ಜು. 10: ಗದಗ ನಗರದ ಕರಿಯಮ್ಮನಕಲ್ಲು ಬಡಾವಣೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆತ್ಮಹತ್ಯೆಗೂ ಮುನ್ನ ಮೃತ ಸಂಪತ್ ದಂಡಗಿ (38) ಅವರು ತಮ್ಮ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ದಾಖಲಿಸಿದ್ದು, ಘಟನಾ ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಪ್ರಕರಣಕ್ಕೆ ಮತ್ತಷ್ಟು ಮಹತ್ವ ನೀಡಿದ್ದು, ವಿಡಿಯೋ ಮತ್ತು ಡೆತ್ನೋಟ್ನಲ್ಲಿರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಕುಟುಂಬಸ್ಥರ ಆರೋಪದಂತೆ, ಕೆಲವು ಬಡ್ಡಿ ದಂಧೆಕೋರರು ಹಣದ ವಿಚಾರವಾಗಿ ನಿರಂತರವಾಗಿ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿದ್ದರು. ಇದೇ ಮಾನಸಿಕ ಒತ್ತಡದಿಂದ ಸಂಪತ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮೊಬೈಲ್ನಲ್ಲಿ ದಾಖಲಿಸಿರುವ ವಿಡಿಯೋದಲ್ಲಿ ಸಂಪತ್, “ನಾನು ಜೀವನದಲ್ಲಿ ಬಹಳ ಬೇಸರಗೊಂಡಿದ್ದೇನೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಹೋಗಿದ್ದೇ ನನ್ನ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ನನ್ನ ಕುಟುಂಬ, ತಂದೆ-ತಾಯಿ ಎಲ್ಲರೂ ಚೆನ್ನಾಗಿರಲಿ ಎಂಬ ಉದ್ದೇಶದಿಂದ ಎಲ್ಲವನ್ನೂ ಮಾಡಿದೆ. ಆದರೆ ಇಂದು ನನಗೆ ಕಷ್ಟ ಬಂದಾಗ ಯಾರೂ ನೆರವಿಗೆ ಬರಲಿಲ್ಲ” ಎಂದು ಹೇಳಿರುವುದು ತಿಳಿದುಬಂದಿದೆ.
ಅಲ್ಲದೆ, “ಬದುಕಬೇಕು, ದುಡಿಯಬೇಕು ಎಂದು ಕೆಲಸ ಮಾಡುತ್ತಿದ್ದೆ. ಕಳೆದ ಎರಡು-ಮೂರು ತಿಂಗಳಿಂದ ನನ್ನ ಹೆಸರನ್ನು ಕೆಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಬೇರೆಯವರ ಹಣ ಪಡೆದು ಊರು ಬಿಟ್ಟು ಹೋಗಿದ್ದೇನೆ ಎಂದು ಅಪಪ್ರಚಾರ ಮಾಡಿದರು. ಸಮಯ ಕೇಳಿದರೂ ಒಪ್ಪಲಿಲ್ಲ. ಹುಡುಗರನ್ನು ಕಳುಹಿಸಿ ಹಲ್ಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದರು. ಇದರಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಸಾವಿಗೆ ಇವರೇ ಕಾರಣ” ಎಂದು ವಿಡಿಯೋದಲ್ಲಿ ಕೆಲವು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.
ವಿಡಿಯೋದ ಕೊನೆಯಲ್ಲಿ, “ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ” ಎಂದು ಹೇಳಿರುವುದು ಕೂಡ ತಿಳಿದುಬಂದಿದೆ.
ಇದೇ ವೇಳೆ, ಆತ್ಮಹತ್ಯೆ ನಡೆದ ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲೂ ಕೆಲವರ ಹೆಸರುಗಳು ಉಲ್ಲೇಖವಾಗಿವೆ ಎನ್ನಲಾಗಿದೆ. ಆದರೆ ಡೆತ್ನೋಟ್ನಲ್ಲಿರುವ ಮಾಹಿತಿ ಹಾಗೂ ಸೆಲ್ಫಿ ವಿಡಿಯೋದ ಸತ್ಯಾಸತ್ಯತೆ, ಅವುಗಳ ಕಾನೂನುಬದ್ಧ ಮೌಲ್ಯ ಮತ್ತು ಅವುಗಳಲ್ಲಿರುವ ಆರೋಪಗಳ ಬಗ್ಗೆ ಪೊಲೀಸ್ ತನಿಖೆ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.
ಘಟನೆ ಸಂಬಂಧ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಮೊಬೈಲ್, ಸೆಲ್ಫಿ ವಿಡಿಯೋ, ಡೆತ್ನೋಟ್ ಸೇರಿದಂತೆ ಎಲ್ಲ ಸಾಕ್ಷ್ಯಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ವ್ಯಕ್ತಿಗಳ ಪಾತ್ರ, ಕುಟುಂಬಸ್ಥರು ಮಾಡಿರುವ ಆರೋಪಗಳು ಹಾಗೂ ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
