ಕಾನೂನು ಸುವ್ಯವಸ್ಥೆ, ರಸ್ತೆ ಸುರಕ್ಷತೆಗೆ ಆದ್ಯತೆ; ಸಾರ್ವಜನಿಕರು ಮುಕ್ತವಾಗಿ ಸಮಸ್ಯೆ ಹಂಚಿಕೊಳ್ಳಲು ಮನವಿ
ಗದಗ, ಆ.30: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು, ಮಾದಕ ವಸ್ತುಗಳ ಜಾಲವನ್ನು ನಿಯಂತ್ರಿಸುವುದು ಹಾಗೂ ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸುವುದು ತಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮಿಥುನ್ ಎಚ್.ಎನ್. ಹೇಳಿದರು.
ವರದಿ: ಮಹಲಿಂಗೇಶ ಹಿರೇಮಠ. ಗದಗ
ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಮಿಥುನ್ ಎಚ್.ಎನ್. ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪೊಲೀಸ್ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ತಮ್ಮ ಕಾರ್ಯಯೋಜನೆಗಳನ್ನು ವಿವರಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ:
ಗದಗ ಜಿಲ್ಲೆ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಐತಿಹಾಸಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಜಿಲ್ಲೆಯ ವಾಸ್ತವ ಸ್ಥಿತಿ ಹಾಗೂ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯನ್ನು ನೇರವಾಗಿ ಅರಿಯುವ ಉದ್ದೇಶದಿಂದ ಅಧಿಕಾರ ಸ್ವೀಕರಿಸಿದ ಬಳಿಕದ ಮೊದಲ ವಾರದಲ್ಲೇ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಆಯಾ ಪ್ರದೇಶಗಳಲ್ಲಿನ ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಗಳು ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಿಥುನ್ ಎಚ್.ಎನ್. ಅವರು ದಾವಣಗೆರೆ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಪೊಲೀಸ್ ಸೇವೆ ಆರಂಭಿಸಿದ್ದರು. ಬಳಿಕ ಮಂಗಳೂರಿನಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದರು.
500ಕ್ಕೂ ಹೆಚ್ಚು ರೌಡಿಗಳ ಮೇಲೆ ನಿಗಾ:
ಜಿಲ್ಲೆಯಲ್ಲಿ ಸುಮಾರು 500 ರೌಡಿ ಶೀಟರ್ಗಳಿರುವ ಮಾಹಿತಿ ಲಭ್ಯವಾಗಿದೆ. ಸಮಾಜದ ಶಾಂತಿ ಕದಡುವುದು ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ರೌಡಿಗಳ ಮೇಲೆ ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸಲಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಸಮಾಜದ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಯ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ. ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದರು.
ಹಬ್ಬಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್:
ಮುಂದಿನ ದಿನಗಳಲ್ಲಿ ಸಾಲು ಸಾಲಾಗಿ ವಿವಿಧ ಹಬ್ಬಗಳು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು.
ಹಬ್ಬಗಳ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಆದ್ಯತೆ ನೀಡಲಿದೆ. ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಮನವಿ ಮಾಡಿದರು.
ಗಾಂಜಾ ಜಾಲದ ವಿರುದ್ಧ ಕಾರ್ಯಾಚರಣೆ:
ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಟದ ಹಿಂದೆ ಇರುವ ಜಾಲದ ಕುರಿತು ಮಾಹಿತಿ ಸಂಗ್ರಹಿಸಿ, ಅದರ ಮೂಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು.
ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಬಳಕೆಯಿಂದ ಯುವಜನತೆ ಸೇರಿದಂತೆ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಇಂತಹ ಚಟುವಟಿಕೆಗಳಿಗೆ ಯಾವುದೇ ರೀತಿಯ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಸೈಬರ್ ವಂಚನೆ: ತಕ್ಷಣ 1930ಕ್ಕೆ ಕರೆ ಮಾಡಿ:
ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅಪರಿಚಿತ ವ್ಯಕ್ತಿಗಳಿಗೆ ಬ್ಯಾಂಕ್ ಖಾತೆ ವಿವರ, ಎಟಿಎಂ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ, ಒಟಿಪಿ ಸೇರಿದಂತೆ ಯಾವುದೇ ಸೂಕ್ಷ್ಮ ಮಾಹಿತಿಯನ್ನು ನೀಡಬಾರದು ಎಂದು ಎಸ್ಪಿ ಸಲಹೆ ನೀಡಿದರು.
ಒಂದು ವೇಳೆ ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡರೆ ವಿಳಂಬ ಮಾಡದೆ ತಕ್ಷಣವೇ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬೇಕು. ವಂಚನೆಯಾದ ಬಳಿಕ ಆರಂಭಿಕ ಕೆಲವು ಗಂಟೆಗಳಲ್ಲೇ ದೂರು ನೀಡಿದರೆ ಹಣದ ವಹಿವಾಟನ್ನು ತಡೆಹಿಡಿಯುವ ಅಥವಾ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸಾರ್ವಜನಿಕರು ಯಾವುದೇ ಮುಜುಗರ ಅಥವಾ ಭಯಪಡದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಅಪಘಾತ ತಡೆಗೆ ವಿಶೇಷ ಗಮನ:
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಅಪಘಾತಗಳು ಹೆಚ್ಚಾಗಿ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಅಂತಹ ಪ್ರದೇಶಗಳ ಕುರಿತು ಪರಿಶೀಲನೆ ನಡೆಸಲಾಗುವುದು. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದರು.
ಅಪಘಾತಗಳಿಗೆ ಕಾರಣವಾಗುವ ರಸ್ತೆ ವಿನ್ಯಾಸ, ಸೂಚನಾ ಫಲಕಗಳ ಕೊರತೆ, ಬೆಳಕಿನ ವ್ಯವಸ್ಥೆ ಸೇರಿದಂತೆ ವಿವಿಧ ಅಂಶಗಳ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಉದ್ದೇಶವಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ:
ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರಲು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಅಪರಾಧ ಚಟುವಟಿಕೆಗಳ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಪೊಲೀಸರ ಗಮನಕ್ಕೆ ತರಬೇಕು. ಅಂತಹ ಮಾಹಿತಿಯನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಂತಿ, ಸುರಕ್ಷತೆಗೆ ಆದ್ಯತೆ:
ಗದಗ ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಹಾಗೂ ಸುರಕ್ಷತೆಗೆ ಧಕ್ಕೆಯಾಗದಂತೆ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಅಪರಾಧ ನಿಯಂತ್ರಣದ ಜತೆಗೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಮಿಥುನ್ ಎಚ್.ಎನ್. ಹೇಳಿದರು.
