Home » News » ವೇದಿಕೆ ಮೇಲೆ ಆಯತಪ್ಪಿ ಬಿದ್ದ ಹೆಚ್.ಕೆ. ಪಾಟೀಲ..! ಹಂಚಿನಾಳರು ಟೇಬಲ್ ಸರಿಸಿದ್ದಕ್ಕೆ ಎಡವಿದೆ..! ಬೀಳುವಿಕೆಯಲ್ಲೂ ರಾಜಕೀಯದ ನಂಟು ಕಲ್ಪಿಸಿ ಹಾಸ್ಯ ಚಟಾಕಿ!

ವೇದಿಕೆ ಮೇಲೆ ಆಯತಪ್ಪಿ ಬಿದ್ದ ಹೆಚ್.ಕೆ. ಪಾಟೀಲ..! ಹಂಚಿನಾಳರು ಟೇಬಲ್ ಸರಿಸಿದ್ದಕ್ಕೆ ಎಡವಿದೆ..! ಬೀಳುವಿಕೆಯಲ್ಲೂ ರಾಜಕೀಯದ ನಂಟು ಕಲ್ಪಿಸಿ ಹಾಸ್ಯ ಚಟಾಕಿ!

by CityXPress
0 comments

ಗದಗ: ರಾಜಕೀಯ ವೇದಿಕೆಗಳಲ್ಲಿ ಮಾತಿನ ಚಾತುರ್ಯ, ಸಮಯಪ್ರಜ್ಞೆ ಹಾಗೂ ಹಾಸ್ಯಮಿಶ್ರಿತ ಪ್ರತಿಕ್ರಿಯೆಗಳ ಮೂಲಕ ಗಮನ ಸೆಳೆಯುವ ಹಿರಿಯ ಮಾಜಿ ಸಚಿವ ಹೆಚ್.ಕೆ. ಪಾಟೀಲರು, ಈ ಬಾರಿ ವೇದಿಕೆಯ ಮೇಲೆಯೇ ಆಯತಪ್ಪಿ ಬಿದ್ದ ಪ್ರಸಂಗವೊಂದರಿಂದ ಸುದ್ದಿಯಾಗಿದ್ದಾರೆ. ಆದರೆ, ಅನಿರೀಕ್ಷಿತವಾಗಿ ಸಂಭವಿಸಿದ ಈ ಘಟನೆಯನ್ನು ಕೂಡ ರಾಜಕೀಯದ ನಂಟು ಕಲ್ಪಿಸಿ, ತಮ್ಮದೇ ಶೈಲಿಯಲ್ಲಿ ಹಾಸ್ಯಮಯವಾಗಿ ಪ್ರತಿಕ್ರಿಯಿಸುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ವರದಿ: ಮಹಲಿಂಗೇಶ ಹಿರೇಮಠ. ಗದಗ

ನಿನ್ನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಪುರಸಭೆ ಮೈದಾನದಲ್ಲಿ ಮುಂಡರಗಿ ತಾಲೂಕು ನಾಗರಿಕರ ವೇದಿಕೆ ವತಿಯಿಂದ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಹಾಗೂ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಆಯೋಜಿಸಿದ್ದ ಅದ್ಧೂರಿ ಸನ್ಮಾನ ಸಮಾರಂಭದಲ್ಲಿ ಈ ಸ್ವಾರಸ್ಯಕರ ಘಟನೆ ನಡೆಯಿತು.

ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಹಾಗೂ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಸಚಿವ ಹೆಚ್.ಕೆ. ಪಾಟೀಲರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

banner

ಕಾರ್ಯಕ್ರಮದ ವೇಳೆ ಭಾಷಣ ಮಾಡಲು ತಮ್ಮ ಆಸನದಿಂದ ಎದ್ದು ಡಯಾಸ್ ಕಡೆಗೆ ತೆರಳುತ್ತಿದ್ದ ಹೆಚ್.ಕೆ. ಪಾಟೀಲರು, ಕಾಲಿನ ಬಳಿ ಇದ್ದ ಟೇಬಲ್‌ಗೆ ತಾಗಿ ಆಯತಪ್ಪಿ ವೇದಿಕೆಯ ಮೇಲೆಯೇ ಬಿದ್ದರು. ತಕ್ಷಣವೇ ಪಕ್ಕದಲ್ಲಿದ್ದ ಮುಖಂಡರು ಧಾವಿಸಿ, ಕೈಹಿಡಿದು ಅವರನ್ನು ಮೇಲಕ್ಕೆ ಎಬ್ಬಿಸಿದರು. ಯಾವುದೇ ಆತಂಕಕ್ಕೆ ಒಳಗಾಗದೆ ಸಹಜವಾಗಿಯೇ ಎದ್ದು ನಿಂತ ಹೆಚ್.ಕೆ. ಪಾಟೀಲರು ಡಯಾಸ್ ಬಳಿ ತೆರಳಿ ತಮ್ಮ ಭಾಷಣವನ್ನು ಮುಂದುವರಿಸಿದರು.

ಭಾಷಣ ಮುಗಿಸಿ ಮತ್ತೆ ತಮ್ಮ ಆಸನದತ್ತ ಮರಳುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮೀಜಿಗಳು, ತಾವು ಬಿದ್ದಿರುವುದರಿಂದ ಆತಂಕಗೊಂಡಿರುವ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ತಮಗೇನೂ ಆಗಿಲ್ಲ ಎಂಬುದನ್ನು ತಿಳಿಸುವಂತೆ ಸೂಚಿಸಿದರು.

ಇದಕ್ಕೆ ತಮ್ಮ ಎಂದಿನ ಹಾಸ್ಯಮಯ ಧಾಟಿಯಲ್ಲಿ ಪ್ರತಿಕ್ರಿಯಿಸಿದ ಹೆಚ್.ಕೆ. ಪಾಟೀಲರು, “ನನಗೇನೂ ಆಗಿಲ್ಲ ಎಂದು ಹೇಳಬೇಕೆಂದರೆ, ಬಿದ್ದಿದ್ದಕ್ಕೆ ದೈಹಿಕವಾಗಿ ಏನೂ ಆಗಿಲ್ಲ ಎಂದೋ ಅಥವಾ ರಾಜಕೀಯವಾಗಿ ನನಗೇನೂ ಆಗಿಲ್ಲ ಎಂದೋ?” ಎಂದು ಪ್ರಶ್ನಿಸುವ ಮೂಲಕ ಸಭಿಕರಲ್ಲಿ ನಗೆ ಮೂಡಿಸಿದರು. ಅಲ್ಲದೆ, “ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಇರುವವರೆಗೂ ನನಗೇನೂ ಆಗುವುದಿಲ್ಲ” ಎಂದು ಹೇಳಿ, ಪ್ರಸಂಗಕ್ಕೆ ರಾಜಕೀಯದ ಸ್ಪರ್ಶ ನೀಡಿದರು.

ಇಷ್ಟಕ್ಕೇ ಸುಮ್ಮನಾಗದ ಅವರು, ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡ ಕೆ.ವಿ. ಹಂಚಿನಾಳ ಅವರ ಹೆಸರನ್ನೇ ಪ್ರಸ್ತಾಪಿಸಿ, “ಹಂಚಿನಾಳ ಅವರು ಟೇಬಲ್ ಸರಿಸಿದರು. ಅದಕ್ಕೆ ನಾನು ಎಡವಿದೆ” ಎಂದು ತಮಾಷೆಯಾಗಿ ಹೇಳುವ ಮೂಲಕ ತಮ್ಮ ಬೀಳುವಿಕೆಗೂ ರಾಜಕೀಯದ ನಂಟು ಕಲ್ಪಿಸಿದರು. ಅವರ ಈ ಮಾತಿಗೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಭಿಕರು ನಗೆಬೀರಿದರು.

ಬೀಳುವಿಕೆಯಲ್ಲೂ ರಾಜಕೀಯದ ವ್ಯಂಗ್ಯ!

ಸಾಮಾನ್ಯವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂತಹ ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗುವುದು ಸಹಜ. ಆದರೆ, ಹೆಚ್.ಕೆ. ಪಾಟೀಲರು ಆ ಪ್ರಸಂಗವನ್ನು ತಮ್ಮ ಮಾತಿನ ಚಾತುರ್ಯದಿಂದಲೇ ಹಾಸ್ಯದ ಸನ್ನಿವೇಶವನ್ನಾಗಿ ಪರಿವರ್ತಿಸಿದರು. ವಿಶೇಷವೆಂದರೆ, ದೈಹಿಕವಾಗಿ ಆಯತಪ್ಪಿ ಬಿದ್ದ ಘಟನೆಯನ್ನು ರಾಜಕೀಯವಾಗಿ ಏನೂ ಆಗಿಲ್ಲ ಎಂಬ ಅರ್ಥ ಬರುವಂತೆ ತಮಾಷೆಯಾಗಿ ಬಳಸಿಕೊಂಡಿದ್ದು ಸಭಿಕರ ಗಮನ ಸೆಳೆಯಿತು.

ರಾಜಕೀಯದಲ್ಲಿ ಪರಸ್ಪರ ಟೀಕೆ, ಆರೋಪ-ಪ್ರತ್ಯಾರೋಪಗಳು ಸಾಮಾನ್ಯವಾಗಿರುವ ಸಂದರ್ಭದಲ್ಲಿ, ಆಡಳಿತಾರೂಢ ಕಾಂಗ್ರೆಸ್‌ನ ಸಚಿವರೊಬ್ಬರು ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡರ ಹೆಸರನ್ನೇ ಪ್ರಸ್ತಾಪಿಸಿ ತಮಾಷೆ ಮಾಡಿದ್ದು ಕೂಡ ಈ ಪ್ರಸಂಗದ ಸ್ವಾರಸ್ಯವನ್ನು ಹೆಚ್ಚಿಸಿತು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಸಾರ್ವಜನಿಕ ವೇದಿಕೆಯಲ್ಲಿ ಹಾಸ್ಯ ಹಾಗೂ ಲವಲವಿಕೆಯ ಸಂಭಾಷಣೆಗೆ ಅವಕಾಶವಿದೆ ಎಂಬುದಕ್ಕೆ ಈ ಕ್ಷಣ ಸಾಕ್ಷಿಯಾಯಿತು.

ಸದ್ಯ ಹೆಚ್.ಕೆ. ಪಾಟೀಲರು ವೇದಿಕೆಯ ಮೇಲೆ ಬೀಳುವುದು, ಪಕ್ಕದಲ್ಲಿದ್ದ ಮುಖಂಡರು ಅವರನ್ನು ಮೇಲಕ್ಕೆ ಎಬ್ಬಿಸುವುದು ಹಾಗೂ ಬಳಿಕ ಅವರು ನೀಡಿದ ಹಾಸ್ಯಮಯ ಪ್ರತಿಕ್ರಿಯೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb