Home » News » ಬಿಪಿನ್ ಚಿಕ್ಕಟ್ಟಿ ಬಿಸಿಎ ಪದವಿ ಕಾಲೇಜಿನಲ್ಲಿ ವೈವಿಧ್ಯಮಯ ಫನ್-ವೀಕ್: ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ

ಬಿಪಿನ್ ಚಿಕ್ಕಟ್ಟಿ ಬಿಸಿಎ ಪದವಿ ಕಾಲೇಜಿನಲ್ಲಿ ವೈವಿಧ್ಯಮಯ ಫನ್-ವೀಕ್: ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ

by CityXPress
0 comments

ಗದಗ: ನಗರದ ಪ್ರತಿಷ್ಠಿತ ಬಿಪಿನ್ ಚಿಕ್ಕಟ್ಟಿ ಬಿಸಿಎ ಪದವಿ ಕಾಲೇಜಿನಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಲಾದ ಫನ್-ವೀಕ್ ಕಾರ್ಯಕ್ರಮವು ವಿದ್ಯಾರ್ಥಿಗಳ ಉತ್ಸಾಹ, ಸೃಜನಶೀಲತೆ ಹಾಗೂ ಸಾಮಾಜಿಕ ಕಳಕಳಿಗೆ ವೇದಿಕೆಯಾಗಿದ್ದು, ಅಂತಿಮ ದಿನ ನಡೆದ ರಕ್ತದಾನ ಶಿಬಿರ ವಿಶೇಷ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗದಗ ಅಂಬಿಕಾ ರಕ್ತ ನಿಧಿ ಕೇಂದ್ರದ ಡಾ. ದತ್ತಾತ್ರೇಯ ವೈಕುಂಠೆ ಅವರು, “ರಕ್ತದಾನ ಮಹಾದಾನ ಎಂಬುದು ಕೇವಲ ಘೋಷವಾಕ್ಯವಲ್ಲ, ಅದು ಮಾನವೀಯತೆಯ ಮಹತ್ತರ ಸೇವೆ. ಒಬ್ಬ ವ್ಯಕ್ತಿ ನೀಡುವ ಒಂದು ಯುನಿಟ್ ರಕ್ತ ಮೂರು ಜನರ ಜೀವ ಉಳಿಸಬಲ್ಲದು. ರಕ್ತದಾನದ ಮಹತ್ವದ ಕುರಿತು ಪಠ್ಯಪುಸ್ತಕಗಳಲ್ಲಿಯೂ ಪಾಠ ಬರುವಂತಾಗಬೇಕು. ಆಗ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಜಾಗೃತಿ ಮೂಡಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮನೋಭಾವ ಬೆಳೆಸಬಹುದು” ಎಂದು ಹೇಳಿದರು.

ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಗರ್ಭಿಣಿಯರ ತುರ್ತು ಚಿಕಿತ್ಸೆಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ಜೀವದಾತರಾಗುತ್ತಾರೆ ಎಂದು ತಿಳಿಸಿದ ಅವರು, ರಕ್ತದಾನದಿಂದ ದೇಹ ದುರ್ಬಲವಾಗುತ್ತದೆ ಎಂಬುದು ತಪ್ಪು ಕಲ್ಪನೆ. ಆರೋಗ್ಯವಂತ ವ್ಯಕ್ತಿ ವೈದ್ಯರ ಸಲಹೆಯಂತೆ ರಕ್ತದಾನ ಮಾಡಿದರೆ ಯಾವುದೇ ಹಾನಿಯಾಗುವುದಿಲ್ಲ. ಕೆಲವು ದಿನಗಳಲ್ಲಿ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಜೊತೆಗೆ ಉಚಿತ ಆರೋಗ್ಯ ತಪಾಸಣೆ ಸಹ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಾಠದ ಜೊತೆಗೆ ಮನರಂಜನೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸೃಜನಾತ್ಮಕ ಕಾರ್ಯಕ್ರಮಗಳು ಅತ್ಯಂತ ಅಗತ್ಯ. ಇವು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹೊಸ ಚೈತನ್ಯ ನೀಡುತ್ತವೆ. ಫನ್-ವೀಕ್ ಎಂದರೆ ಕೇವಲ ಸಂಭ್ರಮವಲ್ಲ, ಅದು ವಿದ್ಯಾರ್ಥಿಗಳ ಪ್ರತಿಭೆ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಹೊರತರುವ ವೇದಿಕೆ ಎಂದು ಹೇಳಿದರು.

banner

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಸಂವಹನ ಕೌಶಲ್ಯ ಹಾಗೂ ಸೃಜನಶೀಲತೆ ಅಗತ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಸಮಾಜಮುಖಿ ಸೇವೆಗಳಲ್ಲೂ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ರಕ್ತದಾನದಂತಹ ಪುಣ್ಯ ಕಾರ್ಯದಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿನಯ್ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿನಯ್ ಎಸ್. ಚಿಕ್ಕಟ್ಟಿ ಮಾತನಾಡಿ, ಫನ್-ವೀಕ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಒಗ್ಗಟ್ಟು ಹಾಗೂ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿ ಇರಬೇಕು ಎಂಬುದು ಕಾಲೇಜಿನ ಆಶಯವಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಉಪನ್ಯಾಸಕರು, ಸಂಯೋಜಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪ್ರೊ. ಬಿ.ವಿ. ಜೋಶಿ ಅವರು ಮಾತನಾಡಿ, ಫನ್-ವೀಕ್‌ನಲ್ಲಿ ವಿವಿಧ ಸಾಂಸ್ಕೃತಿಕ ವೇಷಭೂಷಣಗಳ ಜೊತೆಗೆ ನಮ್ಮ ಭಾಷೆ ಹಾಗೂ ಸಂಸ್ಕೃತಿ ಕೂಡ ಪ್ರತಿಬಿಂಬಿಸಬೇಕು. ಸಂಸ್ಕಾರ ಮತ್ತು ಗೌರವದ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಎರಡನೇ ದಿನ ನಡೆದ ಅಡುಗೆ ಸ್ಪರ್ಧೆಯ ನಿರ್ಣಾಯಕರಾದ ಪ್ರೊ. ದೀಪಾ ಬಿಪಿನ್ ಚಿಕ್ಕಟ್ಟಿ ಅವರು, ಜಂಕ್ ಫುಡ್ ಅನ್ನು ಅಭ್ಯಾಸವನ್ನಾಗಿಸದೇ ಮಿತವಾಗಿ ಸೇವಿಸಬೇಕು. ಆರೋಗ್ಯಕರ ಆಹಾರ ಪದ್ಧತಿ ಜೀವನದಲ್ಲಿ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಸಂಘಟಕರಾದ ಪ್ರೊ. ಶ್ರೀಶೈಲ ಶಿ. ಬಡಿಗೇರ ಅವರು ನಾಲ್ಕು ದಿನಗಳ ಕಾರ್ಯಕ್ರಮಗಳ ವಿವರ ನೀಡಿದರು. ಮೊದಲ ದಿನ ಸಾಂಪ್ರದಾಯಿಕ ಉಡುಗೆ ಪ್ರದರ್ಶನ, ರ್ಯಾಂಪ್ ವಾಕ್, ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಗಳು ನಡೆದವು. ಎರಡನೇ ದಿನ ಅವಳಿ-ಜವಳಿ ವೇಷಭೂಷಣ ಹಾಗೂ ಅಡುಗೆ ಸ್ಪರ್ಧೆ, ಮೂರನೇ ದಿನ ಕ್ರಿಕೆಟ್ ಟೂರ್ನಮೆಂಟ್, ಅಂತಿಮ ದಿನ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಗೆ ಪ್ರದರ್ಶನ ಮತ್ತು ರಕ್ತದಾನ ಶಿಬಿರ ನಡೆಯಿತು ಎಂದು ತಿಳಿಸಿದರು.

ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರೊ. ದೀಪಾ ಬಿಪಿನ್ ಚಿಕ್ಕಟ್ಟಿ, ಕಲ್ಪನಾ ಶೆಟ್ಟಿ, ಅಫ್ರೋಜಾ ಎಂ. ಕಲಾದಗಿ, ಸುಧಾ ಎಸ್. ಪರಸಪ್ಪನವರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದ ಸಂಚಾಲಕರಾಗಿ ಪ್ರೊ. ಶ್ರೀಶೈಲ ಶಿ. ಬಡಿಗೇರ, ಕುಮಾರ್ ಶಿವಯೋಗಿ ಪಾಟೀಲ್, ಕುಮಾರಿ ಸಂಜನಾ ಹಡಪದ ಹಾಗೂ ಸಂಯೋಜಕರಾಗಿ ಪ್ರೊ. ಬಿ.ವಿ. ಜೋಶಿ, ಪ್ರೊ. ಶಿವಲೀಲಾ ಪಾಟೀಲ್, ಪುಟ್ಟರಾಜ ಕುರ್ತ್ಕೋಟಿ, ಅನಿಷಾ ಎಂ. ಗೊರವನಕೊಳ್ಳ ಸೇರಿದಂತೆ ವಿದ್ಯಾರ್ಥಿ ಪ್ರತಿನಿಧಿಗಳು ಕಾರ್ಯನಿರ್ವಹಿಸಿದರು.

ನಾಲ್ಕು ದಿನಗಳ ಕಾರ್ಯಕ್ರಮಗಳಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb