Home » News » ತಮ್ಮ ನೋಡಿದ್ದ ಕನ್ನೆಯ ಮೇಲೆ ಅಣ್ಣನ ಕಣ್ಣು..! ಕನ್ನೆಯ ವಿಚಾರಕ್ಕೆ ರಕ್ತಪಾತ: ಅಣ್ಣನಿಂದಲೇ ತಮ್ಮನ ಕ್ರೂರ ಹತ್ಯೆ – 25 ಕೆಜಿ ಕಲ್ಲು ಎತ್ತಿಹಾಕಿ ಕೊಲೆ..!

ತಮ್ಮ ನೋಡಿದ್ದ ಕನ್ನೆಯ ಮೇಲೆ ಅಣ್ಣನ ಕಣ್ಣು..! ಕನ್ನೆಯ ವಿಚಾರಕ್ಕೆ ರಕ್ತಪಾತ: ಅಣ್ಣನಿಂದಲೇ ತಮ್ಮನ ಕ್ರೂರ ಹತ್ಯೆ – 25 ಕೆಜಿ ಕಲ್ಲು ಎತ್ತಿಹಾಕಿ ಕೊಲೆ..!

by CityXPress
0 comments

ಗದಗ: ಮದುವೆ ವಿಚಾರದಿಂದ ಹುಟ್ಟಿದ ಅಸೂಯೆ, ಮನಸ್ತಾಪ ಮತ್ತು ಅಂತರಂಗದ ವೈಮನಸ್ಸು ಕೊನೆಗೂ ಸಹೋದರರ ನಡುವೆಯೇ ರಕ್ತಪಾತಕ್ಕೆ ಕಾರಣವಾದ ದಾರುಣ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ರಸ್ತೆ ಸಮೀಪದ ಜಮೀನಿನ ಕುರಿದಡ್ಡಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ವರದಿ: ಮಹಲಿಂಗೇಶ ಹಿರೇಮಠ.ಗದಗ

ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮುಳಂಗಿ ಗ್ರಾಮದವರಾದ ಸಹೋದರರಾದ ಫಕ್ಕೀರಪ್ಪ ಈರಪ್ಪ ಕುರುಗಿನಕೊಪ್ಪ (19) ಮತ್ತು ಅಶೋಕ ಈರಪ್ಪ ಕುರುಗಿನಕೊಪ್ಪ (21) ಕಳೆದ ಕೆಲ ದಿನಗಳಿಂದ ಕುರಿಮೇಯಿಸುವ ಕೆಲಸಕ್ಕಾಗಿ ಹಿರೇಕೊಪ್ಪ ಗ್ರಾಮದ ಸಮೀಪದ ಜಮೀನಿನಲ್ಲಿ ತಂಗಿದ್ದರು. ಸರಳ ಜೀವನ ನಡೆಸುತ್ತಿದ್ದ ಈ ಸಹೋದರರ ನಡುವೆ ಮದುವೆ ವಿಚಾರವೇ ಭೀಕರ ದುರಂತಕ್ಕೆ ಕಾರಣವಾಗಿದೆ.

ತಮ್ಮ ಫಕ್ಕೀರಪ್ಪನಿಗೆ ಕುಟುಂಬದವರು ಒಳ್ಳೆಯ ಹುಡುಗಿಯನ್ನು ನೋಡಿದ್ದರು. ಆದರೆ ಅದೇ ಹುಡುಗಿಯ ಮೇಲೆ ಅಣ್ಣ ಅಶೋಕನಿಗೂ ಆಸಕ್ತಿ ಮೂಡಿದ್ದಾಗಿ ತಿಳಿದುಬಂದಿದೆ. ಈ ವಿಚಾರವೇ ಇಬ್ಬರ ನಡುವೆ ದಿನದಿಂದ ದಿನಕ್ಕೆ ಮನಸ್ತಾಪ ಹೆಚ್ಚಿಸಿತು. ಸಣ್ಣಸಣ್ಣ ಜಗಳಗಳು ಕ್ರಮೇಣ ಗಂಭೀರ ಸ್ವರೂಪ ಪಡೆದು, ಇಬ್ಬರ ನಡುವೆ ಅಸಹ್ಯಕರ ವಾಗ್ವಾದಗಳು ನಡೆಯುತ್ತಿದ್ದವು.

banner

ಇದಕ್ಕೆ ಮತ್ತಷ್ಟು ಇಂಧನ ಹಾಕಿದ ಸಂಗತಿ ಏನೆಂದರೆ, ಅಣ್ಣ ಅಶೋಕನಿಗೂ ಬೇರೆ ಹುಡುಗಿಯನ್ನು ನೋಡಲಾಗಿತ್ತು. ಆದರೆ ಆ ಹುಡುಗಿಯ ಹೆಸರು ಪೋಕ್ಸೋ ಪ್ರಕರಣದಲ್ಲಿ ಕೇಳಿಬಂದಿದ್ದರಿಂದ, “ತಮ್ಮನಿಗೆ ಒಳ್ಳೆಯ ಹುಡುಗಿ, ನನಗೆ ಪ್ರಕರಣದಲ್ಲಿ ಸಿಲುಕಿರುವ ಹುಡುಗಿ” ಎಂಬ ಅಸಮಾಧಾನ ಅಶೋಕನ ಮನಸ್ಸಿನಲ್ಲಿ ಗಾಢವಾಗಿ ಬೇರೂರಿತ್ತು. ಈ ಅಸಮಾಧಾನವೇ ಕ್ರಮೇಣ ಅಸೂಯೆಗೆ, ಅಸೂಯೆ ವೈಮನಸ್ಸಿಗೆ ತಿರುಗಿ, ಕೊನೆಗೆ ಕ್ರೂರ ನಿರ್ಧಾರಕ್ಕೆ ದಾರಿ ಮಾಡಿಕೊಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಇದೇ ವಿಷಯವಾಗಿ ಇಬ್ಬರ ನಡುವೆ ಮತ್ತೆ ಭಾರೀ ಜಗಳ ನಡೆದಿದೆ. ಮಾತಿನ ಚಕಮಕಿ ತಾರಕಕ್ಕೇರಿದ ವೇಳೆ, ಕೋಪೋದ್ರಿಕ್ತನಾದ ಅಶೋಕ ತನ್ನ ತಮ್ಮ ಫಕ್ಕೀರಪ್ಪನ ಮೇಲೆ ಸುಮಾರು 25 ಕೆಜಿ ತೂಕದ ಕಲ್ಲು ಎತ್ತಿ ಹಾಕಿ ಅಮಾನುಷವಾಗಿ ಹತ್ಯೆಗೈದಿದ್ದಾನೆ. ಭೀಕರ ದಾಳಿಯ ಪರಿಣಾಮವಾಗಿ ಫಕ್ಕೀರಪ್ಪ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಘಟನೆಯ ನಂತರ, ಆರೋಪಿ ಅಶೋಕ ತನ್ನದೇ ಸಹೋದರನನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಹೃದಯವಿದ್ರಾವಕ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಕುಟುಂಬ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಮದುವೆಗಾಗಿ ನೋಡಿದ ಹುಡುಗಿಯ ವಿಚಾರ, ಪೋಕ್ಸೋ ಪ್ರಕರಣದ ಹಿನ್ನೆಲೆ, ಹಾಗೂ ಸಹೋದರರ ನಡುವಿನ ಅಸೂಯೆ—ಈ ಎಲ್ಲಾ ಅಂಶಗಳು ಸೇರಿ ಈ ದಾರುಣ ಘಟನೆಗೆ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb