ಗದಗ, ಜು. ೨೫ : ಸಾಯಿಬಾಬರ ಪವಾಡಗಳು ಕೇವಲ ಅಲೌಕಿಕ ಘಟನೆಗಳಲ್ಲ; ಅವು ಭಕ್ತರಲ್ಲಿ ನಂಬಿಕೆ, ಧೈರ್ಯ, ಆತ್ಮಬಲ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವ ದಿವ್ಯ ಅನುಭವಗಳಾಗಿವೆ ಎಂದು ಚಿಂತಕ ಹಾಗೂ ವೈದ್ಯ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗದಿಂದ ಗುರುಪೂರ್ಣಿಮೆ ಅಂಗವಾಗಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆಯಲ್ಲಿ ಅವರು ಮಾತನಾಡಿದರು.
ಸಾಯಿಬಾಬರ ಅನುಗ್ರಹವು ಭಕ್ತರ ನಿಷ್ಕಪಟ ಶ್ರದ್ಧೆ ಮತ್ತು ನಂಬಿಕೆಗೆ ಪ್ರತಿಫಲವಾಗಿ ದೊರೆಯುತ್ತದೆ. ಭಕ್ತರ ಸಂಕಷ್ಟಗಳನ್ನು ಅವರ ಕರ್ಮಕ್ಕೆ ಅನುಗುಣವಾಗಿ ನಿವಾರಿಸುತ್ತಿದ್ದ ಬಾಬಾರವರು, ನೋವನ್ನು ಕಡಿಮೆ ಮಾಡುವುದರ ಜೊತೆಗೆ ಆಧ್ಯಾತ್ಮಿಕ ಬದುಕಿನ ದಾರಿಯನ್ನೂ ತೋರಿಸುತ್ತಿದ್ದರು ಎಂದು ಹೇಳಿದರು.
ಸಾಯಿಬಾಬರ ಪವಿತ್ರ ಬೂದಿ ಕೇವಲ ಬೂದಿಯಲ್ಲ; ಅದು ದೈವಾನುಗ್ರಹ, ಆತ್ಮವಿಶ್ವಾಸ ಮತ್ತು ಭಕ್ತಿಯ ಸಂಕೇತವಾಗಿದೆ ಎಂದರು. ಪ್ಲೇಗ್, ಕಿಡ್ನಿ ಕಲ್ಲು, ಪ್ರಸೂತಿ ಸಮಸ್ಯೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬೂದಿಯ ಮಹಿಮೆಯಿಂದ ಭಕ್ತರು ಸಂಕಷ್ಟಗಳಿಂದ ಪಾರಾದ ಘಟನೆಗಳು ಸಾಯಿಬಾಬಾ ಸಚ್ಚರಿತ್ರೆಯಲ್ಲಿ ಉಲ್ಲೇಖಗೊಂಡಿವೆ.

ದಕ್ಷಿಣೆ ಹಣದ ವ್ಯವಹಾರವಲ್ಲ; ಅದು ಕೃತಜ್ಞತೆ, ದಾನ ಮತ್ತು ಸಮರ್ಪಣೆಯ ಪ್ರತೀಕವಾಗಿದೆ. “ನಾನು ಒಂದು ರೂಪಾಯಿ ಪಡೆದರೆ ಹತ್ತು ರೂಪಾಯಿ ಹಿಂದಿರುಗಿಸಬೇಕಾಗುತ್ತದೆ” ಎಂಬ ಬಾಬಾರವರ ಸಂದೇಶ ದಾನದ ಮಹತ್ವವನ್ನು ಸಾರುತ್ತದೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಯಿಬಾಬರ ಅನುಗ್ರಹದ ಅನುಭವಗಳು ಅನೇಕವಿವೆ ಎಂದು ಹೇಳಿದ ಅವರು, ಆಸ್ಟಿಯೋಮೈಲೈಟಿಸ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ಬೂದಿ ಪ್ರಸಾದದಿಂದ ಗುಣಮುಖನಾದ ಪ್ರಸಂಗ ಸೇರಿದಂತೆ ತಾವು ವೈದ್ಯರಾಗಿದ್ದ ವೇಳೆ ಕಂಡ ಹಲವು ಅನುಭವಗಳನ್ನು ಹಂಚಿಕೊಂಡರು.
ಭಕ್ತರು ಪವಾಡಗಳ ಹಿಂದೆ ಹೋಗುವುದಕ್ಕಿಂತ ಶ್ರದ್ಧೆ, ಸಬೂರಿ, ಸೇವೆ ಮತ್ತು ಗುರುಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜವಾದ ಆಧ್ಯಾತ್ಮಿಕ ನೆಮ್ಮದಿ ಹಾಗೂ ದೈವಾನುಗ್ರಹ ದೊರೆಯುತ್ತದೆ. ಗುರುಪೂರ್ಣಿಮೆಯ ನಿಜವಾದ ಆಚರಣೆ ಎಂದರೆ ಗುರುತತ್ವದ ಮೇಲಿನ ಅಚಲ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಎಂದು ಡಾ. ಶೆಟ್ಟರ ಹೇಳಿದರು.

ಪ್ರಸಾದದ ಭಕ್ತಿ ಸೇವೆ ವಹಿಸಿಕೊಂಡಿದ್ದ ಸಾಯಿಪ್ರಸಾದ ಶೆಟ್ಟರ, ಪ್ರಣವ್ ಎನ್.ರಾವ್, ಶಾಂತಾ ಗೋವಣ್ಣವರ, ಡಾ.ಎಲ್.ವ್ಹಿ.ಪಾಟೀಲ, ಅನ್ವಯ್ ಗೊಂದಕರ, ಮಲ್ಲಿಕಾರ್ಜುನ ಕುರಿ, ಮಲ್ಲಿಕಾರ್ಜುನ ಪೂಜಾರ, ವಿಜಯಲಕ್ಷಿ ಚೇಗರಡ್ಡಿ, ರಾಜು ಗುಡಸಾಲಿ, ಶ್ರೀದೇವಿ ಪಾಟೀಲ, ಅಧರ್ವ ಬುಳ್ಳಾ ಕುಟುಂಬ ಪರಿವಾರದವರು ವಹಿಸಿಕೊಂಡಿದ್ದರು. ಮಹೇಶಗೌಡ ತಲೆಗೌಡ್ರ ಸ್ವಾಗತಿಸಿದರು ಸದಾಶಿವಪ್ಪ ವಾಲಿ ವಂದಿಸಿದರು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.
