Home » News » ಗದಗ ಪೊಲೀಸರ ಖಡಕ್ ಕಾರ್ಯಾಚರಣೆ: ರೌಡಿಗೆ ಗಡಿಪಾರು, ಸರಣಿ ಕಳ್ಳತನ ಪ್ರಕರಣಗಳು ಭೇದ – ₹4.73 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ!

ಗದಗ ಪೊಲೀಸರ ಖಡಕ್ ಕಾರ್ಯಾಚರಣೆ: ರೌಡಿಗೆ ಗಡಿಪಾರು, ಸರಣಿ ಕಳ್ಳತನ ಪ್ರಕರಣಗಳು ಭೇದ – ₹4.73 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ!

by CityXPress
0 comments


ರೌಡಿಶೀಟರ್ಗೆ ಜಿಲ್ಲೆ ತೊರೆಯುವ ಆದೇಶಮನೆಅಂಗಡಿ ಕಳ್ಳರ ಬಂಧನನಕಲಿ ಬಂಗಾರ ತೋರಿಸಿ ವಂಚನೆ ಮಾಡಿದ ಅಂತರರಾಜ್ಯ ಆರೋಪಿತರ ಸೆರೆಆಸ್ಪತ್ರೆಯ ತಾಮ್ರದ ಪೈಪ್ ಕಳ್ಳತನವೂ ಪತ್ತೆಗದಗ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ


ಗದಗ, ಜುಲೈ 15:
ಗದಗ ಜಿಲ್ಲಾ ಪೊಲೀಸ್ ಇಲಾಖೆ ಇತ್ತೀಚಿನ ದಿನಗಳಲ್ಲಿ ಅಪರಾಧ ನಿಯಂತ್ರಣಕ್ಕೆ ಕೈಗೊಂಡಿರುವ ನಿರಂತರ ಕಾರ್ಯಾಚರಣೆಗಳು ಗಮನಾರ್ಹ ಫಲಿತಾಂಶ ನೀಡಿದ್ದು, ರೌಡಿಶೀಟರ್‌ನನ್ನು ಜಿಲ್ಲೆಯಿಂದ ಗಡಿಪಾರು ಮಾಡುವುದರಿಂದ ಹಿಡಿದು, ಸರಣಿ ಕಳ್ಳತನ, ನಕಲಿ ಬಂಗಾರ ತೋರಿಸಿ ವಂಚನೆ ಹಾಗೂ ಸರ್ಕಾರಿ ಆಸ್ಪತ್ರೆಯ ತಾಮ್ರದ ಪೈಪ್ ಕಳವು ಪ್ರಕರಣಗಳವರೆಗೆ ಹಲವು ಮಹತ್ವದ ಪ್ರಕರಣಗಳನ್ನು ಭೇದಿಸುವ ಮೂಲಕ ಅಪರಾಧಿಗಳಿಗೆ ಕಠಿಣ ಸಂದೇಶ ರವಾನಿಸಿದೆ.

ವರದಿ:ಮಹಲಿಂಗೆಶ ಹಿರೇಮಠ.ಗದಗ

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಮಾರ್ಗದರ್ಶನದಲ್ಲಿ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ಆರೋಪಿತರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಕಳುವಾದ ಆಸ್ತಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

banner

ರೌಡಿಶೀಟರ್ ಪ್ರಕಾಶ ಜಿಲ್ಲೆಯಿಂದ ಗಡಿಪಾರು

ಗಲಭೆ, ಜೀವ ಬೆದರಿಕೆ, ಜಾತಿ ನಿಂದನೆ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ರೌಡಿಶೀಟರ್ ಪ್ರಕಾಶನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದವು. ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರೂ ತನ್ನ ವರ್ತನೆಯಲ್ಲಿ ಯಾವುದೇ ಬದಲಾವಣೆ ತರದೆ ಅಪರಾಧ ಚಟುವಟಿಕೆ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯ ಪ್ರಸ್ತಾವನೆ ಮೇರೆಗೆ ಕೂಲಂಕಷ ವಿಚಾರಣೆ ನಡೆಸಿ ಗದಗ ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶ ಜಾರಿಗೊಳಿಸಲಾಗಿದೆ.

ಪ್ರಕಾಶ ವಿರುದ್ಧ 2024ರಲ್ಲಿ ಗಲಭೆ, ಹಲ್ಲೆ, ಜೀವ ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎರಡು ಗಂಭೀರ ಪ್ರಕರಣಗಳು ದಾಖಲಾಗಿವೆ.

ಜಿಲ್ಲಾ ಪೊಲೀಸ್ ಇಲಾಖೆ, ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರಿಗೆ ಇದು ಸ್ಪಷ್ಟ ಎಚ್ಚರಿಕೆಯಾಗಿದೆ ಎಂದು ತಿಳಿಸಿದ್ದು, ಮುಂದೆಯೂ ಇಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.


ಲಕ್ಷ್ಮೇಶ್ವರದಲ್ಲಿ ಸರಣಿ ಕಳ್ಳತನ ಮತ್ತು ನಕಲಿ ಬಂಗಾರ ವಂಚನೆ ಪ್ರಕರಣ ಭೇದ

ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ನಡೆದ ನಾಲ್ಕು ವಿಭಿನ್ನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದವು.

ಭಾನು ಮಾರ್ಕೆಟ್‌ನಲ್ಲಿರುವ ಎರಡು ಅಂಗಡಿಗಳ ಶಟರ್ ಮುರಿದು ಕಳ್ಳತನ, ಸೊಪ್ಪಿನಕೇರಿಯ ಮನೆಯ ಬೀಗ ಮುರಿದು ಕಳ್ಳತನ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ನಕಲಿ ಬಂಗಾರದ ತುಂಡು ತೋರಿಸಿ ಸಾರ್ವಜನಿಕರಿಗೆ ವಂಚನೆ ನಡೆಸಿದ ಪ್ರಕರಣಗಳು ದಾಖಲಾಗಿದ್ದವು.

ಈ ಪ್ರಕರಣಗಳ ತನಿಖೆಗೆ ಎಸ್‌ಪಿ ರೋಹನ್ ಜಗದೀಶ ಹಾಗೂ ಡಿಎಸ್‌ಪಿ ಮರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತನಿಖೆ ವೇಳೆ ಗೋವಾ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಮೈನುದ್ದೀನ್ ಕಿಲ್ಲೇದಾರ, ಕಾನೂನು ಸಂಘರ್ಷಕ್ಕೊಳಗಾದ ಓರ್ವ ಬಾಲಕ ಹಾಗೂ ಆಂಧ್ರಪ್ರದೇಶ ಮೂಲದ ತಮ್ಮಿಶೆಟ್ಟಿ ಲಕ್ಷ್ಮೀ @ ತಿರುಪತಮ್ಮ ಅವರನ್ನು ಬಂಧಿಸಲಾಗಿದೆ.

ಆರೋಪಿತರಿಂದ 170 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹3.90 ಲಕ್ಷ ನಗದು ಸೇರಿದಂತೆ ಒಟ್ಟು₹4.18 ಲಕ್ಷ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ನಾಗರಾಜ ಗಡದ, ಟಿ.ಕೆ. ರಾಠೋಡ, ಸೂರ್ಯಕಾಂತ ಗುಗ್ಗರಿ ಸೇರಿದಂತೆ ಲಕ್ಷ್ಮೇಶ್ವರ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದು, ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.


ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪೈಪ್ ಕಳ್ಳತನವೂ ಪತ್ತೆ

ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗೋಡೆಗಳಿಗೆ ಅಳವಡಿಸಲಾಗಿದ್ದ ಸುಮಾರು 250 ಮೀಟರ್ ಉದ್ದದ ತಾಮ್ರದ ಪೈಪ್ಗಳನ್ನುಕಳವು ಮಾಡಲಾಗಿತ್ತು.

ಸುಮಾರು ₹1.37 ಲಕ್ಷ ಮೌಲ್ಯದ 250 ಮೀಟರ್ ಉದ್ದದ ತಾಮ್ರದ ಪೈಪ್ ಪ್ರಕರಣ ದಾಖಲಾದ ಬಳಿಕ ಸಿಪಿಐ ಧೀರಜ್ ಬಿ. ಸಿಂಧೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು.

ತನಿಖೆಯಲ್ಲಿ ಯಲ್ಲಪ್ಪ ಗುಡಿಮನಿ ಹಾಗೂ ಮಂಜುನಾಥ ಚವಡಿ ಎಂಬ ಇಬ್ಬರು ಆರೋಪಿತರನ್ನು ಗದಗ ನಗರದ ವೀರನಾರಾಯಣ ಬಡಾವಣೆಯಲ್ಲಿ ಪತ್ತೆಹಚ್ಚಿ ಬಂಧಿಸಲಾಯಿತು.

ಅವರಿಂದ ಕಳುವಾದ ಪೈಪ್‌ಗಳ ಪೈಕಿ 100 ಮೀಟರ್ ಉದ್ದದ ತಾಮ್ರದ ಪೈಪ್(ಅಂದಾಜು₹55 ಸಾವಿರಮೌಲ್ಯ) ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.


ಪೊಲೀಸರ ನಿರಂತರ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಪರಾಧ ಪ್ರಕರಣಗಳನ್ನು ಒಂದರ ಹಿಂದೆ ಒಂದರಂತೆ ಭೇದಿಸುವ ಮೂಲಕ ಗದಗ ಜಿಲ್ಲಾ ಪೊಲೀಸರು ಅಪರಾಧಿಗಳಿಗೆ ಕಠಿಣ ಸಂದೇಶ ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ರೌಡಿಗಳ ವಿರುದ್ಧ ಗಡಿಪಾರು ಕ್ರಮ, ಕಳ್ಳತನ ಪ್ರಕರಣಗಳ ಶೀಘ್ರ ಪತ್ತೆ, ಅಂತರರಾಜ್ಯ ಆರೋಪಿತರ ಬಂಧನ ಹಾಗೂ ಸರ್ಕಾರಿ ಆಸ್ತಿಯ ಕಳ್ಳತನ ಪ್ರಕರಣವನ್ನು ಭೇದಿಸಿರುವುದು ಪೊಲೀಸ್ ಇಲಾಖೆಯ ದಕ್ಷತೆಗೆ ಸಾಕ್ಷಿಯಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ನೇತೃತ್ವದಲ್ಲಿ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಸಮನ್ವಯದ ಕಾರ್ಯಾಚರಣೆ ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸವನ್ನು ಹೆಚ್ಚಿಸಿದ್ದು, ಅಪರಾಧ ಚಟುವಟಿಕೆಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಮುಂದೆಯೂ ಇದೇ ರೀತಿಯ ಕಟ್ಟುನಿಟ್ಟಿನ ಕ್ರಮ ಮುಂದುವರಿಸುವ ಸಂದೇಶ ನೀಡಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb