Home » News » ಗದಗ: ಪ್ರೊ. ಎಸ್.ವೈ. ಚಿಕ್ಕಟ್ಟಿ ಗುರುಗಳ ಅಭಿನಂದನ ಗ್ರಂಥ ‘ಶಿವರಾಯ’ ಲೋಕಾರ್ಪಣೆ: ಗುರುವಿನ ಸೇವೆ ಸಮಾಜದ ಸೇವೆ; ಗುರುವಿನ ಸಾಧನೆ ಪೀಳಿಗೆಯ ಸಾಧನೆ: ಸೋಮಲಿಂಗ ಪಾಟೀಲ

ಗದಗ: ಪ್ರೊ. ಎಸ್.ವೈ. ಚಿಕ್ಕಟ್ಟಿ ಗುರುಗಳ ಅಭಿನಂದನ ಗ್ರಂಥ ‘ಶಿವರಾಯ’ ಲೋಕಾರ್ಪಣೆ: ಗುರುವಿನ ಸೇವೆ ಸಮಾಜದ ಸೇವೆ; ಗುರುವಿನ ಸಾಧನೆ ಪೀಳಿಗೆಯ ಸಾಧನೆ: ಸೋಮಲಿಂಗ ಪಾಟೀಲ

by CityXPress
0 comments

ಗದಗ: ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರ ಶೈಕ್ಷಣಿಕ ಪಯಣ, ಸೇವಾಮನೋಭಾವ ಹಾಗೂ ಸಾಧನೆಗಳನ್ನು ದಾಖಲಿಸಿರುವ ಅಭಿನಂದನ ಗ್ರಂಥ ‘ಶಿವರಾಯ’ ಗದಗದಲ್ಲಿ ಲೋಕಾರ್ಪಣೆಗೊಂಡಿತು.

ಬಿಜ್ಜರಗಿಯ ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳ ಸಹೋದರ ಸೋಮಲಿಂಗ ಪಾಟೀಲ ಅವರು ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿ ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿರುವ ಚಿಕ್ಕಟ್ಟಿ ಗುರುಗಳ ಸೇವೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಗೌರವಿಸಿರುವುದು ಅತ್ಯಂತ ಅರ್ಥಪೂರ್ಣ ಕಾರ್ಯವಾಗಿದೆ ಎಂದರು.

ಚಿಕ್ಕಟ್ಟಿ ಗುರುಗಳು ಕೇವಲ ಶಿಕ್ಷಕರಾಗಿ ಕಾರ್ಯನಿರ್ವಹಿಸದೆ, ಜ್ಞಾನವನ್ನು ಹಂಚಿದ ಗುರು, ಮೌಲ್ಯಗಳನ್ನು ಬಿತ್ತಿದ ಮಾರ್ಗದರ್ಶಕ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದ ಪ್ರೇರಕ ಶಕ್ತಿಯಾಗಿದ್ದಾರೆ. ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳ ತತ್ವ ಹಾಗೂ ಆದರ್ಶಗಳನ್ನು ಪಾಲಿಸುತ್ತಾ ಉತ್ತರ ಕರ್ನಾಟಕದಲ್ಲಿಯೇ ಪ್ರಥಮವಾಗಿ ವಿಜ್ಞಾನ ಪಾರ್ಕ್ ಹಾಗೂ ಪಿರಾಮಿಡ್ ತರಗತಿಗಳನ್ನು ಸ್ಥಾಪಿಸಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರ ನೀಡುತ್ತಿರುವುದು ಅವರ ವಿಶಿಷ್ಟ ಸಾಧನೆಯಾಗಿದೆ ಎಂದು ಹೇಳಿದರು.

‘ಶಿವರಾಯ’ ಗ್ರಂಥವು ಕೇವಲ ಅಭಿನಂದನಾ ಗ್ರಂಥವಲ್ಲ. ಅದು ಚಿಕ್ಕಟ್ಟಿ ಗುರುಗಳ ಶೈಕ್ಷಣಿಕ ಪಯಣದ ದಾಖಲೆಯಾಗಿದ್ದು, ಅವರ ಸೇವೆಗೆ ಸಮಾಜ ಸಲ್ಲಿಸುತ್ತಿರುವ ಕೃತಜ್ಞತೆಯ ಸಂಕೇತವಾಗಿದೆ. ಅವರು ಬಿತ್ತಿದ ಜ್ಞಾನ ಮತ್ತು ಸಂಸ್ಕಾರದ ಬೀಜಗಳು ಮುಂದಿನ ಪೀಳಿಗೆಗಳಲ್ಲಿಯೂ ಅರಳಿ ಸಮಾಜವನ್ನು ಬೆಳಗಿಸಲಿ ಎಂದು ಆಶಿಸಿದರು.

banner

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ, ಶಿಸ್ತು, ಸರಳತೆ, ಮಾನವೀಯತೆ ಹಾಗೂ ದೂರದೃಷ್ಟಿಯ ಮೂಲಕ ಅನೇಕ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಚಿಕ್ಕಟ್ಟಿ ಗುರುಗಳ ಅಭಿನಂದನ ಗ್ರಂಥ ಲೋಕಾರ್ಪಣೆ ಸಂತಸದ ಹಾಗೂ ಸ್ಮರಣೀಯ ಸಂದರ್ಭವಾಗಿದೆ ಎಂದರು.

ಚಿಕ್ಕಟ್ಟಿ ಗುರುಗಳ ಮಾರ್ಗದರ್ಶನ ಪಡೆದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಿರುವುದು ಅವರ ಶೈಕ್ಷಣಿಕ ಸೇವೆಯ ನಿಜವಾದ ಪ್ರತಿಫಲವಾಗಿದೆ. ‘ಶಿವರಾಯ’ ಗ್ರಂಥವು ಅವರ ಶೈಕ್ಷಣಿಕ ಪಯಣದ ಸಾಕ್ಷಿಯಾಗಿದ್ದು, ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿದೆ ಎಂದು ಹೇಳಿದರು.

ಅಭಿನಂದನ ಗ್ರಂಥದ ಸಂಪಾದಕ ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ, ಚಿಕ್ಕಟ್ಟಿ ಗುರುಗಳ ಶೈಕ್ಷಣಿಕ ಸೇವೆ, ಸರಳತೆ, ಶಿಸ್ತು, ಮಾನವೀಯತೆ ಹಾಗೂ ಸೇವಾಮನೋಭಾವದಿಂದ ಅಸಂಖ್ಯಾತ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದ ವ್ಯಕ್ತಿತ್ವವನ್ನು ಗ್ರಂಥ ರೂಪದಲ್ಲಿ ದಾಖಲಿಸುವುದು ಗೌರವದ ಜೊತೆಗೆ ಜವಾಬ್ದಾರಿಯ ಕೆಲಸವಾಗಿದೆ ಎಂದರು.

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವ ಪ್ರಕ್ರಿಯೆಯಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಮಹತ್ತರ ಸಾಧನವಾಗಿದೆ. ಚಿಕ್ಕಟ್ಟಿ ಗುರುಗಳು ಶಿಕ್ಷಣವನ್ನು ವೃತ್ತಿಯಾಗಿ ಸ್ವೀಕರಿಸದೆ ಸಾಧನೆ ಹಾಗೂ ಸಮಾಜ ಸೇವೆಯ ಮಾರ್ಗವಾಗಿ ಕಂಡವರು. ಅವರ ವ್ಯಕ್ತಿತ್ವದಲ್ಲಿ ಜ್ಞಾನ, ಅನುಭವ ಹಾಗೂ ಮಾನವೀಯ ಕಾಳಜಿ ಒಂದಾಗಿ ಬೆರೆತಿವೆ ಎಂದು ಹೇಳಿದರು.

ಸಹ ಸಂಪಾದಕ ಪ್ರೊ. ಶ್ರೀಶೈಲ ಶಿ. ಬಡಿಗೇರ, ಪ್ರಕಾಶಕರು, ಸಹೋದ್ಯೋಗಿಗಳು, ಹಿತೈಷಿಗಳು, ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಸಹಕಾರದಿಂದ ‘ಶಿವರಾಯ’ ಗ್ರಂಥ ರೂಪುಗೊಂಡಿದೆ ಎಂದು ತಿಳಿಸಿದರು.

ಗ್ರಂಥದ ಪ್ರಕಾಶಕರಾದ ಪುಣೆಯ ಸಂತಸಾಯಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಸ್.ಎನ್. ಢವಳೇಶ್ವರ ಮಾತನಾಡಿ, ಒಬ್ಬ ಶಿಕ್ಷಕ ಪಾಠವನ್ನು ಮಾತ್ರ ಬೋಧಿಸುವುದಿಲ್ಲ; ಆತ ಬದುಕನ್ನು ರೂಪಿಸುತ್ತಾನೆ. ಒಬ್ಬ ಉತ್ತಮ ಗುರು ವಿದ್ಯಾರ್ಥಿಯ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಆತನ ವ್ಯಕ್ತಿತ್ವವನ್ನು ಕಟ್ಟುತ್ತಾನೆ. ಈ ಅರ್ಥದಲ್ಲಿ ಚಿಕ್ಕಟ್ಟಿ ಗುರುಗಳ ಶೈಕ್ಷಣಿಕ ಸೇವೆ ಮಾದರಿಯಾಗಿದೆ ಎಂದರು.

ಚಿಕ್ಕಟ್ಟಿ ಗುರುಗಳ ಸಾಧನೆಯ ಹಿಂದೆ ಅವರ ಧರ್ಮಪತ್ನಿ ಶ್ರೀಮತಿ ಲತಾ ಎಸ್. ಚಿಕ್ಕಟ್ಟಿ ಅವರ ಪ್ರೋತ್ಸಾಹ ಹಾಗೂ ಪರಿಶ್ರಮವೂ ಇದೆ ಎಂದು ಸ್ಮರಿಸಿದ ಅವರು, ಚಿಕ್ಕಟ್ಟಿ ಗುರುಗಳು ಬಿತ್ತಿದ ಜ್ಞಾನ ಮತ್ತು ಸಂಸ್ಕಾರದ ಬೀಜಗಳು ಅನೇಕ ಪೀಳಿಗೆಗಳಲ್ಲಿ ಫಲ ನೀಡಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಹುಲಕೋಟಿ ರೇಡಿಯೊ ಕೇಂದ್ರದ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಜೆ.ಕೆ. ಜಮಾದರ ಮಾತನಾಡಿ, ಚಿಕ್ಕಟ್ಟಿ ಗುರುಗಳ ಅಭಿನಂದನ ಗ್ರಂಥ ಲೋಕಾರ್ಪಣೆ ಕೇವಲ ಪುಸ್ತಕ ಬಿಡುಗಡೆ ಕಾರ್ಯಕ್ರಮವಲ್ಲ. ಒಬ್ಬ ಶ್ರೇಷ್ಠ ಶಿಕ್ಷಣ ಸೇವಕರ ಬದುಕು ಮತ್ತು ಸಾಧನೆಗೆ ಸಮಾಜ ಸಲ್ಲಿಸುತ್ತಿರುವ ಗೌರವದ ಸಾರ್ಥಕ ಕ್ಷಣವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಅವರು, ಚಿಕ್ಕಟ್ಟಿ ಗುರುಗಳು ಜ್ಞಾನ ಬೋಧಿಸಿದ ಶಿಕ್ಷಕರಷ್ಟೇ ಅಲ್ಲದೆ ಶಿಸ್ತು, ಸಂಸ್ಕಾರ, ಮೌಲ್ಯಗಳು, ಸಮಯ ಪ್ರಜ್ಞೆ ಹಾಗೂ ಮಾನವೀಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದ ಮಾರ್ಗದರ್ಶಕರಾಗಿದ್ದಾರೆ ಎಂದರು.

ವಿದ್ಯಾದಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಇಂತಹ ಗ್ರಂಥಗಳು ವ್ಯಕ್ತಿಯ ಸಾಧನೆಯನ್ನು ದಾಖಲಿಸುವುದರ ಜೊತೆಗೆ ಶೈಕ್ಷಣಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತವೆ. ಜ್ಞಾನಕ್ಕೆ ಸಂಸ್ಕಾರ, ಪ್ರತಿಭೆಗೆ ವಿನಯ ಹಾಗೂ ಯಶಸ್ಸಿಗೆ ಮಾನವೀಯತೆ ಸೇರಿದಾಗ ಮಾತ್ರ ಶಿಕ್ಷಣ ಸಂಪೂರ್ಣವಾಗುತ್ತದೆ. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಚಿಕ್ಕಟ್ಟಿ ಗುರುಗಳು ಎಂದು ಹೇಳಿದರು.

ವಿಶ್ರಾಂತ ಪ್ರಾಚಾರ್ಯ ಕೆ.ಎಚ್. ಬೇಲೂರ ಮಾತನಾಡಿ, ಒಬ್ಬ ಶಿಕ್ಷಕ ಪಾಠ ಮಾಡಬಹುದು; ಆದರೆ ಒಬ್ಬ ಗುರು ಬದುಕನ್ನು ರೂಪಿಸುತ್ತಾನೆ. ಚಿಕ್ಕಟ್ಟಿ ಗುರುಗಳು ಈ ಎರಡೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರ ಬೋಧನೆಯಲ್ಲಿ ಜ್ಞಾನ, ಮಾತಿನಲ್ಲಿ ಮಾರ್ಗದರ್ಶನ, ನಡೆ-ನುಡಿಯಲ್ಲಿ ಶಿಸ್ತು ಹಾಗೂ ಹೃದಯದಲ್ಲಿ ವಿದ್ಯಾರ್ಥಿಗಳ ಮೇಲಿನ ಕಾಳಜಿ ಇತ್ತು ಎಂದರು.

‘ನಡೆದಾಡುವ ಮಾನವ ಕಂಪ್ಯೂಟರ್’ ಖ್ಯಾತಿಯ ಬಸವರಾಜ ಉಮ್ರಾಣಿ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗುರುವಿನ ಮಾನವೀಯ ಸ್ಪರ್ಶಕ್ಕೆ ಪರ್ಯಾಯವಿಲ್ಲ. ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಆತನ ಮನಸ್ಸನ್ನು ಅರ್ಥಮಾಡಿಕೊಂಡು ಬದುಕಿನ ದಾರಿಯಲ್ಲಿ ಕೈಹಿಡಿದು ನಡೆಸುವ ಕಾರ್ಯವನ್ನು ನಿಜವಾದ ಗುರು ಮಾತ್ರ ಮಾಡಬಲ್ಲನು. ಚಿಕ್ಕಟ್ಟಿ ಗುರುಗಳು ಅಂತಹ ನಿಜವಾದ ಗುರುತ್ವದ ಪ್ರತೀಕ ಎಂದು ಹೇಳಿದರು.

ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಸ್.ವೈ. ಚಿಕ್ಕಟ್ಟಿ ಮಾತನಾಡಿ, ಅಭಿನಂದನ ಗ್ರಂಥದ ಸಂಪಾದಕರಾದ ಐ.ಕೆ. ಕಮ್ಮಾರ, ಸಹ ಸಂಪಾದಕ ಪ್ರೊ. ಶ್ರೀಶೈಲ ಶಿ. ಬಡಿಗೇರ ಹಾಗೂ ಕಾಲೇಜಿನ ಉಪನ್ಯಾಸಕರು ಗ್ರಂಥದ ರೂಪುಗೊಳ್ಳುವಿಕೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಒಂದು ಶಿಕ್ಷಣ ಸಂಸ್ಥೆಯ ಯಶಸ್ಸಿನ ಹಿಂದೆ ಕಟ್ಟಡಗಳು, ಸೌಲಭ್ಯಗಳು ಹಾಗೂ ತಂತ್ರಜ್ಞಾನಗಳಿಗಿಂತ ಉತ್ತಮ ಶಿಕ್ಷಕರ ಸಮರ್ಪಿತ ಸೇವೆಯೇ ಮುಖ್ಯ. ಶಿಕ್ಷಕರಿಂದಲೇ ಸಂಸ್ಥೆಗೆ ಹೆಸರು ಬರುತ್ತದೆ, ವಿದ್ಯಾರ್ಥಿಗಳಿಗೆ ದಿಕ್ಕು ಸಿಗುತ್ತದೆ ಹಾಗೂ ಸಮಾಜಕ್ಕೆ ಉತ್ತಮ ನಾಗರಿಕರು ದೊರೆಯುತ್ತಾರೆ ಎಂದು ಹೇಳಿದರು.

ಸಮಯಪಾಲನೆ, ಶಿಸ್ತು, ಪರಿಶ್ರಮ ಹಾಗೂ ಮೌಲ್ಯಗಳು ಶಿಕ್ಷಣದ ಗುಣಮಟ್ಟಕ್ಕೆ ಅತ್ಯಂತ ಅಗತ್ಯ. ಕಳೆದುಹೋದ ಹಣ ಅಥವಾ ವಸ್ತುಗಳನ್ನು ಮತ್ತೆ ಪಡೆಯಬಹುದು; ಆದರೆ ಕಳೆದುಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಮಯದ ಮಹತ್ವ ಅರಿತು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗ್ರಂಥ ಬಿಡುಗಡೆಗೊಳಿಸಿದ ಸೋಮಲಿಂಗ ಪಾಟೀಲ, ಪ್ರಕಾಶಕ ಎಸ್.ಎನ್. ಢವಳೇಶ್ವರ, ಗ್ರಂಥ ಸಂಪಾದಕ ಐ.ಕೆ. ಕಮ್ಮಾರ, ಸಹ ಸಂಪಾದಕ ಪ್ರೊ. ಶ್ರೀಶೈಲ ಶಿ. ಬಡಿಗೇರ, ಅಧ್ಯಕ್ಷತೆ ವಹಿಸಿದ್ದ ಜೆ.ಕೆ. ಜಮಾದರ, ಐ.ಬಿ. ಬೆನಕೊಪ್ಪ, ಶ್ರೀನಿವಾಸ ಹುಯಿಲಗೋಳ, ಕೆ.ಎಚ್. ಬೇಲೂರ, ಘಟಿವಾಳಪ್ಪ ಗುಡ್ಡಾಪುರ, ಬಸವರಾಜ ಉಮ್ರಾಣಿ ಹಾಗೂ ಸುಧೀರ ಎಲ್. ಹುಯಿಲಗೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗ, ಅವರ ಜನ್ಮಸ್ಥಳ ಅಡಹಳಟ್ಟಿ ಗ್ರಾಮದ ಗಣ್ಯರು, ಕುಟುಂಬದ ಬಂಧುಗಳು, ಗುರುಹಿರಿಯರು, ಹಿತೈಷಿಗಳು ಹಾಗೂ ಸ್ನೇಹಿತರು ಸನ್ಮಾನಿಸಿ ಗೌರವಿಸಿದರು.

ಪ್ರಕಾಶಕ ಎಸ್.ಎನ್. ಢವಳೇಶ್ವರ ಅವರು ಕಾರ್ಯಕ್ರಮದ ರೂವಾರಿಗಳಾದ ಪ್ರೊ. ಶ್ರೀಶೈಲ ಶಿ. ಬಡಿಗೇರ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಶ್ರೀಮತಿ ರಿಯಾನಾ ಮುಲ್ಲಾ, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಶೋಭಾ ಭಟ್ ಹಾಗೂ ಶ್ರೀಮತಿ ಪುಷ್ಪಲತಾ ಬೆಲೇರಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ರ್ಷಿಣಿ ಕೆ. ಹಾಗೂ ರ್ಧಿಣಿ ಕೆ. ಪ್ರಾರ್ಥನಾ ಗೀತೆ ಹಾಡಿದರು. ಪ್ರಾಚಾರ್ಯ ವಿನಯ್ ಎಸ್. ಚಿಕ್ಕಟ್ಟಿ ಸ್ವಾಗತಿಸಿದರು. ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ವಂದನಾರ್ಪಣೆ ನೆರವೇರಿಸಿದರು.

ಹೆಸರಾಂತ ಗಾಯಕರಾದ ಶ್ರೀನಿವಾಸ ಕುಲಕರ್ಣಿ, ರಾಹುಲ್ ರಾಠೋಡ, ಶಿಲ್ಪಾ ಶಿರಹಟ್ಟಿ ಹಾಗೂ ಜನಪದ ಗಾಯಕ ಬಾಳು ಕೊಣ್ಣೂರ ಅವರ ಸಂಗೀತ ಕಾರ್ಯಕ್ರಮ ಸಭಿಕರ ಮನಸೂರೆಗೊಂಡಿತು. ಗಾಯಕರನ್ನು ಸುಧೀರ ಎಲ್. ಹುಯಿಲಗೋಳ ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb