ಗದಗ:
ನಗರದ ಭಾರತೀಯ ಎಜುಕೇಶನ್ ಸೊಸೈಟಿ (ರಿ) ಅಧೀನದಲ್ಲಿರುವ ಬಿಪಿನ್ ಚಿಕ್ಕಟ್ಟಿ ಡಿಗ್ರಿ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ವಿಭಾಗದ ವತಿಯಿಂದ “ಸಿವಿಲ್ ಸರ್ವಿಸ್ ಏಕೆ? ಅವಕಾಶಗಳು, ಸವಾಲುಗಳು ಮತ್ತು ತಯಾರಿ” ಎಂಬ ವಿಷಯದ ಮೇಲೆ ವಿಶೇಷ ಆಹ್ವಾನಿತ ಉಪನ್ಯಾಸ ಕಾರ್ಯಕ್ರಮವನ್ನು ಏಪ್ರಿಲ್ 2, 2026ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 53ನೇ ರ‍್ಯಾಂಕ್ ಹಾಗೂ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಕಿರಣ ಕಾಮತೆ ಅವರು ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಸಿವಿಲ್ ಸರ್ವಿಸ್ ಕ್ಷೇತ್ರದಲ್ಲಿ ಇರುವ ಅಪಾರ ಅವಕಾಶಗಳು, ಎದುರಾಗುವ ಸವಾಲುಗಳು ಹಾಗೂ ಯಶಸ್ಸು ಸಾಧಿಸಲು ಅಗತ್ಯವಾದ ತಯಾರಿ ವಿಧಾನಗಳ ಕುರಿತು ಅವರು ಸಮಗ್ರವಾಗಿ ಮಾರ್ಗದರ್ಶನ ನೀಡಲಿದ್ದಾರೆ.
ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಹೊಂದಿ ರಾಷ್ಟ್ರ ಸೇವೆಯತ್ತ ಮುಖಮಾಡುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯ ಮಹತ್ವ ಹೆಚ್ಚಾಗಿದ್ದು, ಅದಕ್ಕೆ ಅಗತ್ಯವಾದ ದೃಢ ಸಂಕಲ್ಪ, ಶ್ರಮ ಹಾಗೂ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯ ಬಗ್ಗೆ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುವುದು.
ಕಾರ್ಯಕ್ರಮದ ಸಂಯೋಜಕರಾಗಿ ಪ್ರೊ. ಎಸ್. ಗುರುಬಸನಗೌಡರ್ ಅವರು ಕಾರ್ಯನಿರ್ವಹಿಸುತ್ತಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ವಿವಿಧ ತಯಾರಿಗಳನ್ನು ಕೈಗೊಂಡಿದ್ದಾರೆ. ಇನ್ನು ಕಾರ್ಯಕ್ರಮದ ಆಯೋಜಕರಾಗಿ ಪ್ರೊ. ಶ್ರೀಶೈಲ್ ಬಡಿಗೇರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎಸ್. ಚಿಕ್ಕಟ್ಟಿ, ನಿರ್ದೇಶಕರಾದ ಪ್ರೊ. ವಿ. ಎಸ್. ಚಿಕ್ಕಟ್ಟಿ ಹಾಗೂ ಅಧ್ಯಕ್ಷರಾದ ಪ್ರೊ. ಎಸ್. ವೈ. ಚಿಕ್ಕಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಸಿವಿಲ್ ಸರ್ವಿಸ್ ಕುರಿತು ಸಮಗ್ರ ಮಾಹಿತಿಯನ್ನು ಪಡೆದು ತಮ್ಮ ಭವಿಷ್ಯದ ದಾರಿಗೆ ದಿಕ್ಕುನೀಡುವಂತೆ ಕಾಲೇಜು ಆಡಳಿತ ಮಂಡಳಿ ಮನವಿ ಮಾಡಿದೆ.
