Home » News » ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

by CityXPress
0 comments

“ಸ್ವಾತಂತ್ರ್ಯವೆಂದರೆ ಪರಕೀಯರ ಆಳ್ವಿಕೆಯಿಂದ ಮುಕ್ತಿಯಾಗುವುದಲ್ಲ; ಜವಾಬ್ದಾರಿಯುತ ನಾಗರಿಕರಾಗಿ ದೇಶವನ್ನು ಕಟ್ಟುವ ಅವಕಾಶ” — ಐ.ಬಿ. ಬೆನಕೊಪ್ಪ

ಗದಗ: ಚಿಕ್ಕಟ್ಟಿ ಶಾಲಾ-ಕಾಲೇಜುಗಳ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ .ಬಿ. ಬೆನಕೊಪ್ಪ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

“ಇಂದು ನಮ್ಮೆಲ್ಲರಿಗೂ ಹೆಮ್ಮೆಯ ಹಾಗೂ ಪವಿತ್ರ ದಿನ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟದ ಫಲವಾಗಿ ಭಾರತ ಸ್ವಾತಂತ್ರ್ಯವನ್ನು ಪಡೆದಿದೆ. ಸ್ವಾತಂತ್ರ್ಯವೆಂದರೆ ಪರಕೀಯರ ಆಳ್ವಿಕೆಯಿಂದ ಮುಕ್ತಿಯಾಗುವುದಲ್ಲ; ಜವಾಬ್ದಾರಿಯುತ ನಾಗರಿಕರಾಗಿ ದೇಶವನ್ನು ಕಟ್ಟುವ ಅವಕಾಶ” ಎಂದು ಅವರು ಹೇಳಿದರು.

ನಮ್ಮ ರಾಷ್ಟ್ರವು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಕೃಷಿ, ಕ್ರೀಡೆ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇಂದಿನ ಭಾರತವು ವಿಶ್ವದ ಮುಂದೆ ಆತ್ಮವಿಶ್ವಾಸದಿಂದ ನಿಂತಿದೆ. ಈ ಸಾಧನೆಯ ಹಿಂದೆ ನಮ್ಮ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ಶಕ್ತಿ ಮತ್ತು ಕೋಟ್ಯಂತರ ಭಾರತೀಯರ ಪರಿಶ್ರಮವಿದೆ ಎಂದು ತಿಳಿಸಿದರು.

banner

“ಪ್ರಿಯ ವಿದ್ಯಾರ್ಥಿಗಳೇ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ನೀವು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆ, ಮಾನವೀಯತೆ ಮತ್ತು ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದುವೇ ರಾಷ್ಟ್ರಕ್ಕೆ ಸಲ್ಲಿಸುವ ನಿಜವಾದ ಗೌರವ. ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು” ಎಂದು ಕರೆ ನೀಡಿದರು.

ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಸ್ವಚ್ಛ ಭಾರತ, ಹಸಿರು ಭಾರತ, ವ್ಯಸನಮುಕ್ತ ಭಾರತ, ಭ್ರಷ್ಟಾಚಾರಮುಕ್ತ ಭಾರತ ಮತ್ತು ಜ್ಞಾನಸಂಪನ್ನ ಭಾರತ ನಿರ್ಮಿಸುವ ಸಂಕಲ್ಪ ಮಾಡೋಣ. ಜಾತಿ, ಧರ್ಮ, ಭಾಷೆ ಮತ್ತು ಪ್ರಾಂತ್ಯದ ಭೇದಗಳನ್ನು ಮೀರಿ “ನಾವೆಲ್ಲರೂ ಭಾರತೀಯರು” ಎಂಬ ಭಾವನೆಯಿಂದ ಬದುಕೋಣ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಅತ್ಯುತ್ತಮ ಮಾರ್ಗವೆಂದರೆ ಅವರು ಕನಸು ಕಂಡ ಶ್ರೇಷ್ಠ ಭಾರತವನ್ನು ನಿರ್ಮಿಸುವುದು. ದೇಶ ಮೊದಲು, ಕರ್ತವ್ಯ ಮೊದಲು ಎಂಬ ಮನೋಭಾವ ನಮ್ಮೆಲ್ಲರಲ್ಲೂ ಮೂಡಲಿ. 80ನೇ ಸ್ವಾತಂತ್ರ್ಯೋತ್ಸವವು ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಉತ್ಸಾಹ, ಹೊಸ ಸಂಕಲ್ಪ ಮತ್ತು ಹೊಸ ಆಶಾವಾದವನ್ನು ಮೂಡಿಸಲಿ ಎಂದು ಹಾರೈಸಿದರು.

ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ

ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್.ವೈ. ಚಿಕ್ಕಟ್ಟಿ ಗುರುಗಳು ಮಾತನಾಡಿ, “ಸ್ವಾತಂತ್ರ್ಯವೆಂದರೆ ಕೇವಲ ಬಂಧನದಿಂದ ಮುಕ್ತಿಯಾಗುವುದಲ್ಲ. ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯೂ ಬರುತ್ತದೆ. ದೇಶದ ಸಂವಿಧಾನವನ್ನು ಗೌರವಿಸುವುದು, ಕಾನೂನು ಪಾಲಿಸುವುದು, ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವುದು, ಪರಿಸರವನ್ನು ಕಾಪಾಡುವುದು ಹಾಗೂ ಸಮಾಜದ ದುರ್ಬಲರ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದರು.

“ನಮ್ಮ ಸಂಸ್ಥೆಯ ಮೂಲ ಉದ್ದೇಶವೇ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು. ಅಂಕಗಳಿಗಾಗಿ ಮಾತ್ರ ಶಿಕ್ಷಣ ಪಡೆಯದೆ, ಜ್ಞಾನ, ವಿವೇಕ, ಮಾನವೀಯತೆ, ಶಿಸ್ತು ಮತ್ತು ದೇಶಪ್ರೇಮ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಾಳೆಯ ಭಾರತದ ಶಿಲ್ಪಿಗಳು. ಅವರ ಪ್ರತಿಭೆ ಮತ್ತು ಚಿಂತನೆಗೆ ಸರಿಯಾದ ದಿಕ್ಕು ದೊರೆತರೆ ನಮ್ಮ ದೇಶ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ” ಎಂದು ಹೇಳಿದರು.

ನಮ್ಮ ದೇಶದ ಅಭಿವೃದ್ಧಿ ಸರ್ಕಾರದ ಮಾತ್ರ ಜವಾಬ್ದಾರಿಯಲ್ಲ. ದೇಶದ ಅಭಿವೃದ್ಧಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟಾಗ, ಮರಗಳನ್ನು ಬೆಳೆಸಿದಾಗ, ಅಗತ್ಯವಿರುವವರಿಗೆ ನೆರವಾದಾಗ — ಅದೇ ನಿಜವಾದ ದೇಶಸೇವೆ ಎಂದು ಅವರು ಹೇಳಿದರು.

“ಉತ್ತಮ ಶಿಕ್ಷಣ ಪಡೆಯೋಣ, ಉತ್ತಮ ಸಂಸ್ಕಾರ ಬೆಳೆಸೋಣ, ದೇಶದ ಪ್ರಗತಿಗೆ ನಮ್ಮ ಕೊಡುಗೆ ನೀಡೋಣ. ಬಲಿಷ್ಠ, ಸಮೃದ್ಧ, ಸುಶಿಕ್ಷಿತ, ಸಂಸ್ಕಾರವಂತ ಮತ್ತು ಸೌಹಾರ್ದಯುತ ಭಾರತವನ್ನು ನಿರ್ಮಿಸುವುದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ನಾವು ಸಲ್ಲಿಸುವ ನಿಜವಾದ ಗೌರವ” ಎಂದರು.

ಗಣ್ಯರಿಗೆ ಸನ್ಮಾನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಕಂದಾಯ ಇಲಾಖೆಯ ನಿವೃತ್ತ ನೌಕರರಾದ ಆರ್.ಬಿ. ಕುಲಕರ್ಣಿ ಅವರ ಸಂಕ್ಷಿಪ್ತ ಪರಿಚಯವನ್ನು ಪ್ರೊ. ಶ್ರೀಶೈಲ ಶಿಬಡಿಗೇರ ಅವರು ಮಾಡಿದರು.

ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಕಂದಾಯ ಇಲಾಖೆಯ ನಿವೃತ್ತ ನೌಕರರಾದ ಆರ್.ಬಿ. ಕುಲಕರ್ಣಿ ಹಾಗೂ ಮುಖ್ಯ ಅತಿಥಿಗಳಾಗಿ ಧ್ವಜಾರೋಹಣ ನೆರವೇರಿಸಿದ ಗದಗ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ .ಬಿ. ಬೆನಕೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿನಯ ಚಿಕ್ಕಟ್ಟಿ ಪಿಯು ಕಾಲೇಜಿನ ಪ್ರಾಚಾರ್ಯರಾದ ವಿನಯ ಎಸ್. ಚಿಕ್ಕಟ್ಟಿ, ಬಿಪಿನ್ ಚಿಕ್ಕಟ್ಟಿ ಬಿಸಿಎ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಸಿ.ಬಿ.ಎಸ್.. ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿಪಿನ್ ಚಿಕ್ಕಟ್ಟಿ, ವಿನಯ ಚಿಕ್ಕಟ್ಟಿ .ಸಿ.ಎಸ್.. ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಸಿ.ಬಿ.ಎಸ್.. ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಶೋಭಾ ಭಟ್ ಹಾಗೂ ಶ್ರೀಮತಿ ಪುಷ್ಪಲತಾ ಬೆಲೇರಿ ಸೇರಿದಂತೆ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ದೇಶಭಕ್ತಿ ಗೀತೆಗಳಿಗೆ ಮಕ್ಕಳ ನೃತ್ಯ

ವಿನಯ ಚಿಕ್ಕಟ್ಟಿ ಐ.ಸಿ.ಎಸ್.ಇ. ಶಾಲೆಯ ಶಿಕ್ಷಕಿ ಬೃಂದಾ ಬೆಲ್ಲದ ಕಾರ್ಯಕ್ರಮ ನಿರೂಪಿಸಿದರು. ಐ.ಸಿ.ಎಸ್.ಇ. ಶಾಲೆಯ 10ನೇ ತರಗತಿ ವಿದ್ಯಾರ್ಥಿ ತನಿಷ್ ಗಾದಿಯಾ ಸ್ವಾಗತ ಕೋರಿದನು. ಸಿ.ಬಿ.ಎಸ್.ಇ. ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸನತ್ ಆರ್.ಡಿ. ವಂದನಾರ್ಪಣೆಗೈದನು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೋಡುಗರ ಕಣ್ಮನ ಸೆಳೆಯುವಂತೆ ನೃತ್ಯ ಪ್ರದರ್ಶನ ಮಾಡಿದರು. ಶಾಲಾ ಬಸ್ ಚಾಲಕರಾದ ಶೇಖಪ್ಪ ಅಣ್ಣಿಗೇರಿ ಅವರು ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb