ಜ್ಞಾನ ಜ್ಯೋತಿಯಿಂದ ಸಮಾಜ ಬೆಳಗಲಿ : ಡಾ. ಮಾನಸ
ಗದಗ: 15: ಜ್ಞಾನವೇ ಸಮಾಜದ ಪ್ರಗತಿಯ ಮೂಲವಾಗಿದ್ದು, ಮನೆಮನೆಗೂ ಅರಿವಿನ ಬೆಳಕು ತಲುಪಿಸುವ ಉದ್ದೇಶದಿಂದ “ಮನೆಗೊಂದು ಗ್ರಂಥಾಲಯ” ಯೋಜನೆ ಜಾರಿಗೊಳ್ಳುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ, ಮನೆಗೊಂದು ಗ್ರಂಥಾಲಯ” ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಅಧ್ಯಕ್ಷರಾದ ಡಾ. ಬಸವರಾಜ ವಿ ಬಳ್ಳಾರಿ ಇವರ ಗದಗ ನಗರದ ಅಭಿನವ ನಗರದಲ್ಲಿನ ನಿವಾಸದಲ್ಲಿ ಬುಧವಾರ “ಮನೆಗೊಂದು ಗ್ರಂಥಾಲಯ ಅಭಿಯಾನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇದು ಮೂರನೇ ಕಾರ್ಯಕ್ರಮವಾಗಿದ್ದು, ಮೂರನೇ ಗ್ರಂಥಾಲಯ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳು ನಮ್ಮೆಲ್ಲರಿಗೂ ದಾರಿದೀಪವಾಗಬೇಕು ಎಂದು ಅಭಿಪ್ರಾಯಪಟ್ಟರು.
ಡಾ. ಅಂಬೇಡ್ಕರ್ ಅವರು ನೀಡಿದ ಸಂದೇಶವನ್ನು ಉಲ್ಲೇಖಿಸಿದ ಅವರು, “ಎರಡು ರೂಪಾಯಿ ಗಳಿಸಿದರೆ, ಒಂದು ಬದುಕಿಗೆ, ಮತ್ತೊಂದು ಪುಸ್ತಕ ಖರೀದಿಗೆ ಬಳಸಬೇಕು” ಎಂಬ ಮಾತು ಜ್ಞಾನ ಸಂಪಾದನೆಯ ಅಗತ್ಯತೆಯನ್ನು ಸಾರುತ್ತದೆ. ಇದು ಸಮಾಜದಲ್ಲಿ ಪಾಲನೆಯಾಗಬೇಕಿ ಎಂದರು.

ವಿಶ್ವಗುರು ಬಸವಣ್ಣನವರ ವೈಜ್ಞಾನಿಕ ಚಿಂತನೆ
ಬಸವಣ್ಣನವರು ಭಕ್ತಿ ಹಾಗೂ ಅರಿವಿನ ನಡುವಿನ ಸಂಬಂಧವನ್ನು ವೈಜ್ಞಾನಿಕವಾಗಿ ವಿವರಿಸಿದ್ದು, ಅಜ್ಞಾನ ಹಾಗೂ ಭಯದ ಭಕ್ತಿ ಬೇಡವೆಂದು ಹೇಳಿದರು. ಲಿಂಗದ ಮೂಲಕ ದೇವರು ನಮ್ಮೊಳಗೇ ಇದ್ದಾನೆ ಎಂಬ ಅರಿವನ್ನು ಮೂಡಿಸಿ, ವಚನಗಳ ಮೂಲಕ ಜ್ಞಾನ ಸಂಗ್ರಹಿಸಿಕೊಳ್ಳಲು ಪ್ರೇರೇಪಿಸಿದರು ಎಂದು ತಿಳಿಸಿದರು.
ಅರಿವಿನ ಜ್ಯೋತಿ ನಮ್ಮಲ್ಲೇ ಇರಲಿ
“ನಮ್ಮ ಅರಿವಿನ ಜ್ಯೋತಿ ನಮ್ಮಲ್ಲೇ ಇರಬೇಕು, ಅದನ್ನು ಇತರರ ಕೈಗೆ ಒಪ್ಪಿಸಬಾರದು” ಎಂಬ ಸಂದೇಶವನ್ನು ನೀಡಿದ ಡಾ. ಮಾನಸ, ಸ್ವತಂತ್ರ ಚಿಂತನೆ ಮತ್ತು ಜ್ಞಾನವೇ ವ್ಯಕ್ತಿಯ ಬಲ ಎಂದು ಹೇಳಿದರು.
“ಮನೆಗೊಂದು ಗ್ರಂಥಾಲಯ” ಯೋಜನೆಯ ಪ್ರಮುಖ ಉದ್ದೇಶವೆಂದರೆ ಜ್ಞಾನದ ಬೆಳಕು ಮನೆಮನೆಗೆ ತಲುಪಿಸುವುದು, ಅರಿವಿನ ಅಂಗಳವನ್ನು ವಿಸ್ತರಿಸುವುದು, ಅಜ್ಞಾನದ ಅಡ್ಡಗೋಡೆಗಳನ್ನು ಒಡೆಯುವುದು.
“ಮನೆ ಬೆಳಗಬೇಕಾದರೆ ದೀಪ ಹಚ್ಚಬೇಕು, ಮನ ಬೆಳಗಬೇಕಾದರೆ ಜ್ಞಾನ ಜ್ಯೋತಿ ಹಚ್ಚಬೇಕು” ಎಂದು ಅವರು ಹೇಳಿದರು.
ಹಿಂದೆ ಸಂಸ್ಕೃತ ಆಡಳಿತ ಭಾಷೆಯಾಗಿದ್ದ ಕಾರಣ ವಾಲ್ಮಿಕಿ ಹಾಗೂ ಬುದ್ಧರಂತಹ ಮಹಾನ್ ವ್ಯಕ್ತಿಗಳು ಬೆಳಕಿಗೆ ಬಂದರು. ಈಗ ಪರಿಸ್ಥಿತಿ ಬದಲಾಗಿದ್ದು, ಮನಸ್ಥಿತಿಯೂ ಬದಲಾಗಬೇಕು. ಈ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಅವಶ್ಯಕ ಎಂದು ಡಾ. ಮಾನಸರವರು ಪುನರುಚ್ಚರಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ರವಿ ಗುಂಜೀಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನದ ವಿಸ್ತರಣೆ ಮತ್ತು ವೈಚಾರಿಕ ಬೆಳವಣಿಗೆಗೆ ಗ್ರಂಥಗಳು ಪೂರಕವಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಾಹಿತ್ಯ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ನಾವು ಮನೆಯಲ್ಲಿ ದೇವರಿಗಾಗಿ ಪ್ರತ್ಯೇಕವಾಗಿ ಹೇಗೆ ದೇವರ ಕೋಣೆಯನ್ನು ಮೀಸಲಿಡುತ್ತೇವೆಯೋ, ಹಾಗೆಯೇ ಮನೆಯಲ್ಲಿ ಐದೋ ಹತ್ತೋ ಪುಸ್ತಕಗಳನ್ನಿಟ್ಟುಕೊಂಡು ಒಂದು ಪುಟ್ಟ ಗ್ರಂಥಾಲಯ ಮಾಡಿಕೊಳ್ಳಬೇಕು. ಅದು ನಮ್ಮ ಪಾಲಿನ ಜ್ಞಾನದ ದೇವಾಲಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸಾಹಿತ್ಯದ ಮಹತ್ವ ಸಮಾಜದಲ್ಲಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಬಸವಣ್ಣ, ಅಂಬೇಡ್ಕರ್, ಗಾಂಧೀಜಿಯವರಂತಹ ದಾರ್ಶನಿಕರ ವಿಚಾರಗಳು ದಾರಿದೀಪವಾಗಿವೆ. ಗ್ರಂಥಾಲಯಗಳು ಇಂತಹ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೇಂದ್ರಗಳಾಗಬೇಕು ಎಂದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರ ಮನೆಯಲ್ಲಿಯೂ ಸಣ್ಣದೊಂದು ಗ್ರಂಥಾಲಯವಿದ್ದರೆ ಆ ಮನೆಯಲ್ಲಿ ಜ್ಞಾನದ ದೀಪ ಬೆಳಗಲು ಸಾಧ್ಯ. ಪುಸ್ತಕ ಓದುವ ಹವ್ಯಾಸ ಕೇವಲ ವ್ಯಕ್ತಿಯ ಬೆಳವಣಿಗೆಯಲ್ಲದೆ, ಸಮಾಜದ ಪ್ರಗತಿಗೂ ಪೂರಕ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಬಸವರಾಜ ಬಳ್ಳಾರಿಯವರ ಮನೆಯಲ್ಲಿ ಗ್ರಂಥಾಲಯ ಆಗಿರುವುದು ಚೈತನ್ಯದಾಯಕ ಕಾರ್ಯ ಎಂದು ಬಣ್ಣಿಸಿದರು. ಡಾ. ಬಸವರಾಜ ಬಳ್ಳಾರಿ ಅವರ ಮನೆಯಲ್ಲಿ ಗ್ರಂಥಾಲಯ ಸ್ಥಾಪನೆ ನಿಜಕ್ಕೂ ಸಂತೋಷ ತಂದಿದೆ. ಇದರಿಂದ ಮನೆಗೆ ಆಗಮಿಸಿದ ಅತಿಥಿಗಳು, ನೆರೆ ಹೊರೆಯವರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸಂಚಾಲಕ ಸಂತೋಷ ಅಂಗಡಿ ಪ್ರಾಸ್ತಾವಿಕ ಮಾತನಾಡಿ,ಜಿಲ್ಲಾ ಜಾಗೃತಿ ಸಮಿತಿ ಸಹಯೋಗ ಸಹಕಾರದೊಂದಿಗೆ ರಾಜ್ಯದಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಆರಂಬಿಸುವ ಗುರಿಯನ್ನು ಅಧ್ಯಕ್ಷ ಡಾ. ಮಾನಸ ಅವರು ಹಮ್ಮಿಕೊಂಡಿದ್ದಾರೆ, ಅದನ್ನು ಖಂಡಿತ ಮಾಡಿಯೇ ಮಾಡುತ್ತಾರೆ ಎಂಬ ದೃಡ ನಂಬಿಕೆ ಅವರದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಮಾನಸ, ಡಾ. ರವಿ ಗುಂಜೀಕರ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರುಗಳಿಗೆ ಸನ್ಮಾನಿಸಲಾಯಿತು.
ಕಾರಗಯಕ್ರಮದಲ್ಲಿ ಸಂಚಾಲಕ ಎ ಎಸ್ ಮಕಾಂದಾರ, ಜಾನಪದ ಸಾಹಿತ್ಯ ಪರಿಷತ್ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಕೆ ಎಪ್ ಹಳ್ಯಾಳ, ಎಚ್ ಎಂ ಶರೀಪನವರ, ಅಶೋಕ ಬರಗುಂಡಿ, ಮುತ್ತು ಬಳಿಯಲಿ, ನಿವೃತ್ತ ಶಿಕ್ಷಕ ಕೆ.ಎಫ್. ಬಳ್ಳಾರಿ, ಜಿ ಪಂ ಮಾಜಿ ಕೋಶಾಧ್ಯಕ್ಷ ಆರ್.ಎಂ. ನಿಂಬನಾಯ್ಕರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ, ಪೋತಬಾಳ, ನೌಕರರ ಸಂಘದ ಪದಾಧಿಕಾರಿಗಳಾದ ಎಂ ಎಂ ನಿಟ್ಟಾಲಿ, ಸಿದ್ದಪ್ಪ ಲಿಂಗದಾಳ, ಲಕ್ಷಣರೆಡ್ಡಿ ಮುದಗಣ್ಣವರ, ರಾಜು ಕಂತಿಗೊಣ್ಣವರ, ರಾಜಕುಮಾರ ಸೊಪಡ್ಲ ಸೇರಿದಂತೆ ಅನೇಕ ಸಾಹಿತ್ಯ ಅಭಿಮಾನಿಗಳು ಉಪಸ್ಥಿತರಿದ್ದರು.
