಶ್ರೀದೇವಿ ಜಿ. ಶಿಶುವಿನಹಳ್ಳಿ ಅವರು ಪ್ರಾರ್ಥನಾಗೀತೆಯನ್ನು ಹಾಡಿದರು. ಕನ್ನಡ ಉಪನ್ಯಾಸಕರಾದ ಶ್ರೀಶೈಲ ಶಿ. ಬಡಿಗೇರ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಕೋರುವುದರ ಜೊತೆಗೆ ವಂದನಾರ್ಪಣೆ ಸಲ್ಲಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb