Home » News » ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ – 14 ಕಳ್ಳತನ ಪ್ರಕರಣ ಭೇದನೆ, 11 ಅಂತರಾಜ್ಯ ಖದೀಮರು ಬಂಧನ..

ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ – 14 ಕಳ್ಳತನ ಪ್ರಕರಣ ಭೇದನೆ, 11 ಅಂತರಾಜ್ಯ ಖದೀಮರು ಬಂಧನ..

by CityXPress
0 comments

ಗದಗ:
ಜಿಲ್ಲೆಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳಿಗೆ ತೆರೆ ಎಳೆದಿರುವ ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 14 ಕಳ್ಳತನ ಪ್ರಕರಣಗಳನ್ನು ಭೇದಿಸಿ 11 ಅಂತರಾಜ್ಯ ಖದೀಮರನ್ನು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರೋಹನ್ ಜಗದೀಶ್ ಮಾಹಿತಿ ನೀಡಿದರು.

ಬಂಧಿತರಿಂದ ಒಟ್ಟು ₹1 ಕೋಟಿ 26 ಲಕ್ಷ 53 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲೇ ಸುಮಾರು 703 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 4,337 ಗ್ರಾಂ ಬೆಳ್ಳಿಯ ಆಭರಣಗಳು ಸೇರಿವೆ. ಅಲ್ಲದೆ, ಕಳ್ಳತನಕ್ಕೆ ಬಳಸಲಾಗಿದ್ದ ಬೈಕ್, ಕಾರು ಹಾಗೂ ಗೂಡ್ಸ್ ವಾಹನಗಳನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.

ಪೊಲೀಸರ ತನಿಖೆಯಲ್ಲಿ ಹೊರಬಂದಿರುವ ಮಾಹಿತಿಯ ಪ್ರಕಾರ, ಈ ಅಂತರಾಜ್ಯ ಕಳ್ಳರ ಗುಂಪು ಅತ್ಯಂತ ಚತುರತೆಯಿಂದ ಕಳ್ಳತನ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಮುಸುಕು ಧರಿಸಿಕೊಂಡು, ಕೈಗವಸು (ಹ್ಯಾಂಡ್ ಗ್ಲೋವ್ಸ್) ಹಾಗೂ ಶೂಗಳನ್ನು ಧರಿಸಿ ಸಿಸಿ ಕ್ಯಾಮರಾಗಳಿಗೆ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಕಳ್ಳತನ ನಡೆಸಿ, ತಕ್ಷಣ ಅಲ್ಲಿಂದ ಪರಾರಿಯಾಗುತ್ತಿದ್ದರು.

banner

ಇನ್ನೂ ವಿಶೇಷವೆಂದರೆ, ಈ ಖದೀಮರು ನಗರ ಹೊರವಲಯದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಅಲ್ಲಿಂದ ರೈಲ್ವೆ ಹಳಿಗಳ ಮೂಲಕ ನಗರಕ್ಕೆ ಪ್ರವೇಶ ಮಾಡುತ್ತಿದ್ದರು. ಇದರಿಂದ ಪೊಲೀಸ್ ಹಾಗೂ ಸಾರ್ವಜನಿಕರ ಗಮನಕ್ಕೆ ಬಾರದಂತೆ ಕಳ್ಳತನ ನಡೆಸುವುದು ಇವರ ತಂತ್ರವಾಗಿತ್ತು.

ಗದಗ ಶಹರ, ಬೆಟಗೇರಿ ಹಾಗೂ ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲವಾರು ಕಳ್ಳತನ ಪ್ರಕರಣಗಳಿಗೆ ಈ ಗುಂಪೇ ಕಾರಣವೆಂದು ಪತ್ತೆಯಾಗಿದೆ.

ಪ್ಲಾಸ್ಟಿಕ್ ಹಾಗೂ ಚಿಂದಿ ಆಯುವವರಂತೆ ನಟಿಸಿ ಪ್ರದೇಶಗಳನ್ನು ಪರಿಶೀಲನೆ ನಡೆಸಿ, ನಂತರ ಸೂಕ್ತ ಸಮಯದಲ್ಲಿ ಕಳ್ಳತನ ಮಾಡಲು ಪ್ಲಾನ್ ಮಾಡುತ್ತಿದ್ದರು ಎಂಬುದೂ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ನಿರಂತರ ಶೋಧಕಾರ್ಯ ಮತ್ತು ತಾಂತ್ರಿಕ ತನಿಖೆಯ ಫಲವಾಗಿ ಈ ಅಂತರಾಜ್ಯ ಕಳ್ಳರ ಜಾಲವನ್ನು ಸಂಪೂರ್ಣವಾಗಿ ಬಯಲು ಮಾಡಲಾಗಿದೆ.

ಈ ಕಾರ್ಯಾಚರಣೆಯಿಂದ ಜಿಲ್ಲೆಯ ಜನತೆಗೆ ಭದ್ರತೆ ಬಗ್ಗೆ ವಿಶ್ವಾಸ ಹೆಚ್ಚಾಗಿದೆ.
ಗದಗ ಜಿಲ್ಲಾ ಪೊಲೀಸರ ಈ ಸಾಧನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb