Home » News » ಗದಗ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಅಪರೂಪದ ರಾಜಕೀಯ ಸಂಯಮ”, “ಒಗ್ಗಟ್ಟಿನಲ್ಲೇ ಸಚಿವ ಸ್ಥಾನಕ್ಕಾಗಿ ಕಾರ್ಯಕರ್ತರ ಪೈಪೋಟಿ” ” ನಾಯಕರ ನಡುವೆ ಸೌಹಾರ್ದ” ಒಬ್ಬರ ಪರ ಆಗ್ರಹ, ಮತ್ತೊಬ್ಬರ ವಿರುದ್ಧ ಧ್ವನಿಯಿಲ್ಲ! ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ನಾಯಕರ ಮಾತುಗಳೇನು?

ಗದಗ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಅಪರೂಪದ ರಾಜಕೀಯ ಸಂಯಮ”, “ಒಗ್ಗಟ್ಟಿನಲ್ಲೇ ಸಚಿವ ಸ್ಥಾನಕ್ಕಾಗಿ ಕಾರ್ಯಕರ್ತರ ಪೈಪೋಟಿ” ” ನಾಯಕರ ನಡುವೆ ಸೌಹಾರ್ದ” ಒಬ್ಬರ ಪರ ಆಗ್ರಹ, ಮತ್ತೊಬ್ಬರ ವಿರುದ್ಧ ಧ್ವನಿಯಿಲ್ಲ! ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ನಾಯಕರ ಮಾತುಗಳೇನು?

by CityXPress
0 comments

ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನದ ಚರ್ಚೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಂಪುಟ ರಚನೆಗೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಗದಗ ಜಿಲ್ಲೆಯ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ.

ವರದಿ: ಮಹಲಿಂಗೇಶ ಹಿರೇಮಠ.ಗದಗ

ಒಂದೆಡೆ ಗದಗ ಕ್ಷೇತ್ರದ ಶಾಸಕ, ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಹೆಚ್.ಕೆ. ಪಾಟೀಲ ಅವರ ಬೆಂಬಲಿಗರು ಸಚಿವ ಸ್ಥಾನಕ್ಕಾಗಿ ತಮ್ಮ ನಾಯಕನ ಪರ ಧ್ವನಿ ಎತ್ತುತ್ತಿದ್ದಾರೆ. ಮತ್ತೊಂದೆಡೆ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೂಡ ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡಬೇಕೆಂದು ವಿವಿಧ ರೀತಿಯ ಒತ್ತಾಯಗಳನ್ನು ಮುಂದಿಡುತ್ತಿದ್ದಾರೆ.

ಆದರೆ ಈ ಪೈಪೋಟಿಯ ವಿಶೇಷತೆ ಏನೆಂದರೆ, ಇಲ್ಲಿಯವರೆಗೆ ಯಾರೂ ಕೂಡ ಮತ್ತೊಬ್ಬ ನಾಯಕನ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. “ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗಬೇಕು” ಎಂಬ ಬೇಡಿಕೆಯೇ ಕೇಳಿಬರುತ್ತಿದೆಯೇ ಹೊರತು, “ಅವರಿಗೆ ಸಿಗಬಾರದು” ಎಂಬ ವಿರೋಧದ ಧ್ವನಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.

banner

ಇದು ಗದಗ ಜಿಲ್ಲೆಯ ರಾಜಕೀಯ ಸಂಸ್ಕೃತಿಯ ಒಂದು ಸಕಾರಾತ್ಮಕ ಅಂಶವೆಂದೇ ಹೇಳಬಹುದು. ಸಾಮಾನ್ಯವಾಗಿ ಸಚಿವ ಸ್ಥಾನ ಅಥವಾ ರಾಜಕೀಯ ಹುದ್ದೆಗಳ ವಿಷಯ ಬಂದಾಗ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ, ಗುಂಪುಗಾರಿಕೆ ಅಥವಾ ಪರಸ್ಪರ ಟೀಕೆಗಳು ಕೇಳಿಬರುವುದು ಸಹಜ. ಆದರೆ ಗದಗ ಜಿಲ್ಲೆಯಲ್ಲಿ ಸದ್ಯಕ್ಕೆ ಎರಡೂ ಬಣಗಳು ಸಾಕಷ್ಟು ಸಂಯಮ ಮತ್ತು ಸೂಕ್ಷ್ಮತೆಯಿಂದ ನಡೆದುಕೊಳ್ಳುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಆದಾಗ್ಯೂ, ನೆಲಮಟ್ಟದಲ್ಲಿ ಕಾರ್ಯಕರ್ತರ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಜಿ.ಎಸ್. ಪಾಟೀಲ ಪರ ಕಾರ್ಯಕರ್ತರು ಉರುಳು ಸೇವೆ, ದೀಡ ನಮಸ್ಕಾರ, ವಿಶೇಷ ಪೂಜೆ, ಪತ್ರಿಕಾಗೋಷ್ಠಿ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ತಮ್ಮ ಒತ್ತಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಹೆಚ್.ಕೆ. ಪಾಟೀಲ ಪರ ಬೆಂಬಲಿಗರು ಪತ್ರಿಕಾಗೋಷ್ಠಿಗಳು, ಮಾಧ್ಯಮ ಹೇಳಿಕೆಗಳು, ಉರುಳು ಸೇವೆ ಹಾಗೂ ಬೃಹತ್ ರ್ಯಾಲಿ ಆಯೋಜನೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕೆ ಎರಡು ರೀತಿಯ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದೆಡೆ ಕಾರ್ಯಕರ್ತರ ಉತ್ಸಾಹ ಮತ್ತು ಪಕ್ಷದ ಮೇಲಿನ ನಿಷ್ಠೆ ಹೆಚ್ಚುತ್ತಿರುವಂತೆ ಕಾಣಬಹುದು. ಮತ್ತೊಂದೆಡೆ ಸಚಿವ ಸ್ಥಾನ ಘೋಷಣೆಯ ನಂತರ ನಿರೀಕ್ಷೆ ಈಡೇರದ ಬಣದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ರಾಜಕೀಯ ವಲಯದಲ್ಲೂ ಇದೇ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಗದಗ ಜಿಲ್ಲೆಗೆ ಒಂದೇ ಸಚಿವ ಸ್ಥಾನ ಸಿಕ್ಕರೆ ಯಾರಿಗೆ ಅವಕಾಶ ಸಿಗಲಿದೆ? ಇಬ್ಬರಿಗೂ ಅವಕಾಶ ಸಿಗಬಹುದೇ? ಅಥವಾ ಸಂಪೂರ್ಣವಾಗಿ ಹೊಸ ಮುಖಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗಳು ಕಾರ್ಯಕರ್ತರಷ್ಟೇ ಅಲ್ಲ, ಸಾಮಾನ್ಯ ಜನರಲ್ಲಿಯೂ ಕುತೂಹಲ ಮೂಡಿಸಿವೆ.

ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ, ಇಬ್ಬರೂ ನಾಯಕರು ನೇರವಾಗಿ ಪರಸ್ಪರ ವಿರೋಧದ ರಾಜಕೀಯ ನಡೆಸದೆ, ತಮ್ಮ ಕಾರ್ಯಕರ್ತರ ಮೂಲಕವೇ ಹೈಕಮಾಂಡ್ ಗಮನ ಸೆಳೆಯುವ ತಂತ್ರ ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಈ ತಂತ್ರ ಅಂತಿಮವಾಗಿ ಫಲ ನೀಡುತ್ತದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೈಗೊಳ್ಳುವ ನಿರ್ಧಾರವೇ ಸ್ಪಷ್ಟಪಡಿಸಲಿದೆ.

ಒಟ್ಟಾರೆ, ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನದ ವಿಚಾರ ಈಗ ಕೇವಲ ಇಬ್ಬರು ನಾಯಕರ ನಡುವಿನ ಪೈಪೋಟಿಯಾಗಿ ಉಳಿದಿಲ್ಲ. ಅದು ಜಿಲ್ಲೆಯ ರಾಜಕೀಯ ಪ್ರತಿಷ್ಠೆ, ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆ ಮತ್ತು ಮುಂದಿನ ದಿನಗಳ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.

ಈಗ ಎಲ್ಲರ ಕಣ್ಣುಗಳು ಒಂದೇ ಪ್ರಶ್ನೆಯತ್ತ ನೆಟ್ಟಿವೆ…

“ಡಿ.ಕೆ. ಶಿವಕುಮಾರ ಸಂಪುಟದಲ್ಲಿ ಗದಗ ಜಿಲ್ಲೆಯ ಧ್ವನಿಯಾಗುವವರು ಯಾರು?”

ಸಚಿವ ಸ್ಥಾನದ ಈ ಚರ್ಚೆ ಮತ್ತು ಕಾರ್ಯಕರ್ತರ ಒತ್ತಾಯದ ನಡುವೆಯೇ, ಗದಗ ಜಿಲ್ಲೆಯ ವಿವಿಧ ತಾಲೂಕುಗಳ ಕಾಂಗ್ರೆಸ್ ಸಂಘಟನೆಗಳ ಅಭಿಪ್ರಾಯವೂ ಮಹತ್ವ ಪಡೆದುಕೊಂಡಿದೆ.

ಜಿಲ್ಲೆಯ ಗದಗ, ರೋಣ, ನರಗುಂದ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಬೆಳವಣಿಗೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ? ಜಿಲ್ಲೆಯ ಇಬ್ಬರು ಹಿರಿಯ ನಾಯಕರ ಪೈಕಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಕುರಿತು ಅವರ ಅಭಿಪ್ರಾಯವೇನು? ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಕಾರ್ಯಕರ್ತರ ಒತ್ತಾಯ ಪಕ್ಷದ ಸಂಘಟನೆ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು “ವಿಸ್ತಾರ ವಾಯ್ಸ್” ನಡೆಸಿದೆ.

ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಕೆಲವರು ಜಿಲ್ಲೆಯ ಹಿರಿಯ ನಾಯಕತ್ವಕ್ಕೆ ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಜಿಲ್ಲೆಗೆ ಸಚಿವ ಸ್ಥಾನ ಸಿಗುವುದೇ ಮುಖ್ಯ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಸಚಿವ ಸ್ಥಾನ ಯಾರಿಗೇ ಸಿಕ್ಕರೂ ಪಕ್ಷದ ಸಂಘಟನೆಗೆ ಧಕ್ಕೆಯಾಗದಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂಬ ಸಲಹೆಯೂ ವ್ಯಕ್ತವಾಗಿದೆ.

ಹಾಗಾದರೆ ಜಿಲ್ಲೆಯ ವಿವಿಧ ತಾಲೂಕುಗಳ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ನಾಯಕರು ಏನು ಹೇಳುತ್ತಾರೆ? ಅವರ ಮಾತುಗಳಲ್ಲೇ ಕೇಳೋಣ…

“ಇಬ್ಬರಲ್ಲಿ ಯಾರಿಗೇ ಸಚಿವ ಸ್ಥಾನ ಕೊಟ್ಟರೂ ಒಳ್ಳೆಯದೇ. ಅಥವಾ ಇಬ್ಬರಿಗೂ ಸಚಿವ ಸ್ಥಾನ ಸಿಕ್ಕರಂತೂ ಇನ್ನೂ ಒಳ್ಳೆಯದು, ಕಾರ್ಯಕರ್ತರ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಇದ್ದರೂ ಅದು ಬಹಳ ದಿನ ಮುಂದುವರೆಯುವದಿಲ್ಲ. ಇದೆಲ್ಲವೂ ರಾಜಕೀಯದಲ್ಲಿ ಸಾಮಾನ್ಯ, ಆನಂತರ ಎಲ್ಲರೂ ಹೊಂದಿಕೊಂಡು ಹೋಗುತ್ತಾರೆ.”

ಬಿ.ಆರ್. ಯಾವಗಲ್ಲ, ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಹಿರಿಯ ನಾಯಕರು

ಗದಗ ಜಿಲ್ಲೆಯ ರಾಜಕೀಯದಲ್ಲಿ ಹೆಚ್.ಕೆ.ಪಾಟೀಲ ಹಾಗೂ ಜಿ.ಎಸ್.ಪಾಟೀಲ ಇಬ್ಬರೂ ಕಾಂಗ್ರೆಸ್ ಪಕ್ಷದ ಹಿರಿಯ ಮತ್ತು ಪ್ರಭಾವಿ ನಾಯಕರಾಗಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಹೆಚ್.ಕೆ.ಪಾಟೀಲ ಅವರು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡಿದ್ದು, ಆಲಮಟ್ಟಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಸರ್ಕಾರದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅವರ ಅನುಭವ ಮತ್ತು ಮಾರ್ಗದರ್ಶನ ಅಗತ್ಯವಾಗಿರುವುದರಿಂದ, ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ನಮ್ಮ ಒತ್ತಾಯ.  ಅದೇ ರೀತಿ, “ಸಾವಿರ ಕೆರೆಗಳ ಸರದಾರ” ಎಂದೇ ಖ್ಯಾತಿ ಪಡೆದಿರುವ ಜಿ.ಎಸ್.ಪಾಟೀಲರು ಸಹ ದೀರ್ಘಕಾಲದಿಂದ ಜನಸೇವೆ ಹಾಗೂ ಕಾಂಗ್ರೆಸ್ ಸಂಘಟನೆಗೆ ದುಡಿದಿದ್ದಾರೆ. ಅವರ ಕುಟುಂಬದ ಸೇವೆ ಮತ್ತು ಪ್ರಭಾವ ಗದಗ ಜಿಲ್ಲೆಯಷ್ಟೇ ಅಲ್ಲದೆ ಹಾವೇರಿ, ಧಾರವಾಡ ಹಾಗೂ ಬಾಗಲಕೋಟೆ ಭಾಗಗಳಲ್ಲಿಯೂ ಇದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೂ ಸಹಕಾರಿಯಾಗಲಿದೆ.ಆದ್ದರಿಂದ ಈ ಬಾರಿ ಹೆಚ್.ಕೆ.ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಿ, ಉತ್ತರ ಕರ್ನಾಟಕಕ್ಕೆ ಸಮರ್ಪಕ ಪ್ರಾತಿನಿಧ್ಯ ಕಲ್ಪಿಸಬೇಕೆಂಬುದು ನಮ್ಮ ಆಗ್ರಹ.

ಆನಂದಸ್ವಾಮಿ ಗಡ್ಡದ್ದೇವರಮಠ.ಲೋಕಸಭಾ ಅಭ್ಯರ್ಥಿ. ಗದಗ ಮತ್ತು ಹಾವೇರಿ ಲೋಕಸಭಾ ಕ್ಷೇತ್ರ.

“ಇಬ್ಬರೂ ನಾಯಕರಿಗೆ ಸಚಿವ ಸ್ಥಾನ ನಿಡಿದಲ್ಲಿ ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತದೆ, ಜಿ.ಎಸ್.ಪಾಟೀಲರೂ ಹಿರಿಯರು, ಹೆಚ್.ಕೆ.ಪಾಟೀಲರೂ ಹಿರಿಯರೇ, ಕಾರ್ಯಕರ್ತರ ಹೋರಾಟವೂ ಸಹ ಒಬ್ಬರನ್ನೇ ಸಚಿವರನ್ನಾಗಿ ಮಾಡಿ ಎಂದು ಎಲ್ಲಿಯೂ ಇಲ್ಲ.ಒಂದೇ ಜಿಲ್ಲೆಗೆ ಎರೆಡು ಸಚಿವ ಸ್ಥಾನಗಳನ್ನ ಬಹಳಷ್ಟು ಉದಾಹರಣೆಗಳಿವೆ. ಅದೇ ರೀತಿ ನಮ್ಮ ಜಿಲ್ಲೆಗೂ ಎರೆಡು ಸ್ಥಾನ ನಿಡಿದಲ್ಲಿ ಯಾವ ತಪ್ಪಿಲ್ಲ”

ಬಿ.ಬಿ. ಅಸೂಟಿ, ಗದಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

“ಜಿ.ಎಸ್.ಪಾಟೀಲ ಪರವಾಗಿ ನಾವೆಲ್ಲ ಅಭಿಮಾನಿಗಳು ಈ ಬಾರಿಯಾದರೂ ಸಚಿವ ಸ್ಥಾನ ಸಿಗಲಿ ಎಂದು ಪ್ರಯತ್ನಿಸುತ್ತಿದ್ದೇವೆ. ಸಾಮೂಹಿಕ ರಾಜೀನಾಮೆ ಕುರಿತಾದ ಹೇಳಿಕೆಗಳು ಅವರವರ ಭಾವನಾತ್ಮಕ ಅಭಿಪ್ರಾಯಗಳಷ್ಟೆ. ಇದರಿಂದ ಪಕ್ಷಕ್ಕಾಗಲಿ, ಕಾರ್ಯಕರ್ತರಲ್ಲಾಗಲಿ ಯಾವುದೇ ಭೀನ್ನಾಭಿಪ್ರಾಯ ಮೂಡುವದಿಲ್ಲ. ಜಿ.ಎಸ್.ಪಾಟೀಲರು ಈಗಾಗಲೇ ನಾಲ್ಕು ಸಲ ಶಾಸಕರಾಗಿದ್ದಾರೆ. ಐದು ದಶಕದಿಂದ ರಾಜಕಾರಣದಲ್ಲಿದ್ದಾರೆ. ಸಾಮಾಜಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ಸಂಘಟನೆ ಮಾಡಿದ್ದಾರೆ.ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ. ಹೀಗಾಗಿ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನಿಡಬೇಕು ಅನ್ನೋದು ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನನ್ನ ಒತ್ತಾಯ.”

ಡಿ.ಡಿ. ಮೋರನಾಳ, ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

“ಹಿರಿಯರಾದ ಹೆಚ್.ಕೆ.ಪಾಟೀಲ ಅವರು ಮುಖ್ಯಮಂತ್ರಿ ಸ್ಥಾನದವರೆಗೂ ಹೋಗಿಬಂದಿದ್ದಾರೆ.ಅಂಥಹ ನಾಯಕನನ್ನ ಪಕ್ಷ ಕಡೆಗಣಿಸಿರುವದು ಕಾರ್ಯಕರ್ತರಿಗೆ ನೋವಿನ ಸಂಗತಿ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆಲ್ಲ ನಾವು ಬದ್ಧ. ಜಿಲ್ಲೆಯಲ್ಲಿ ಇಬ್ಬರು ನಾಯಕರಲ್ಲಿ ಯಾರಿಗೇ ಸ್ಥಾನಮಾನ ನೀಡಿದರೂ ಅದೆಲ್ಲವನ್ನೂ ಕಾರ್ಯಕರ್ತರು ಒಂದೇ ತಾಯಿಯ ಮಕ್ಕಳಂತೆ ಸ್ವೀಕರಿಸುತ್ತಾರೆ.”

ಬಸವರಾಜ ಸುಂಕಾಪುರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

“ಹೆಚ್.ಕೆ,ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಿ. ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಲಿ. ಜಿಲ್ಲೆಯಲ್ಲಿ ಇಬ್ಬರೂ ನಾಯಕರು ಪ್ರಬಲರು. ಪಕ್ಷದಲ್ಲಿ ಇಬ್ಬರ ಸೇವೆಯೂ ಸಮಾನವಾಗಿದೆ. ಪಕ್ಷದ ಸಂಘಟನೆ, ಮನೆತನದ ಹಿನ್ನೆಲೆ ಇಬ್ಬರ ನಾಯಕತ್ವದಲ್ಲಿ ಸಮಾನವಾಗಿದೆ. ಇಂದಿನ ಸರ್ಕಾರದಲ್ಲಿ ನಮ್ಮ ಜಿಲ್ಲೆಯ ಹಕ್ಕು ಬಹಳಷ್ಟಿದೆ. ಹೀಗಾಗಿ ಇಬ್ಬರೂ ನಾಯಕರಿಗೂ ಗೌರವವಾದ ಸ್ಥಾನಮಾನ ಸಿಗಬೇಕು.ಆಯಾ ಕ್ಷೇತ್ರದ ಕಾರ್ಯಕರ್ತರು ಅಭಿಮಾನದಿಂದ ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರುವದಿಲ್ಲ”

ಹುಮಾಯನ್ ಮಾಗಡಿ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

“ಕಾರ್ಯಕರ್ತರ ಪೈಪೋಟಿ ತಾತ್ಕಾಲಿಕವಷ್ಟೇ. ಇದು ಗಂಡ ಹೆಂಡತಿ ಜಗಳ ಇದ್ದಹಾಗೆ. ಹೆಚ್.ಕೆ.ಪಾಟೀಲ ಬೇರೆ ಅಲ್ಲ. ಜಿ.ಎಸ್.ಪಾಟೀಲ ಬೇರೆ ಅಲ್ಲ. ಯಾರು ಯಾರ ವಿರೋಧಿ ಅಲ್ಲ.ಪರವೂ ಅಲ್ಲ. ನಮ್ಮ ನಮ್ಮ ನಾಯಕರಿಗೆ ಸಚಿವ ಸ್ಥಾನದ ಅವಕಾಶ ನೀಡಲಿ ಅನ್ನೋದಷ್ಟೆ. ಆದರೆ ಈ ಬಾರಿ ನಮ್ಮ ರೋಣಕ್ಕೆ ಮಂತ್ರಿ ಸ್ಥಾನ ಕೊಡಲಿ ಎಂದು ಒತ್ತಾಯ. ಜಿ.ಎಸ್. ಪಾಟೀಲರು ಈಗಾಗಲೇ ಹಿರಿಯರು. ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಾರೋ ಇಲ್ಲವೋ ಗೊತ್ತಿಲ್ಲ.ಹೀಗಾಗಿ ಅವರನ್ನ ಮಂತ್ರಿಯಾಗಿ ನೋಡುವ ಆಸೆ ನಮ್ಮೆಲ್ಲ ಕಾರ್ಯಕರ್ತರದ್ದು. ಈ ಬಾರಿ ಒಂದು ಅವಕಾಶ ಮಾಡಿಕೊಡಿ ಎಂದು ಒತ್ತಾಯ.ಕಾರ್ಯಕರ್ತರ ರಾಜೀನಾಮೆ ವಿಚಾರದ ಹಿಂದಿನ ಉದ್ದೇಶ, ನಮ್ಮ ಬೇಡಿಕೆ ಪರಿಗಣಿಸಲಿ ಅಂತ ಮಾತ್ರ.”

ವೀರಣ್ಣ ಶೆಟ್ಟರ, ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

“ನಾನು 45 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಇಬ್ಬರೂ ನಾಯಕರೂ ಸಚಿವ ಸ್ಥಾನ ಕೇಳುತ್ತಿದ್ದಾರೆ. ಇದರಿಂದ ಅಲ್ಪಮಟ್ಟಿಗಾದರೂ ಜಿಲ್ಲೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ.ಒಬ್ಬ ನಾಯಕರಿಗೆ ಸಚಿವ ಸ್ಥಾನ ಸಿಗದೇ ಹೋದಲ್ಲಿ ಕೆಲವರು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ ಎನ್ನುತ್ತಿದ್ದಾರೆ.ಸಿದ್ಧರಾಮಯ್ಯ ಬಣ ಹಾಗೂ ಡಿಕೆ ಬಣ ಎಂದು ಎರೆಡಾಗಿವೆ.ಇನ್ನು ಮೊದಲನೇ ಪಟ್ಟಿಯಲ್ಲಿ ಸಿದ್ಧರಾಮಯ್ಯ ಬಣಕ್ಕೆ ಮಂತ್ರಿಗಿರಿ ಸಿಕ್ಕಿದೆ.ಇದೀಗ ಡಿಕೆಶಿ ಬಣ,ಅವರಿಗೆ ಬೇಕಾದವರಿಗೆ 2 ನೇ ಪಟ್ಟಿಯಲ್ಲಿ ಕೊಡುತ್ತಾರೆ”. ಇದರಿಂದ ಕಾರ್ಯಕರ್ತರಲ್ಲಿನ ಸ್ವಲ್ಪ ಮಟ್ಟಿಗಿನ ಬೇಸರ, ಪಕ್ಷಕ್ಕೂ ತಟ್ಟುತ್ತದೆ. ಹೀಗಾಗಿ ಇಬ್ಬರೂ ನಾಯಕರಿಗೂ ಸಚಿವ ಸ್ಥಾನ ಕೊಡುವದು ಒಳ್ಳೆಯದು.

ಎಂ.ಬಿ. ಕೊಲೇರಿ, ಹೊಳೆಯಾಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

“ಇಬ್ಬರೂ ನಾಯಕರ ಅಭಿಮಾನಿಗಳು ನಮ್ಮ ನಾಯಕರ ಪರವಾಗಿ ಧ್ವನಿ ಎತ್ತಿದ್ದೇವೆ.ಇದರಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ.ಜಿ.ಎಸ್.ಪಾಟೀಲರು ಹಿರಿಯರು.ಮೊದಲಿನಿಂದಲೂ ಅವರಿಗೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದೇವೆ.ಆದರೆ ಬೇರೆ ಸ್ಥಾನಮಾನ ನೀಡಿ ಸಮಾಧಾನ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯನವರು ಸಿಎಂ ಆದಾಗ,ನಮ್ಮ ರೋಣ ಮತಕ್ಷೇತ್ರದಿಂದ ನಾವೆಲ್ಲ ಬಹುಸಂಖ್ಯೆಯಲ್ಲಿ ತೆರಳಿ ನಮ್ಮ ಸಾಹೇಬರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದೆವು.ಆಗ ಮುಂದಿನ ಹಂತದಲ್ಲಿ ಕೊಡೋಣ ಎಂದಿದ್ದರು. ಹೀಗಾಗಿ ಈಗಲಾದರೂ ಸಿಗುತ್ತೆ ಎಂದು ಆಗ್ರಹಿಸುತ್ತಿದ್ದೇವೆ. ಆದರೆ ಪಕ್ಷನಿಷ್ಠೆಯಂತೂ ಸದಾ ಇದ್ದೇ ಇರುತ್ತದೆ.”

ಶರಣಪ್ಪ ಬೆಟಗೇರಿ, ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

(ಲಕ್ಷ್ಮೇಶ್ವರ ಹಾಗೂ ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಫೋನ್ ಕರೆ ಸ್ವೀಕರಿಸಲಿಲ್ಲ.)

ಒಟ್ಟಾರೆಯಾಗಿ ಗದಗ ಜಿಲ್ಲೆಯ ವಿವಿಧ ಕಾಂಗ್ರೆಸ್ ಮುಖಂಡರು, ಬ್ಲಾಕ್ ಅಧ್ಯಕ್ಷರ ಅಭಿಪ್ರಾಯಗಳನ್ನು ಅವಲೋಕಿಸಿದರೆ, ಸಚಿವ ಸ್ಥಾನಕ್ಕಾಗಿ ಪೈಪೋಟಿ ಇದ್ದರೂ ಪಕ್ಷದೊಳಗೆ ಬಹಿರಂಗ ಭಿನ್ನಾಭಿಪ್ರಾಯ ಅಥವಾ ವೈಮನಸ್ಸಿನ ವಾತಾವರಣ ಕಂಡುಬರುತ್ತಿಲ್ಲ. ತಮ್ಮ ತಮ್ಮ ನಾಯಕರ ಪರವಾಗಿ ಒತ್ತಾಯಗಳು, ಹೋರಾಟಗಳು ಮತ್ತು ಅಭಿಯಾನಗಳು ನಡೆಯುತ್ತಿವೆಯಾದರೂ, ಮತ್ತೊಬ್ಬ ನಾಯಕನ ವಿರುದ್ಧದ ಧ್ವನಿ ಎಲ್ಲಿಯೂ ಕೇಳಿಬಂದಿಲ್ಲ.

ಹೆಚ್.ಕೆ. ಪಾಟೀಲ ಹಾಗೂ ಜಿ.ಎಸ್. ಪಾಟೀಲ ಇಬ್ಬರೂ ಜಿಲ್ಲೆಯ ಪ್ರಭಾವಿ ನಾಯಕರು ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರೇ ಒಪ್ಪಿಕೊಳ್ಳುತ್ತಿರುವುದು ವಿಶೇಷ. ಸಚಿವ ಸ್ಥಾನ ಯಾರಿಗೆ ಸಿಗಬೇಕು ಎಂಬ ವಿಚಾರದಲ್ಲಿ ಅಭಿಪ್ರಾಯ ಭಿನ್ನತೆಗಳಿದ್ದರೂ, ಗದಗ ಜಿಲ್ಲೆಗೆ ಪ್ರಬಲ ಪ್ರಾತಿನಿಧ್ಯ ಸಿಗಬೇಕು ಎಂಬ ಆಶಯವೇ ಹೆಚ್ಚಿನವರ ಮಾತುಗಳಲ್ಲಿ ವ್ಯಕ್ತವಾಗಿದೆ.

ಒಟ್ಟಾರೆ ಈಗ ಚೆಂಡು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಅಂತಿಮ ನಿರ್ಧಾರ ಏನಾಗಲಿದೆ ಎಂಬುದರತ್ತ ಜಿಲ್ಲೆಯ ರಾಜಕೀಯ ವಲಯ ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರೂ ಕುತೂಹಲದಿಂದ ಕಾದು ನೋಡುತ್ತಿದ್ದಾರೆ. ಇದಕ್ಕೆಲ್ಲ ಅಂತಿಮ ಮುದ್ರೆ ಬೀಳೋದು, ಡಿಕೆಶಿ ಸರ್ಕಾರದ ಸಚಿವ ಸಂಪುಟದ 2 ನೇ ಪಟ್ಟಿ ಅನೌನ್ಸ್ ಆಗುವವರೆಗೂ. ಅಲ್ಲಿವರೆಗೂ ನಾವು, ನಿವೆಲ್ಲಾ ಕಾಯೋದು ಅನಿವಾರ್ಯ.

You Might Also Like

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb