ಗದಗ, ಜೂನ್ 9:
ಗದಗ ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯಲ್ಲಿ ಇಂದು ಬೆಳಿಗ್ಗೆ ಅಪರೂಪದ ಬೆಳವಣಿಗೆಯೊಂದು ನಡೆದಿದ್ದು, ವರ್ಗಾವಣೆ ಆದೇಶ ಹೊರಬಿದ್ದಿದ್ದರೂ ಕಳೆದ ಎಂಟು ತಿಂಗಳಿಂದ ರಿಲೀವ್ ಮಾಡದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಇಲಾಖೆಯ ಕಿರಿಯ ಅಧಿಕಾರಿಯೊಬ್ಬರು ಕಚೇರಿ ಎದುರೇ ಪ್ರತಿಭಟನಾ ರೀತಿಯಲ್ಲಿ ಕುಳಿತು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವರದಿ: ಮಹಲಿಂಗೇಶ ಹಿರೇಮಠ. ಗದಗ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಅಧಿಕಾರಿ ಉಮೇಶ ಮಾಡಳ್ಳಿ ಅವರು, ತಮ್ಮ ವರ್ಗಾವಣೆ ಆದೇಶ ಜಾರಿಯಾಗದೆ ಇರುವುದನ್ನು ಖಂಡಿಸಿ ಕಚೇರಿ ಬಾಗಿಲಿನ ಎದುರು ಕುಳಿತು ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿಯ ಪ್ರಕಾರ, ಉಮೇಶ ಮಾಡಳ್ಳಿ ಅವರಿಗೆ ಸುಮಾರು ಎಂಟು ತಿಂಗಳ ಹಿಂದೆಯೇ ವರ್ಗಾವಣೆ ಆದೇಶ ಹೊರಬಿದ್ದಿತ್ತು. ಆದರೆ ಆದೇಶ ಹೊರಬಿದ್ದ ನಂತರವೂ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸದೇ ಅದೇ ಸ್ಥಳದಲ್ಲಿ ಮುಂದುವರಿಸಲಾಗುತ್ತಿದೆ ಎನ್ನಲಾಗಿದೆ. ಈ ಕುರಿತು ಹಲವು ಬಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ಸರ್ಕಾರ ನನ್ನನ್ನು ವರ್ಗಾವಣೆ ಮಾಡಿದೆ. ಆದೇಶವೂ ಹೊರಬಿದ್ದಿದೆ. ಆದರೆ ಇಲಾಖೆಯ ಅಧಿಕಾರಿಗಳು ನನ್ನನ್ನು ರಿಲೀವ್ ಮಾಡುತ್ತಿಲ್ಲ. ಹೊಸ ಕರ್ತವ್ಯ ಸ್ಥಳಕ್ಕೆ ಹಾಜರಾಗಲು ಅವಕಾಶ ನೀಡುತ್ತಿಲ್ಲ. ಕಳೆದ ಎಂಟು ತಿಂಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದೇನೆ” ಎಂದು ಉಮೇಶ ಮಾಡಳ್ಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ
ಪ್ರತಿಭಟನೆ ವೇಳೆ ಮಾತನಾಡಿದ ಉಮೇಶ ಮಾಡಳ್ಳಿ, ಇಲಾಖೆಯ ಹಿರಿಯ ಅಧಿಕಾರಿ ಕೆ. ನಾಗಭೂಷಣ್ ಅವರ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವರ್ಗಾವಣೆ ಆದೇಶ ಜಾರಿಗೊಳಿಸುವ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
“ಹಲವಾರು ಬಾರಿ ಮನವಿ ಸಲ್ಲಿಸಿದ್ದೇನೆ. ನೇರವಾಗಿ ಭೇಟಿ ಮಾಡಿ ಸಮಸ್ಯೆ ವಿವರಿಸಿದ್ದೇನೆ. ಆದರೂ ಯಾವುದೇ ಸ್ಪಂದನೆ ದೊರೆತಿಲ್ಲ. ವರ್ಗಾವಣೆ ಆದೇಶ ಜಾರಿಗೊಳಿಸುವ ಬದಲು ವಿವಿಧ ಕಾರಣಗಳನ್ನು ನೀಡುತ್ತಾ ಕಾಲಹರಣ ಮಾಡಲಾಗುತ್ತಿದೆ” ಎಂದು ಅವರು ದೂರಿದರು.
ಸಿಬ್ಬಂದಿ ಕೊರತೆಯೇ ಕಾರಣ..?
ಇತ್ತ ಇಲಾಖೆಯ ಮೂಲಗಳ ಪ್ರಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದಲೇ ಉಮೇಶ ಮಾಡಳ್ಳಿ ಅವರನ್ನು ತಕ್ಷಣ ರಿಲೀವ್ ಮಾಡಲಾಗಿಲ್ಲ ಎನ್ನಲಾಗಿದೆ. ಬದಲಿ ಸಿಬ್ಬಂದಿ ನಿಯೋಜನೆಯಾದ ನಂತರ ಅವರನ್ನು ಬಿಡುಗಡೆಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂಬ ಮಾಹಿತಿಯೂ ಕೇಳಿಬರುತ್ತಿದೆ.
“ಸಿಬ್ಬಂದಿ ಕೊರತೆ ಇದೆ. ಹೊಸ ಸಿಬ್ಬಂದಿ ಬಂದ ಬಳಿಕ ಹೋಗಿ” ಎಂಬ ನಿಲುವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ ಎಂದು ಉಮೇಶ ಮಾಡಳ್ಳಿ ಆರೋಪಿಸಿದ್ದಾರೆ.
ಆದರೆ, ವರ್ಗಾವಣೆ ಆದೇಶ ಹೊರಬಿದ್ದ ಬಳಿಕ ಅದನ್ನು ಜಾರಿಗೊಳಿಸುವುದು ಇಲಾಖೆಯ ಜವಾಬ್ದಾರಿಯಾಗಿದ್ದು, ಸಿಬ್ಬಂದಿ ಕೊರತೆಯ ನೆಪ ನೀಡಿ ಅಧಿಕಾರಿಯನ್ನು ತಿಂಗಳುಗಟ್ಟಲೆ ತಡೆಹಿಡಿಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.
ವೃತ್ತಿ ಜೀವನಕ್ಕೆ ತೊಂದರೆ
ವರ್ಗಾವಣೆ ಆದೇಶ ಜಾರಿಯಾಗದಿರುವುದರಿಂದ ತಮ್ಮ ವೃತ್ತಿಜೀವನದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಉಮೇಶ ಮಾಡಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ. ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದಿರುವುದು ಹಾಗೂ ಆಡಳಿತಾತ್ಮಕ ಅನಿಶ್ಚಿತತೆ ಎದುರಾಗಿರುವುದು ಮಾನಸಿಕ ಒತ್ತಡಕ್ಕೂ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
“ನನ್ನನ್ನು ರಿಲೀವ್ ಮಾಡಿ ಹೊಸ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಬೇಕು. ನನ್ನ ಬೇಡಿಕೆ ಅಷ್ಟೇ. ಇದಕ್ಕೂ ಸ್ಪಂದನೆ ಸಿಗದಿದ್ದರೆ ಸರ್ಕಾರ ಹಾಗೂ ಉನ್ನತ ಅಧಿಕಾರಿಗಳ ಮೊರೆ ಹೋಗಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇಲಾಖೆಯ ಕಾರ್ಯವೈಖರಿ ಕುರಿತು ಪ್ರಶ್ನೆ
ಈ ಘಟನೆ ಜಿಲ್ಲಾಡಳಿತ ಭವನದಲ್ಲೇ ನಡೆದಿರುವುದರಿಂದ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಒಂದು ಇಲಾಖೆಯ ಕಿರಿಯ ಅಧಿಕಾರಿ ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಕಚೇರಿ ಎದುರೇ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಇಲಾಖೆಯ ಆಡಳಿತಾತ್ಮಕ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸದ್ಯ ಉಮೇಶ ಮಾಡಳ್ಳಿ ಅವರಿಗೆ ಪಕ್ಕದ ವಿಜಯನಗರ ಜಿಲ್ಲೆಗೆ ವರ್ಗಾವಣೆ ಆಗಿದೆ. ಆದರೆ ಆದೇಶ ಜಾರಿಗೊಳಿಸುವ ಕುರಿತು ಇಲಾಖೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
