ಗದಗ: ಗಲ್ಫ್ ಯುದ್ಧದಿಂದ ರಾಜ್ಯದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಕೊರತೆಯಿಂದ ಜನತೆ ಕಂಗಾಲಾಗಿರುವ ಸಂದರ್ಭದಲ್ಲೇ ಗದಗ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವರದಿ: ಮಹಲಿಂಗೇಶ ಹಿರೇಮಠ.ಗದಗ
ನಗರದ ಕಳಸಾಪುರ ರಸ್ತೆ ಸಮೀಪದ ನಿರ್ಜನ ಪ್ರದೇಶದಲ್ಲಿ ವಾರಸುದಾರರಿಲ್ಲದ ಹತ್ತು ಗ್ಯಾಸ್ ಸಿಲಿಂಡರ್‌ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 11ರಂದು ನಡೆದ ಈ ದಾಳಿ ತಡವಾಗಿ ಬೆಳಕಿಗೆ ಬಂದಿದ್ದು, ಆಹಾರ ಇಲಾಖೆ ಉಪನಿರ್ದೇಶಕರಾದ ಎನ್.ಬಿ. ದೊಡ್ಡಮನಿ ಹಾಗೂ ನಿರೀಕ್ಷಕರಾದ ಜೆ.ಬಿ. ಅಮಾತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅನುಮಾನಾಸ್ಪದವಾಗಿ ಇಡಲಾಗಿದ್ದ ಸಿಲಿಂಡರ್‌ಗಳನ್ನು ಪರಿಶೀಲಿಸಿ, ಅವುಗಳನ್ನು ವಶಕ್ಕೆ ಪಡೆದಿದ್ದಾರೆ.ಪತ್ತೆಯಾದ ಸಿಲಿಂಡರ್‌ಗಳು ಭಾರತ್ ಗ್ಯಾಸ್ ಕಂಪನಿಗೆ ಸೇರಿದವು ಎಂದು ತಿಳಿದುಬಂದಿದೆ. ಆದರೆ ಗದಗದ ಭಾರತ್ ಗ್ಯಾಸ್ ಏಜೆನ್ಸಿದಾರರು, “ಈ ಸಿಲಿಂಡರ್‌ಗಳು ನಮ್ಮ ವ್ಯಾಪ್ತಿಗೆ ಸಂಬಂಧಪಟ್ಟವುಗಳಲ್ಲ” ಎಂದು ಸ್ಪಷ್ಟಪಡಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆಯನ್ನು ತಂದೊಡ್ಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದರಿಂದಾಗಿ ಈ ಸಿಲಿಂಡರ್‌ಗಳು ಯಾರಿಗೆ ಸೇರಿವೆ, ಯಾವ ಉದ್ದೇಶಕ್ಕಾಗಿ ಸಂಗ್ರಹಿಸಿಡಲಾಗಿತ್ತು ಎಂಬ ಪ್ರಶ್ನೆಗಳು ಉದ್ಭವಿಸಿವೆ.ಹಾಗೂ ಅಧಿಕಾರಿಗಳಿಗೆ ತಲೆನೋವಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಗದಗ ಹಾಗೂ ಬೆಟಗೇರಿ ಅವಳಿ ನಗರಗಳಲ್ಲಿ ಆಟೋ ರಿಕ್ಷಾಗಳಿಗೆ ಅಕ್ರಮವಾಗಿ ಗ್ಯಾಸ್ ರಿಫಿಲ್ ಮಾಡುವ ದಂಧೆಗೆ ಈ ಸಿಲಿಂಡರ್‌ಗಳನ್ನು ಬಳಸಲು ಸಂಗ್ರಹಿಸಿಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ನಗರದಲ್ಲಿ ಇತ್ತೀಚೆಗೆ ಗ್ಯಾಸ್ ಕೊರತೆ ಹೆಚ್ಚಾಗಿರುವ ಸಂದರ್ಭದಲ್ಲೇ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸಿಲಿಂಡರ್ ಪತ್ತೆಯಾದ ಸ್ಥಳ ನಿರ್ಜನವಾಗಿರುವುದರಿಂದ ಸಿಲಿಂಡರ್‌ಗಳನ್ನು ಅಕ್ರಮ ಗ್ಯಾಸ್ ರಿಫಿಲ್ ದಂಧೆಗೆ ಗುಪ್ತವಾಗಿ ಸಾಗಾಟ ಮಾಡುತ್ತಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸದ್ಯಕ್ಕೆ ಸಿಲಿಂಡರ್‌ಗಳ ನಿಜವಾದ ಮಾಲೀಕರು ಯಾರು ಎಂಬುದು ಪತ್ತೆಯಾಗಿಲ್ಲ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ತನಿಖೆ ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ಸಾಮಾನ್ಯ ಜನತೆಗೆ ಗ್ಯಾಸ್ ಸಿಗದೆ ಸಂಕಷ್ಟ ಎದುರಾಗುತ್ತಿರುವ ಸಂದರ್ಭದಲ್ಲಿ, ಮತ್ತೊಂದೆಡೆ ಗ್ಯಾಸ್ ಸಿಲಿಂಡರ್‌ಗಳು ಅಕ್ರಮವಾಗಿ ಸಂಗ್ರಹವಾಗಿರುವುದು ಮತ್ತು ಅವುಗಳಿಗೆ ವಾರಸುದಾರರೇ ಇಲ್ಲದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಅವಳಿ ನಗರದಲ್ಲಿ ಗ್ಯಾಸ್ ರಿಫಿಲ್ ದಂಧೆ ವ್ಯಾಪಕವಾಗಿ ಎಗ್ಗಿಲ್ಲದೇ ನಡೆಯುತ್ತಿದ್ದು, ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಡಿವಾಣ ಹಾಕಬೇಕಾಗಿದೆ.
ಸದ್ಯ ವಾರಸುದಾರರಿಲ್ಲದ ಸಿಲಿಂಡರ್ ಗಳು ಯಾರಿಗೆ ಸೇರಿದ್ದು? ನಿರ್ಜನ ಪ್ರದೇಶದಲ್ಲಿ ಯಾಕೆ ಇರಿಸಲಾಗಿತ್ತು? ಹಾಗೂ ಎಲ್ಲಿಗೆ ಸಾಗಿಸಕಲಾಗುತ್ತಿತ್ತು ಎನ್ನುವದು ತನಿಖೆ ಬಳಿಕವಷ್ಟೇ ಈ ಪ್ರಕರಣದ ಸತ್ಯಾಸತ್ಯತೆ ಬಯಲಾಗುವ ನಿರೀಕ್ಷೆಯಿದೆ.
