Home » News » ರುದ್ರಭೂಮಿ ಸಮಸ್ಯೆ! ಅಂತ್ಯಸಂಸ್ಕಾರಕ್ಕೆ ಅವಕಾಶವಿಲ್ಲ..!ಗ್ರಾಮದ ಮಧ್ಯದಲ್ಲೇ ಚಿತೆ ಸಿದ್ಧಪಡಿಸಿದ ಗ್ರಾಮಸ್ಥರು..!

ರುದ್ರಭೂಮಿ ಸಮಸ್ಯೆ! ಅಂತ್ಯಸಂಸ್ಕಾರಕ್ಕೆ ಅವಕಾಶವಿಲ್ಲ..!ಗ್ರಾಮದ ಮಧ್ಯದಲ್ಲೇ ಚಿತೆ ಸಿದ್ಧಪಡಿಸಿದ ಗ್ರಾಮಸ್ಥರು..!

by CityXPress
0 comments

ಹೊಸೂರು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ – ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ಗದಗ: ರುದ್ರಭೂಮಿ ಸಮಸ್ಯೆ ತಾರಕಕ್ಕೇರಿ, ಮೃತರ ಅಂತ್ಯಸಂಸ್ಕಾರ ನಡೆಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮದ ಮಧ್ಯಭಾಗದಲ್ಲೇ ಚಿತೆ ಸಿದ್ಧಪಡಿಸಲು ಮುಂದಾದ ಘಟನೆ ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ ನಡೆದಿದೆ. ಘಟನೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಂತರ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಅನಾರೋಗ್ಯದಿಂದ ಮೃತಪಟ್ಟ 51 ವರ್ಷದ ಬಸವಣ್ಣೆಮ್ಮ ಬೊಳಣ್ಣವರ ಅವರ ಅಂತ್ಯಸಂಸ್ಕಾರಕ್ಕೆ ರುದ್ರಭೂಮಿ ಬಳಸಲು ಅವಕಾಶ ದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಮದ ಬಸ್ ನಿಲ್ದಾಣದ ಸಮೀಪವೇ ಚಿತೆ ಸಿದ್ಧಪಡಿಸಿ ಅಂತ್ಯಸಂಸ್ಕಾರ ನಡೆಸಲು ಮುಂದಾದರು.

ಗ್ರಾಮಸ್ಥರ ಆರೋಪದ ಪ್ರಕಾರ, ಗ್ರಾಮಕ್ಕೆ ರುದ್ರಭೂಮಿ ಇದ್ದರೂ ಆ ಜಾಗದ ಮಾಲೀಕರು ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಈ ಹಿಂದೆ ಗ್ರಾಮದವರು ಬಶೆಟ್ಟಿ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಆದರೆ ಈಗ ಜಮೀನಿನ ಮಾಲೀಕ ಚಂದ್ರು ಬಶೆಟ್ಟಿ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

banner

ಮೃತರ ಅಂತ್ಯಸಂಸ್ಕಾರಕ್ಕೂ ಅಡ್ಡಿಯಾಗಿರುವುದರಿಂದ ಕುಟುಂಬದವರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಯಿತು. “ಸತ್ತವರಿಗೂ ನೆಮ್ಮದಿ ಇಲ್ಲವೇ?” ಎಂದು ಗ್ರಾಮಸ್ಥರು ಪ್ರಶ್ನಿಸಿ, ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಶಾಶ್ವತ ರುದ್ರಭೂಮಿ ಒದಗಿಸುವಂತೆ ಹಲವು ಬಾರಿ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಘಟನೆಯ ಮಾಹಿತಿ ತಿಳಿದು ಸಹಾಯಕ ಆಯುಕ್ತ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಪರಿಸ್ಥಿತಿಯನ್ನು ಶಾಂತಗೊಳಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು.

ಹೊಸೂರು ಗ್ರಾಮದಲ್ಲಿ ರುದ್ರಭೂಮಿ ಸಮಸ್ಯೆ ಮತ್ತೆ ತಲೆದೋರಿರುವುದು ಜಿಲ್ಲಾಡಳಿತದ ಗಮನ ಸೆಳೆದಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb